[ಸ್ಮಶಾನ ಭೂಮಿ] 28,276 ಗ್ರಾಮಗಳಿಗೆ ಸೌಲಭ್ಯ: ಹೈಕೋರ್ಟ್‌ಗೆ ಸರ್ಕಾರದಿಂದ ಅಫಿಡವಿಟ್‌ ಸಲ್ಲಿಕೆ

ರಾಜ್ಯದಲ್ಲಿ 16 ಜಿಲ್ಲೆಗಳ 606 ಗ್ರಾಮಗಳ ಜಮೀನನ್ನು ಶೀಘ್ರವೇ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಲಾಗುವುದು ಎಂದು ಸರ್ಕಾರವು ಹೈಕೋರ್ಟ್‌ಗೆ ಭರವಸೆ ನೀಡಿದೆ.
High Court of Karnataka
High Court of Karnataka

ರಾಜ್ಯದಲ್ಲಿ ಜನವಸತಿಯಿರುವ ಒಟ್ಟು 28,281 ಗ್ರಾಮಗಳ ಪೈಕಿ ಈವರೆಗೂ 28,276 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಸಲ್ಲಿಸಿದ ಅಫಿಡವಿಟ್‌ಅನ್ನು ಪೀಠಕ್ಕೆ ಒದಗಿಸಿದರು.

ರಾಜ್ಯದಲ್ಲಿ ಒಟ್ಟು 30,781 ಗ್ರಾಮಗಳಿವೆ. ಅವುಗಳಲ್ಲಿ 2,500 ಬೇಚರಕ್‌ (ಜನವಸತಿ ಇಲ್ಲದ) ಗ್ರಾಮಗಳಿವೆ. ಜನವಸತಿ ಇರುವ 28,281 ಗ್ರಾಮಗಳನ್ನು ಗುರುತಿಸಲಾಗಿದೆ. ಅದರಲ್ಲಿ ಒಟ್ಟು 28,276 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ. ಉಳಿದಂತೆ 5 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಬೇಕಿದೆ. ಉಡುಪಿಯಲ್ಲಿ ಎರಡು ಮತ್ತು ರಾಯಚೂರಿನಲ್ಲಿ ಮೂರು ಗ್ರಾಮಗಳಲ್ಲಿ ಸ್ಮಶಾನ ಭೂಮಿಗಾಗಿ ಖಾಸಗಿಯವರ ಭೂಮಿ ಗುರುತಿಸಲಾಗಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದಿರುವುದೇ ಇದಕ್ಕೆ ಕಾರಣ. ರಾಜ್ಯದ ಒಟ್ಟಾರೆ ಗ್ರಾಮಗಳಲ್ಲಿ ಶೇ.99.8 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಅಲ್ಲದೆ, ಒತ್ತುವರಿ ಸೇರಿದಂತೆ ಭವಿಷ್ಯದಲ್ಲಿ ಉದ್ಭವಿಸುವ ಇತರೆ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಸ್ಮಶಾನ ಭೂಮಿಯನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಆ ಸಂಬಂಧ ಕಂದಾಯ ದಾಖಲೆಗಳ ನೋಂದಣಿ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 16 ಜಿಲ್ಲೆಗಳ 606 ಗ್ರಾಮಗಳ ಜಮೀನನ್ನು ಶೀಘ್ರವೇ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಲಾಗುವುದು ಎಂದು ಸರ್ಕಾರವು ಹೈಕೋರ್ಟ್‌ಗೆ ಭರವಸೆ ನೀಡಿದೆ.

ಅದನ್ನು ತೀವ್ರವಾಗಿ ಆಕ್ಷೇಪಿಸಿದ ಅರ್ಜಿದಾರ ವಕೀಲ ಮೊಹಮ್ಮದ್ ಇಕ್ಬಾಲ್ ಅವರು ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಿರುವ ವಿಚಾರದಲ್ಲಿ ಸರ್ಕಾರ ಈ ಹಿಂದೆ ತಿಳಿಸಿದ ಅಂಕಿ-ಅಂಗಳಿಗೂ, ಸದ್ಯ ಹೇಳುತ್ತಿರುವ ಅಂಕಿ-ಅಂಶಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅನೇಕ ಗ್ರಾಮಗಳಲ್ಲಿ ಸ್ಮಶಾನ ಜಾಗ ಜಮೀನು ಮಂಜೂರು ಮಾಡಿದರೂ ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ನೀಡಿಲ್ಲ. ಬೇಚರಕ್ ಗ್ರಾಮಗಳ ಅಂಕಿ ಅಂಶದಲ್ಲೂ ವ್ಯತ್ಯಾಸವಿದೆ ಎಂದು ತಿಳಿಸಿದರು.

ಅದನ್ನು ಗಂಭೀರವಾಗಿ ಪರಿಗಣಿಸಿದ ಪೀಠವು ಸರ್ಕಾರ ಮತ್ತು ಅರ್ಜಿದಾರ ನೀಡಿರುವ ಮಾಹಿತಿ ತಾಳೆಯಾಗುತ್ತಿಲ್ಲ. ನ್ಯಾಯಾಲಯವು ವಾಸ್ತವ ಅಂಶ ತಿಳಿಯಬೇಕಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಜೂನ್‌ 22ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಕಳೆದ ಫೆಬ್ರವರಿಯಲ್ಲಿ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದ ಸರ್ಕಾರ, ರಾಜ್ಯದಲ್ಲಿ ಒಟ್ಟು 30,762 ಗ್ರಾಮಗಳಿವೆ. ಅದರಲ್ಲಿ 2,491 ಬೇಚರಕ್ (ಜನವಸತಿಯಿಲ್ಲದ) ಗ್ರಾಮಗಳಿವೆ. ಬೇಚರಕ್ ಗ್ರಾಮಗಳನ್ನು ಹೊರತುಪಡಿಸಿದ ಒಟ್ಟು 28,271 ಗ್ರಾಮಗಳ ಪೈಕಿ 28,260 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿತ್ತು.

Also Read
[ಸ್ಮಶಾನ ಭೂಮಿ] ಜನರಿಗೆ ಮೂಲಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆ ಹೆಚ್ಚು ಆಸಕ್ತಿ: ಹೈಕೋರ್ಟ್‌ ಬೇಸರ

ಪ್ರತ್ಯೇಕ ಸ್ಮಶಾನ ಮೀಸಲಿಗೆ ಬೇಡಿಕೆ: ಸ್ಮಶಾನ ಜಾಗವಿಲ್ಲದ ಗ್ರಾಮಗಳ ಅಗತ್ಯ ಜಮೀನು ಕೋರುವಂತೆ ತಿಳಿಸಿ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಅದರ ಪರಿಣಾಮ ಕೆಲ ಸ್ಥಳೀಯ ನಿವಾಸಿಗಳು ಸ್ಮಶಾನಕ್ಕೆ ಹೆಚ್ಚುವರಿ ಜಮೀನು ಒದಗಿಸುವಂತೆ ಕೋರಿದ್ದಾರೆ. ಮತ್ತಷ್ಟು ಜನವು ತಮ್ಮ ಧರ್ಮದವರಿಗೆ ಪ್ರತ್ಯೇಕ ಸ್ಮಶಾನ ಸೌಲಭ್ಯ ಒದಗಿಸುವಂತೆ ತಿಳಿಸಿದ್ದಾರೆ. ಅವರ ಮನವಿಗಳನ್ನು ಕಾನೂನು ಪ್ರಕಾರ ಪರಿಶೀಲನೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.

Related Stories

No stories found.
Kannada Bar & Bench
kannada.barandbench.com