ಬಟರ್ ಚಿಕನ್ ವಿವಾದ: ಮೋತಿ ಮಹಲ್ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದರಿಯಾಗಂಜ್‌ ಮಾನನಷ್ಟ ಮೊಕದ್ದಮೆ

ಮೋತಿ ಮಹಲ್‌ ಮಾಲೀಕರು ತನ್ನ ವಿರುದ್ಧ ನೀಡಿರುವ ಹೇಳಿಕೆ ಅಮೆರಿಕದ 'ದ ವಾಲ್ ಸ್ಟ್ರೀಟ್ ಜರ್ನಲ್'ನಲ್ಲಿ ಪ್ರಕಟವಾಗಿದೆ. ನಂತರ ಈ ಲೇಖನವನ್ನು ಉಳಿದ ಪತ್ರಿಕೆಗಳು ಪ್ರಕಟಿಸಿವೆ ಎಂದು ದೂರಿದೆ ದರಿಯಾಗಂಜ್‌.
ಬಟರ್ ಚಿಕನ್
ಬಟರ್ ಚಿಕನ್

ಬಟರ್ ಚಿಕನ್ ಮತ್ತು ದಾಲ್ ಮಖನಿಯಂತಹ ಭಾರತೀಯ ಭಕ್ಷ್ಯಗಳ ಆವಿಷ್ಕಾರಕ್ಕೆ ಸಂಬಂಧಿಸಿದ ವಿವಾದ ಹೊಸ ತಿರುವು ಪಡೆದುಕೊಂಡಿದ್ದು ತನ್ನ ವಿರುದ್ಧ ಮೋತಿ ಮಹಲ್ ರೆಸ್ಟರಂಟ್‌ನ ಮಾಲಿಕರು ಮಾನಹಾನಿಕರ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದರಿಯಾಗಂಜ್ ರೆಸ್ಟರಂಟ್‌ ಸಮೂಹದ ಮಾಲೀಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ದರಿಯಾಗಂಜ್‌ ನಮ್ಮ ಹೋಟೆಲಿನ ಪರಂಪರೆಯನ್ನು ಕಸಿದುಕೊಳ್ಳುತ್ತಿದ್ದು ಅದು ಮಹಾನ್‌ ವಂಚಕ ಎಂಬರ್ಥದ ಹೇಳಿಕೆಗಳನ್ನು ಮೋತಿ ಮಹಲ್‌ ಮಾಲೀಕರು ನೀಡಿದ್ದರು ಎನ್ನಲಾಗಿದೆ. ಇದಕ್ಕೆ ದರಿಯಾಗಂಜ್‌ ಆಕ್ಷೇಪಿಸಿದೆ.

ಮೋತಿ ಮಹಲ್‌ ಮಾಲೀಕರು ತನ್ನ ವಿರುದ್ಧ ನೀಡಿರುವ ಹೇಳಿಕೆ ಅಮೆರಿಕದ 'ದ ವಾಲ್ ಸ್ಟ್ರೀಟ್ ಜರ್ನಲ್'ನಲ್ಲಿ ಪ್ರಕಟವಾಗಿದೆ. ನಂತರ ಈ ಲೇಖನವನ್ನು ಉಳಿದ ಪತ್ರಿಕೆಗಳು ಪ್ರಕಟಿಸಿವೆ ಎಂದು ದರಿಯಾಗಂಜ್‌ ದೂರಿದೆ.

ಈ ಆಕ್ಷೇಪಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಸಂಜೀವ್ ನರುಲಾ, ʼತಾನು ಇಂತಹ ವಿವಾದಾತ್ಮಕ ಹೇಳಿಕೆ ನೀಡಿಯೇ ಇಲ್ಲ ಹಾಗೂ ವಿವಾದಿತ ಹೇಳಿಕೆಯಿಂದ ದೂರ ಇರಲು ಯತ್ನಿಸುವ ಪ್ರಯತ್ನಗಳನ್ನು ಮಾಡಿರುವುದಾಗಿಯೂ ಸೇಥಿ (ಮೋತಿ ಮಹಲ್‌ ಪರ ವಕೀಲೆ) ಅವರು ನ್ಯಾಯಾಲಯಕ್ಕೆ ವಿವರಿಸಿದ್ದು ಇದನ್ನು ದೃಢಪಡಿಸುವ ಅಫಿಡವಿಟ್‌ಅನ್ನು ಇನ್ನೆರಡು ವಾರಗಳಲ್ಲಿ ಮೋತಿ ಮಹಲ್‌ ಸಲ್ಲಿಸಬೇಕುʼ ಎಂದು ಸೂಚಿಸಿದ್ದಾರೆ.

