ಶವ ಸಂಸ್ಕಾರಕ್ಕೆ ಜಾಗ: ಹೈಕೋರ್ಟ್‌ಗೆ ಸಮಗ್ರ ಮಾಹಿತಿ ಸಲ್ಲಿಸಿದ ಸರ್ಕಾರ

ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,099 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗಿದ್ದು, ಇನ್ನೂ 1,454 ಗ್ರಾಮಗಳಿಗೆ ಸೌಲಭ್ಯ ಒದಗಿಸಬೇಕಾಗಿದೆ. 1,006 ಗ್ರಾಮಗಳು ಬೇಚರಾಕ್ ಗ್ರಾಮಗಳಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
Karnataka High Court
Karnataka High Court

ಶವ ಸಂಸ್ಕಾರಕ್ಕೆ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ಮಶಾನಕ್ಕೆ ಅಗತ್ಯ ಜಮೀನು ಒದಗಿಸಿರುವ ಬಗ್ಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಒದಗಿಸಿದೆ.

ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರದ ಪರ ವಕೀಲರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸಲ್ಲಿಸಿರುವ ಸಮಗ್ರ ಮಾಹಿತಿಯನ್ನು ಪೀಠಕ್ಕೆ ಒದಗಿಸಿದರು. ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,099 ಗ್ರಾಮಗಳಿಗೆ ಜಾಗ ಒದಗಿಸಲಾಗಿದ್ದು, ಇನ್ನೂ 1,454 ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಒದಗಿಸಬೇಕಾಗಿದೆ. 1,006 ಗ್ರಾಮಗಳು ಬೇಚರಾಕ್ ಗ್ರಾಮಗಳಾಗಿವೆ ಎಂದು ಸರ್ಕಾರ ನೀಡಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ.


ಇದನ್ನು ದಾಖಲಿಸಿಕೊಂಡ ಪೀಠವು ಸರ್ಕಾರ ಒದಗಿಸಿರುವ ಮಾಹಿತಿಯನ್ನು ಪರಿಶೀಲಿಸಿ ವಾಸ್ತವ ಸಂಗತಿ ಏನಿದೆ ಎಂದು ಹೋಲಿಕೆ ಮಾಡಿ ಎರಡು ವಾರಗಳಲ್ಲಿ ವರದಿ ನೀಡುವಂತೆ ಅರ್ಜಿದಾರ ಮಹಮ್ಮದ್ ಇಕ್ಬಾಲ್ ಅವರಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಬೆಂಗಳೂರು ನಗರ ಜಿಲ್ಲೆಯ 813 ಗ್ರಾಮಗಳ ಪೈಕಿ 760 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒಗದಿಸಲಾಗಿದೆ. ಬಾಕಿ 53 ಗ್ರಾಮಗಳ ಪೈಕಿ 28 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇಲ್ಲದೇ ಇರುವುದರಿಂದ ಪಕ್ಕದ ಗ್ರಾಮದ ಸ್ಮಶಾನಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. 23 ಗ್ರಾಮಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವುದರಿಂದ ಚಿತಾಗಾರಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಉಳಿದಂತೆ ಎರಡು ಗ್ರಾಮಗಳು ಹಿಂದಿನಿಂದಲೂ ಪಕ್ಕದ ಗ್ರಾಮದ ಸ್ಮಶಾನವನ್ನು ಉಪಯೋಗಿಸಿರುತ್ತಾರೆ ಎಂದು ಸರ್ಕಾರ ಮಾಹಿತಿ ಒದಗಿಸಿದೆ.

ಹಳ್ಳದ ದಂಡೆ, ಖಾಸಗಿ ಜಮೀನು ಬಳಕೆ: ಬಾಗಲಕೋಟೆ ಜಿಲ್ಲೆಯ 593 ಗ್ರಾಮಗಳ ಪೈಕಿ 521 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒಗದಿಸಲಾಗಿದೆ. 72 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದ್ದು, ಅದರಲ್ಲಿ 4 ತಾಂಡಾಗಳು ಮತ್ತು 30 ಗ್ರಾಮಗಳಿಗೆ ಸ್ಮಶಾನಕ್ಕಾಗಿ ಹಳ್ಳದ ದಂಡೆ, ಖಾಸಗಿ ಜಮೀನು ಮತ್ತು ಅರಣ್ಯ ಜಮೀನು ಉಪಯೋಗಿಸುತ್ತಿದ್ದು, 38 ಗ್ರಾಮಗಳಿಗೆ ಸ್ಮಶಾನದ ಅವಶ್ಯಕತೆ ಇರುತ್ತದೆ ಎಂದು ಸರ್ಕಾರ ಹೇಳಿದೆ.

Also Read
ಅಧಿಕಾರಿಗಳಿಗೆ, ಸರ್ಕಾರಕ್ಕೆ ನ್ಯಾಯಾಲಯದ ಆದೇಶದ ಮೇಲೆ ಗೌರವವಿಲ್ಲ, ಹಾಗಾದರೆ ನ್ಯಾಯಾಲಯ ಏತಕ್ಕೆ? ನ್ಯಾ. ವೀರಪ್ಪ

ಟೆಂಪೊದಲ್ಲಿ ದಾಖಲೆ ತಂದ ಸರ್ಕಾರ!: ಸ್ಮಶಾನ ಸೌಲಭ್ಯ ಒದಗಿಸಿರುವ ಬಗ್ಗೆ ಗ್ರಾಮವಾರು ವಿವರ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ, ಸ್ಮಶಾನ ಸೌಲಭ್ಯ ಒದಗಿಸಿರುವ 27,099 ಗ್ರಾಮಗಳಲ್ಲಿ ಸ್ಮಶಾನ ಜಾಗ ಮಂಜೂರು ಮಾಡಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದ ಪ್ರತಿಗಳು, ಆರ್‌ಟಿಸಿ ಮತ್ತಿತರರ ಕಂದಾಯ ದಾಖಲೆಗಳು ಸೇರಿದಂತೆ 31 ಜಿಲ್ಲೆಗಳ 27 ಸಾವಿರಕ್ಕೂ ಹೆಚ್ಚು ದಾಖಲೆಗಳ ದೊಡ್ಡ ಬಂಡಲ್‌ಗಳನ್ನು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇಷ್ಟೊಂದು ದೊಡ್ಡ ಪ್ರಮಾಣದ ದಾಖಲೆಗಳು ಎಲ್ಲಿವೆ ಎಂದು ಪೀಠ ಕೇಳಿತು. ಅದಕ್ಕೆ ನ್ಯಾಯಾಲಯದ ಹೊರಗಡೆ ಟೆಂಪೊದಲ್ಲಿ ಇಡಲಾಗಿದೆ ಎಂದು ಸರ್ಕಾರಿ ವಕೀಲರು ಹೇಳಿದರು. ಆಯ್ತು ದಾಖಲೆಗಳನ್ನು ವಾಪಸ್ ತೆಗೆದುಕೊಂಡು ಹೋಗಿ ಅಗತ್ಯ ಬಿದ್ದಲ್ಲಿ ಅವುಗಳನ್ನು ತರಿಸಿಕೊಳ್ಳಲಾಗುವುದು ಎಂದು ಪೀಠ ಹೇಳಿತು.

Related Stories

No stories found.
Kannada Bar & Bench
kannada.barandbench.com