ಪಟಾಕಿ ಸಿಡಿಸುವುದು ಧಾರ್ಮಿಕ ಹಕ್ಕಿನ ವ್ಯಾಪ್ತಿಗೆ ಬಾರದು: ನ್ಯಾ. ಓಕಾ

ಹಸಿರು ನ್ಯಾಯಪೀಠಗಳ ಪ್ರಭಾವವನ್ನು ಅವುಗಳ ಹೆಸರಿನಂದಲ್ಲದೆ ಅವು ಮಾಡುವ ಕೆಲಸದ ಮೂಲಕ ನಿರ್ಣಯಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಓಕಾ ಹೇಳಿದರು.
Justice Abhay Oka
Justice Abhay Oka
Published on

ಮಾಲಿನ್ಯ ಅಥವಾ ಪರಿಸರ ಹಾನಿ ಉಂಟುಮಾಡುವ ಧಾರ್ಮಿಕ ಆಚರಣೆಗಳು ಸಂವಿಧಾನದ 25ನೇ ವಿಧಿಯಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಹೇಳಿದರು.

ಸುಪ್ರೀಂ ಕೋರ್ಟ್ ವಕೀಲರ ಸಂಘ ​​ಆಯೋಜಿಸಿದ್ದ " ಶುದ್ಧ ಗಾಳಿ, ಹವಾಮಾನ ನ್ಯಾಯ ಮತ್ತು ನಾವು- ಸುಸ್ಥಿರ ಭವಿಷ್ಯದ ಸಲುವಾಗಿ ಒಗ್ಗೂಡೋಣ" ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಬ್ಬಗಳು ಮತ್ತು ಶ್ರದ್ಧೆ ಆಧಾರಿತ ಅಚರಣೆಗಳು, ಪದ್ಧತಿಗಳು ಉಂಟುಮಾಡುವ ಪರಿಸರ ಹಾನಿಯನ್ನು ಪುನರ್ವಿಮರ್ಶಿಸುವಂತೆ ಅವರು ಒತ್ತಾಯಿಸಿದರು.

" ಪ್ರಶ್ನೆ ಏನೆಂದರೆ ಪಟಾಕಿ ಸಿಡಿಸುವುದು ಅಥವಾ ನದಿಗಳನ್ನು ಕಲುಷಿತಗೊಳಿಸುವ ಈ ರೀತಿಯ ಚಟುವಟಿಕೆಗಳು 25 ನೇ ವಿಧಿಯಿಂದ ರಕ್ಷಿಸಲ್ಪಟ್ಟಿವೆಯೇ ಎಂಬುದಾಗಿದೆ. ನನ್ನ ಸೀಮಿತ ಜ್ಞಾನದ ಪ್ರಕಾರ, ಉತ್ತರ ದೃಢವಾಗಿ ನಕಾರಾತ್ಮಕವಾಗಿದೆ" ಎಂದು ಅವರು ಹೇಳಿದರು.

ಧಾರ್ಮಿಕ ಸ್ವಾತಂತ್ರ್ಯವಾಗಲಿ ಅಥವಾ ಜನಪ್ರಿಯ ಭಾವನೆಯಾಗಲಿ ಸಾರ್ವಜನಿಕ ಆರೋಗ್ಯ ಅಥವಾ ಪರಿಸರ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಮಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದರು.

" ಧಾರ್ಮಿಕ ಹಬ್ಬದಂದು ಮಾಲಿನ್ಯ ಸೃಷ್ಟಿಸುವ ಹಕ್ಕು ನನಗಿದೆ ಎಂದು ನಾನು ಹೇಳಲಾರೆ. ಸಂವಿಧಾನವನ್ನು ಪಾಲಿಸುವುದು ಮತ್ತು 21ನೇ ವಿಧಿಯಡಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಅನುಭವಿಸುವಂತೆ ನೋಡಿಕೊಳ್ಳುವುದು ನನ್ನ ಮೂಲಭೂತ ಕರ್ತವ್ಯ. ನ್ಯಾಯಾಲಯಗಳು ಪರಿಸರ ಪ್ರಕರಣಗಳನ್ನು ನಿರ್ವಹಿಸುವಾಗ ಜನಪ್ರಿಯ ಅಥವಾ ಧಾರ್ಮಿಕ ಭಾವನೆಗಳಿಂದ ಪ್ರಭಾವಿತವಾಗಬಾರದು" ಎಂದು ಅವರು ಹೇಳಿದರು.

ಪಟಾಕಿ ಸಿಡಿಸುವ ಅಥವಾ ನದಿಗಳನ್ನು ಕಲುಷಿತಗೊಳಿಸುವಂತಹ ಚಟುವಟಿಕೆಗಳು ಸಂವಿಧಾನದ 25ನೇ ವಿಧಿಯಡಿಯಲ್ಲಿ ರಕ್ಷಿಸಲ್ಪಟ್ಟಿದೆಯೋ? ನನ್ನ ಸೀಮಿತ ಜ್ಞಾನದ ಪ್ರಕಾರ, ಉತ್ತರ ಖಂಡಿತವಾಗಿಯೂ ನಕಾರಾತ್ಮಕವಾಗಿದೆ.
ನ್ಯಾಯಮೂರ್ತಿ ಎ.ಎಸ್. ಓಕಾ

ಪರಿಸರ ಸಂರಕ್ಷಣಾ ಕಾಯಿದೆ ವಾಯು ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯಿದೆ ಮತ್ತು ಜಲ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆಗಳಿಗೆ ಇತ್ತೀಚೆಗೆ ಮಾಡಲಾದ ತಿದ್ದುಪಡಿ ಬಳಿಕ ಕಾನೂನು ಉಲ್ಲಂಘಿಸಿದರೆ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುವಂತಿಲ್ಲವಾದ್ದರಿಂದ ಈ ತಿದ್ದುಪಡಿಗಳ ಬಗ್ಗೆ ನ್ಯಾಯಮೂರ್ತಿ ಓಕಾ ಕಳವಳ ವ್ಯಕ್ತಪಡಿಸಿದರು. ತಿದ್ದುಪಡಿ

ಪರಿಸರ ಸಂರಕ್ಷಣೆ ಸದಾ ಭಾರತೀಯ ಸಂಸ್ಕೃತಿಯ ಭಾಗ ಎಂದು ಅವರು ಹೇಳಿದರು.

