ಬೈಜೂಸ್‌ ರವೀಂದ್ರನ್‌ ನಿರಂತರವಾಗಿ ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ: ಹೈಕೋರ್ಟ್‌ಗೆ ಬಿಸಿಸಿಐ ವಿವರಣೆ

ಎನ್‌ಸಿಎಲ್‌ಎಟಿ ಸದಸ್ಯರೊಬ್ಬರು ತಾವು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಾನು ಹೈಕೋರ್ಟ್‌ ಕದತಟ್ಟಬೇಕಾಯಿತು ಎಂದು ಬೈಜೂಸ್‌ ಪರ ವಕೀಲರು ಪೀಠಕ್ಕೆ ತಿಳಿಸಿದರು.
Karnataka High Court, Byju's
Karnataka High Court, Byju's
Published on

ಬೈಜೂಸ್‌ ಸಹ ಸಂಸ್ಥಾಪಕ ಬೈಜು ರವೀಂದ್ರನ್‌ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಿರಂತರವಾಗಿ ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಬೈಜೂಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಬಿಸಿಸಿಐಪ ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಬೈಜೂಸ್‌ ಮಾತೃಸಂಸ್ಥೆಯಾದ ಥಿಂಕ್‌ ಅಂಡ್‌ ಲರ್ನ್‌ಗೆ ಸಾಲದಾರರ ಸಮಿತಿ (ಸಿಒಸಿ- ಕಮಿಟಿ ಆಫ್‌ ಕ್ರೆಡಿಟರ್ಸ್‌) ರಚನೆಯನ್ನು ಹೇಗಾದರೂ ಮಾಡಿ ತಪ್ಪಿಸಲು ರವೀಂದ್ರನ್‌ ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣವು (ಎನ್‌ಸಿಎಲ್‌ಟಿ) ಜುಲೈ 16ರಂದು ಥಿಂಕ್‌ ಅಂಡ್‌ ಲರ್ನ್‌ ವಿರುದ್ಧ ಆರಂಭಿಸಿರುವ ದಿವಾಳಿ ಪ್ರಕ್ರಿಯೆಯ ಶಾಸನಬದ್ಧ ಕಾಲಮಿತಿಗೆ ಸಂಪೂರ್ಣವಾಗಿ ಅವಿಧೇಯತೆ ತೋರುವುದಲ್ಲದೇ ದಿನ ಬೆಳಗಾಯಿತೆಂದರೆ ನ್ಯಾಯಾಲಯಕ್ಕೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ” ಎಂದರು.

ಎನ್‌ಸಿಎಲ್‌ಟಿ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯನ್ನು ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್‌ಸಿಎಲ್‌ಎಟಿ) ನಿರ್ಧರಿಸುವವರೆಗೆ ದಿವಾಳಿ ಸಂಹಿತೆ ಪ್ರಕ್ರಿಯೆ ಅಮಾನತುಗೊಳಿಸಬೇಕು ಮತ್ತು ಸಿಒಸಿ ರಚನೆ ತಡೆ ಹಿಡಿಯಬೇಕು ಎಂದು ರವೀಂದ್ರನ್‌ ಅವರು ಜುಲೈ 25ರಂದು ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧ ಅರ್ಜಿದಾರರ ಪರವಾಗಿ ಗುರುವಾರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ಆಗಸ್ಟ್‌ 2ರಂದು ಸಿಒಸಿ ರಚಿಸುವ ಸಾಧ್ಯತೆ ಇದೆ. ಈ ವೇಳೆಗೆ ಎನ್‌ಸಿಎಲ್‌ಎಟಿಯು ತಮ್ಮ ಮೇಲ್ಮನವಿ ವಿಚಾರಣೆ ನಡೆಸದಿದ್ದರೆ ತಮಗೆ ಪರಿಹಾರವೇ ಇಲ್ಲದಾಗಲಿದೆ” ಎಂದಿದ್ದರು.

ಶುಕ್ರವಾರ ನಡೆದ ವಿಚಾರಣೆಯ ವೇಳೆ ಸಿಂಘ್ವಿ ಅವರು ರವೀಂದ್ರನ್‌ ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ವಾದವನ್ನು ಅಲ್ಲಗಳೆದರು. “ಎನ್‌ಸಿಎಲ್‌ಎಟಿಯು ಬೈಜೂಸ್‌ ಮೇಲ್ಮನವಿಯನ್ನು ಜುಲೈ 29ಕ್ಕೆ ಮುಂದೂಡಿದ್ದು, ಆ ವೇಳೆಗೆ ನ್ಯಾಯಾಂಗ ಸದಸ್ಯರಾದ ಶರದ್‌ ಕುಮಾರ್‌ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯುವ ಸೂಚನೆ ನೀಡಿರುವುದರಿಂದ ಹೈಕೋರ್ಟ್‌ ಮೆಟ್ಟಿಲೇರಲಾಗಿದೆ” ಎಂದರು.

