ಬುಲ್ಲಿ ಬಾಯ್‌ ಪ್ರಕರಣ: ಕ್ರಮಕ್ಕೆ ಆಗ್ರಹಿಸಿ ಸಿಜೆಐ ಎನ್‌ ವಿ ರಮಣ ಅವರಿಗೆ ಪತ್ರ ಬರೆದ ಮಹಿಳಾ ವಕೀಲೆಯರು

ಮುಸ್ಲಿಮ್‌ ಸಮದಾಯದ ಮಾರಣಹೋಮ ನಡೆಸುವಂತೆ ಸಾರ್ವಜನಿಕರಿಗೆ ಕರೆ ನೀಡಿರುವುದು ಭಾರತದ ಮುಸ್ಲಿಮ್‌ ಸಮುದಾಯದ ಮಹಿಳೆಯರಲ್ಲಿ ಸುಳ್ಳಿ ಡೀಲ್ಸ್‌ನಂತಹ ಅಪ್ಲಿಕೇಶನ್‌ಗಳು ಭಾರಿ ಅಭದ್ರತೆ ಸೃಷ್ಟಿಸಿವೆ ಎಂದು ಮನವಿಯಲ್ಲಿ ಉಲ್ಲೇಖ.
Bulli Bai deals issue with SC

Bulli Bai deals issue with SC

Published on

ಬುಲ್ಲಿ ಬಾಯ್‌ ಅಪ್ಲಿಕೇಶನ್‌ನಲ್ಲಿ 100ಕ್ಕೂ ಗೌರವಾರ್ಹ ಮುಸ್ಲಿಮ್‌ ಮಹಿಳೆಯರ ಮಾಹಿತಿಯನ್ನು ಹರಿಯಬಿಟ್ಟು ಅವರ ಹರಾಜಿನಲ್ಲಿ ಭಾಗವಹಿಸುವಂತೆ ಬಳಕೆದಾರರಿಗೆ ಕರೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ದೆಹಲಿ ಮಹಿಳಾ ವಕೀಲರ ಒಕ್ಕೂಟವು (ಡಿಎಚ್‌ಸಿಡಬ್ಲುಎಲ್‌ಎಫ್‌) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಪತ್ರ ಬರೆದಿದೆ.

“ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಭದ್ರತೆ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಇದಕ್ಕೆ ಸಂಬಂಧಿಸಿದ ಲೇಖನಗಳನ್ನು ಲಗತ್ತಿಸಲಾಗಿದ್ದು, ಇದನ್ನು ಪರಿಣಿಸುವಂತೆ ಸಿಜೆಐ ಮತ್ತು ಅವರ ಸಹ ನ್ಯಾಯಾಧೀಶರಿಗೆ ಮನವಿ ಮಾಡುತ್ತೇವೆ. ಭಾರತದ ಸಂವಿಧಾನದ 21ನೇ ವಿಧಿಯ ಪ್ರಕಾರ ಘನತೆ ಮತ್ತು ಸುರಕ್ಷತೆಯೊಂದಿಗೆ ಬದುಕುವ ಅಲ್ಪಸಂಖ್ಯಾತ ಸಮುದಾಯದ ಮೂಲಭೂತ ಹಕ್ಕು ಮತ್ತು ಕಾನೂನು ಜಾರಿ ಸಂಸ್ಥೆಗಳ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಮಾರ್ಗಸೂಚಿ ರೂಪಿಸಲು ಮತ್ತು ಈ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಕ್ರಮಕೈಗೊಳ್ಳಬೇಕು” ಎಂದು 77 ಮಹಿಳಾ ವಕೀಲೆಯರು ಸಹಿ ಮಾಡಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.