"ಶತಮಾನಗಳಿಂದ, ನಮ್ಮ ಧಾರ್ಮಿಕ ಮತ್ತು ತತ್ವಜ್ಞಾನಿಗಳು ನಮ್ಮ ಪರಿಸರವನ್ನು ಸಂರಕ್ಷಿಸುವ ಮಹತ್ವವನ್ನು ನಮಗೆ ಕಲಿಸಿದ್ದಾರೆ. ನಾವು ಈ ಬಗ್ಗೆ ಅಂತರರಾಷ್ಟ್ರೀಯ ಸಮಾವೇಶಗಳಿಂದ ಕಲಿಯಬೇಕಿಲ್ಲ; ಅದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಬಹುಶಃ ಕಾಲಾನಂತರದಲ್ಲಿ, ನಮ್ಮ ಸಂಸ್ಕೃತಿಯಲ್ಲಿ ಯಾವುದು ಉತ್ತಮ ಎಂಬುದನ್ನು ನಾವು ಮರೆತಿರಬಹುದು" ಎಂದರು.

ಹಸಿರು ಪೀಠಗಳ ಪ್ರಭಾವವನ್ನು ಅವುಗಳ ಶೀರ್ಷಿಕೆಯಿಂದಲ್ಲ, ಬದಲಾಗಿ ಅವು ಮಾಡುವ ಕೆಲಸದ ಮೂಲಕ ನಿರ್ಣಯಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

" ಒಂದು ಪೀಠವು ಹಸಿರು ಬಣ್ಣದ್ದಾಗಿದೆಯೋ ಇಲ್ಲವೋ ಎಂಬುದು ಅದು ಹೊರಡಿಸಿದ ಆದೇಶಗಳ ಸ್ವರೂಪವನ್ನು ಅವಲಂಬಿಸಿರುತ್ತದೆ ಮತ್ತು ಅದರ ಹೆಸರಿನ ಮೇಲಲ್ಲ" ಎಂದು ಅವರು ಹೇಳಿದರು.

"ದುಃಖಕರ ಸಂಗತಿ ಎಂದರೆ, ಪರಿಸರ ಸಮಸ್ಯೆಗಳ ಬಗ್ಗೆ ನ್ಯಾಯಾಲಯವನ್ನು ಸಂಪರ್ಕಿಸಲು ಧೈರ್ಯ ಮಾಡುವ ನಾಗರಿಕರು ಬಹಳ ಕಡಿಮೆ. ದುರದೃಷ್ಟವಶಾತ್, ಪರಿಸರದ ಪರ ಕೆಲಸ ಮಾಡುವ ಕಾರ್ಯಕರ್ತರನ್ನು ರಾಜಕೀಯ ವರ್ಗ ಮತ್ತು ಧಾರ್ಮಿಕ ಗುಂಪುಗಳು ಅಪಹಾಸ್ಯ ಮಾಡುತ್ತವೆ. ಪರಿಸರ ಪ್ರಕರಣಗಳಲ್ಲಿ ಬಲವಾದ ಆದೇಶಗಳನ್ನು ನೀಡುವ ನ್ಯಾಯಾಧೀಶರನ್ನು ಸಹ ಗುರಿಯಾಗಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಪರಿಸ್ಥಿತಿ" ಎಂದರು.

ಪರಿಸರ ಕುರಿತಾಗಿ ನ್ಯಾಯಾಂಗ ನೀಡುವ ಆದೇಶಗಳು ವಿಕಸಿತ ಭಾರತ್ ಯೋಜನೆಗೆ ಅಡ್ಡಿಯಾಗುತ್ತವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಪ್ರಸ್ತಾಪಿಸಿದ ಅವರು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ರಚನಾತ್ಮಕ ಟೀಕೆ ಮಾಡುವ ಹಕ್ಕಿದೆ. ಆದರೆ ಆ ಅಧಿಕಾರಿ ವಿಕಸಿತ ಭಾರತದ ಪ್ರಯತ್ನಕ್ಕೆ ಅಡ್ಡಿಯಾದ ನ್ಯಾಯಾಂಗ ಆದೇಶಗಳ ವಿವರ ನೀಡಬೇಕಾಗಿತ್ತು. ಅವರು ಹಾಗೆ ಮಾಡಿದ್ದರೆ, ಅದು ರಚನಾತ್ಮಕ ಟೀಕೆಯಾಗುತ್ತಿತ್ತು. ಅವರು ನಿದರ್ಶನಗಳನ್ನು ನೀಡಿದ್ದರೆ ಆ ಆದೇಶಗಳನ್ನು ಅಧ್ಯಯನ ಮಾಡಬಹುದಿತ್ತು ಎಂದರು.

Kannada Bar & Bench
kannada.barandbench.com