ನ್ಯಾಯಮೂರ್ತಿ ಸಂಜೀವ್ ನರುಲಾ
ನ್ಯಾಯಮೂರ್ತಿ ಸಂಜೀವ್ ನರುಲಾ

"ಬಟರ್ ಚಿಕನ್ ಮತ್ತು ದಾಲ್ ಮಖನಿಯ ಆವಿಷ್ಕಾರಕರು" ಎಂಬ ಅಡಿಬರಹ ಬಳಸಿದ್ದಕ್ಕಾಗಿ ದರಿಯಾಗಂಜ್ ರೆಸ್ಟರಂಟ್‌ ವಿರುದ್ಧ ಮೋತಿ ಮಹಲ್ ಈ ಹಿಂದೆ ಮೊಕದ್ದಮೆ ಹೂಡಿದ್ದನ್ನು ʼಬಾರ್‌ ಅಂಡ್‌ ಬೆಂಚ್‌ʼ ವರದಿ ಮಾಡಿತ್ತು.

ದೆಹಲಿಯ ದರಿಯಾಗಂಜ್‌ನಲ್ಲಿ ಮೊದಲ ಶಾಖೆ ತೆರೆದ ಮೋತಿ ಮಹಲ್‌ ಹಾಗೂ ದರಿಯಾಗಂಜ್‌ ರೆಸ್ಟರಂಟ್‌ ನಡುವೆ ಸಂಬಂಧ ಇರುವಂತೆ ದರಿಯಾಗಂಜ್‌ ರೆಸ್ಟರಂಟ್‌ ಜನರ ದಾರಿ ತಪ್ಪಿಸುತ್ತಿದೆ ಎಂದು ಮೋತಿ ಮಹಲ್‌ ಆಪಾದಿಸಿತ್ತು.

ತಮ್ಮ ಪೂರ್ವಜರೇ ಬಟರ್ ಚಿಕನ್ ಮತ್ತು ದಾಲ್ ಮಖನಿಯನ್ನು ಆವಿಷ್ಕರಿಸಿದ್ದರು. ಈ ಹಿನ್ನೆಲೆಯನ್ನು ಈ ಪಾಕವಿಧಾನಗಳ ಆವಿಷ್ಕಾರಕ ತಾನು ಎಂಬ ಅಡಿಬರಹವನ್ನು ದರಿಯಾಗಂಜ್‌ ಬಳಸುವಂತಿಲ್ಲ ಎಂದು ಮೋತಿಮಹಲ್‌ ಹೇಳಿತ್ತು. ಮೊಕದ್ದಮೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸಮನ್ಸ್‌ ಜಾರಿ ಮಾಡಿತ್ತು.

Also Read
"ಬಟರ್ ಚಿಕನ್, ದಾಲ್ ಮಖನಿ ಆವಿಷ್ಕರಿಸಿದ್ದು ಯಾರು?" ದೆಹಲಿ ಹೈಕೋರ್ಟ್‌ನಲ್ಲಿ ಹೀಗೊಂದು ದಾವೆ

ಆದರೆ ಮಾಧ್ಯಮಗಳಲ್ಲಿ ಮೋತಿ ಮಹಲ್‌ ಮಾಲೀಕರು ತನ್ನ ಮಾನಹಾನಿ ಮಾಡುತ್ತಿದ್ದಾರೆ ಎಂದು ದರಿಯಾಗಂಜ್‌ ನ್ಯಾಯಾಲಯದ ಮೆಟ್ಟಿಲೇರಿದೆ. ಮೋತಿ ಮಹಲ್‌ ಮಾಲೀಕರ ಹೇಳಿಕೆ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿಯೂ ವರದಿಯಾಗಿದೆ. ಈ ಹೇಳಿಕೆ ತನ್ನನ್ನು ವಂಚಕ ಎಂದು ಬಿಂಬಿಸುತ್ತದೆ.

ಪ್ರಕರಣ ನ್ಯಾಯಾಲಯದಲ್ಲಿರುವಾಗ ಇಂತಹ ಹೇಳಿಕೆ ತೀರ್ಪು ಪೂರ್ವಾಗ್ರಹ ಪೀಡಿತವಾಗುವಂತೆ ಮಾಡಿದೆ. ಆದ್ದರಿಂದ ಮೋತಿ ಮಹಲ್‌ ಮಾಲೀಕರು ಮಾನಹಾನಿಕರ ಹೇಳಿಕೆಗಳನ್ನು ಹಿಂಪಡೆಯುವಂತೆ ಮತ್ತು ಅವರ ಹೇಳಿಕೆಗಳನ್ನು ಸುದ್ದಿ ವೇದಿಕೆಗಳಿಂದ ತೆಗೆದುಹಾಕುವಂತೆ ಆದೇಶಿಸಬೇಕು ಎಂದು ದರಿಯಾಗಂಜ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Rupa Gujral & Ors v Daryaganj Hospitality Private Limited & Ors.pdf
Preview
Kannada Bar & Bench
kannada.barandbench.com