ಮುಸ್ಲಿಮ್‌ ಸಮದಾಯದ ಮಾರಣಹೋಮ ನಡೆಸುವಂತೆ ಸಾರ್ವಜನಿಕರಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸುಲ್ಲಿ ಡೀಲ್‌ನಂತಹ ಅಪ್ಲಿಕೇಶನ್‌ಗಳು ಮುಸ್ಲಿಂ ಮಹಿಳೆಯರಲ್ಲಿ ಭಾರಿ ಅಭದ್ರತೆಯನ್ನು ಸೃಷ್ಟಿಸಿವೆ ಎಂದು ಪತ್ರದಲ್ಲಿ ಹೇಳಲಾಗಿದೆ. “ಸುಲ್ಲಿ ಡೀಲ್ಸ್‌ ಪ್ರಕರಣದಲ್ಲಿ ಯಾರೊಬ್ಬರಿಗೂ ಶಿಕ್ಷೆ ವಿಧಿಸದ ಹಿನ್ನೆಲೆಯಲ್ಲಿ ಬುಲ್ಲಿ ಡೀಲ್ಸ್‌ ಘಟನೆ ನಡೆದಿದೆ. ಹಿಂದೆ ಸುಲ್ಲಿ ಡೀಲ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದ್ದರೂ ಯಾರೊಬ್ಬರನ್ನೂ ಬಂಧಿಸಿರಲಾಗಿಲ್ಲ. ತನಿಖೆಯೂ ನಡೆದಿರಲಿಲ್ಲ” ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರನ್ನು ನಿಕೃಷ್ಣರೀತಿಯಲ್ಲಿ ಅಮಾನವೀಯವಾಗಿ ಚಿತ್ರಿಸುವುದನ್ನು ತಡೆಯುವಂತೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. “ಅಲ್ಪಸಂಖ್ಯಾತರನ್ನು ಪ್ರಾಣಿಗಳು ಮತ್ತು ರೋಗಾಣುಗಳಿಗೆ ಹೋಲಿಸುವುದು, ಭಯಭೀತಿ ಸೃಷ್ಟಿಸುವ ಏಕರೂಪ ಗ್ರಹೀತಗಳ ಮೂಲಕ ನಕಲಿ ಸುದ್ದಿಗಳನ್ನು ಹರಡುವುದು, ನಿರ್ದಿಷ್ಟ ಸಮುದಾಯಗಳಿಗೆ ಕಿರುಕುಳ ಅಥವಾ ಬಹಿಷ್ಕಾರ ಹಾಕಲು ಇತರರನ್ನು ಪ್ರೇರೇಪಿಸುವುದು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನರಮೇಧಕ್ಕೆ ಕರೆ ನೀಡುವುದು ಮತ್ತು ಪ್ರಾಣಿಗಳ ರೀತಿಯಲ್ಲಿ ಮನುಷ್ಯರನ್ನು ಹರಾಜು ಹಾಕುವುದಕ್ಕೆ ನಿಷೇಧಿಸಲು ನಿರ್ದೇಶಿಸಬೇಕು” ಎಂದು ಮನವಿ ಮಾಡಲಾಗಿದೆ.

Also Read
ಬುಲ್ಲಿ ಬಾಯ್ ಪ್ರಕರಣ: ಆರೋಪಿ ವಿಶಾಲ್ ಕುಮಾರ್‌ನನ್ನು ಜನವರಿ 10ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದ ಮುಂಬೈ ನ್ಯಾಯಾಲಯ

ಸುಲ್ಲಿ ಡೀಲ್ಸ್‌ ಮತ್ತು ಬುಲ್ಲಿ ಡೀಲ್ಸ್‌ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನಡೆಸಿರುವ ತನಿಖೆಯ ಮೇಲೆ ಸುಪ್ರೀಂಕೋರ್ಟ್‌ ಮೇಲ್ವಿಚಾರಣೆ ಇರಿಸಬೇಕು ಎಂದು ಮನವಿ ಮಾಡಲಾಗಿದೆ.

ಸದರಿ ಅಪ್ಲಿಕೇಶನ್‌ಗಳಿಗೆ ಬಂಡವಾಳ ಹೂಡಿಕೆಗೆ ಹಣ ಹರಿದು ಬಂದಿರುವುದನ್ನು, ಹಣದ ಮೂಲವನ್ನು, ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸಿದವರಿಗೆ ನಿರ್ದೇಶನಗಳನ್ನು ನೀಡುತ್ತಿದ್ದವರನ್ನು, ಮುಸ್ಲಿಮ್‌ ಮಹಿಳೆಯರ ಮೇಲೆ ಕಾನೂನುಬಾಹಿರವಾಗಿ ನಿಗಾ ಇರಿಸುವ ಮೂಲಕ ಅವರ ಹರಾಜಿಗೆ ಕರೆ ನೀಡಿರುವ ಹಿಂದಿನ ಶಕ್ತಿಗಳನ್ನು ಪತ್ತೆ ಹಚ್ಚಬೇಕು. ಅಲ್ಪಸಂಖ್ಯಾತರನ್ನು ನಿಂದನೆಗೆ ಗುರಿಯಾಗಿಸುವ ಅವರ ವಿರುದ್ಧ ನಕಲಿ ಸುದ್ದಿ ಪ್ರಕಟಿಸುವ ಹಾಗೂ ಅಲ್ಪಸಂಖ್ಯಾತರ ನರಮೇಧಕ್ಕೆ ಕರೆ ನೀಡುವುದನ್ನು ನಿಯಂತ್ರಿಸುವ ಸಂಬಂಧ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com