ಆಗ ತುಷಾರ್‌ ಮೆಹ್ತಾ ಅವರು “ಶಾಸನದ್ಧ ಕಾಲಮಿತಿಯ ಪ್ರಕಾರ ದಿವಾಳಿ ಪ್ರಕ್ರಿಯೆ ನಡೆಸುವುದಕ್ಕೆ ಸಂಬಂಧಿಸಿದ ದಿನಾಂಕ ಪಟ್ಟಿ ನನ್ನ ಬಳಿ ಇದೆ. ಸಿಒಸಿಯನ್ನು ಬೈಜೂಸ್‌ ನಾಳೆ ಅಥವಾ ನಾಡಿದ್ದು ಆರಂಭಿಸಲು ಬಿಡುವುದಿಲ್ಲ” ಎಂದರು.

ಈ ನಡುವೆ ಪೀಠವು “ಚೆನ್ನೈನ ಎನ್‌ಸಿಎಲ್‌ಎಟಿಯು ಬೈಜೂಸ್‌ ಮೇಲ್ಮನವಿ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ. ಅದರ ಮಾರನೇಯ ದಿನ ಹೈಕೋರ್ಟ್‌ ವಿಚಾರಣೆ ನಡೆಸಲಿದೆ. ಹೀಗಾಗಿ, ಜುಲೈ 31ರ ಒಳಗೆ ಸಿಒಸಿ ರಚಿಸಲು ಅನುಮತಿಸಲಾಗದು” ಎಂದರು. ನ್ಯಾಯಾಲಯದ ಈ ಅಭಿಪ್ರಾಯಕ್ಕೆ ಎಲ್ಲಾ ಪಕ್ಷಕಾರರು ಒಪ್ಪಿದರು.

ಆದರೆ, ಮೆಹ್ತಾ ಅವರು ರವೀಂದ್ರನ್‌ ಅವರು “ದಿನ ಬೆಳಗಾಯಿತೆಂದರೆ ನ್ಯಾಯಾಲಯದ ಕದ ತಟ್ಟುವ ಮೂಲಕ ಪೀಠಕ್ಕೆ ಸಮಸ್ಯೆ ಉಂಟು ಮಾಡಿ ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು” ಎಂದರು.

ಮೂರನೇ ಪಕ್ಷಕಾರರ ಪರವಾಗಿ ಮತ್ತು ಬಿಸಿಸಿಐ ಬೆಂಬಲಿಸಿ ವಾದಿಸಿದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ತಮ್ಮ ಕಕ್ಷಿದಾರರು ಬೈಜೂಸ್‌ ವಾದ ಆಲಿಸಬಾರದು ಎಂದು ಎನ್‌ಸಿಎಲ್‌ಎಟಿಯಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರನ್‌ ಅವರು ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ. ರವೀಂದ್ರನ್‌ ಮೂರು ಬಾರಿ ಎನ್‌ಸಿಎಲ್‌ಎಟಿ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ಗೆ ಎರಡು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಚೆನ್ನೈನ ಎನ್‌ಸಿಎಲ್‌ಎಟಿ ವಿಚಾರಣೆಯ ಹಿಂದೆ ಸರಿಯಬೇಕು ಮತ್ತು ತಮ್ಮ ಅರ್ಜಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಎನ್‌ಸಿಎಲ್‌ಎಟಿ ಮುಖ್ಯಸ್ಥರಾದ ಅಶೋಕ್‌ ಭೂಷಣ್‌ ಅವರಿಗೂ ರವೀಂದ್ತನ್‌ ಅರ್ಜಿ ಸಲ್ಲಿಸಿದ್ದರು” ಎಂದರು.

ಆಗ ನ್ಯಾ. ಕುಮಾರ್‌ ಅವರು “ಕಳೆದ ಒಂದೂವರೆ ತಿಂಗಳಲ್ಲಿ ರವೀಂದ್ರನ್‌ ಮತ್ತು ಬೈಜೂಸ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕನಿಷ್ಠ ಮೂರು ಅಥವಾ ನಾಲ್ಕು ಬಾರಿ ವಿಚಾರಣೆ ನಡೆಸಿರಬೇಕು. ನೀವು ಅರ್ಜಿ ವಿಚಾರಣೆ ಸಲ್ಲಿಸಬಾರದು ಎಂದು ಹೇಳುತ್ತಿಲ್ಲ. ಅದೆಲ್ಲವೂ ನನಗೆ ನೆನಪಿದೆ ಎಂದು ಹೇಳುತ್ತಿದ್ದೇನೆ” ಎಂದರು.

ಇದಕ್ಕೆ ಸಿಂಘ್ವಿ ಅವರು “ಕಳೆದ ವಿಚಾರಣೆಯಲ್ಲಿ ಎನ್‌ಸಿಎಲ್‌ಎಟಿ ಪ್ರತಿಕ್ರಿಯೆ ಗಮನಿಸಿದ್ದರಿಂದ ಹೈಕೋರ್ಟ್‌ ಮೆಟ್ಟಿಲೇರುವುದು ಅನಿವಾರ್ಯವಾಯಿತು. ನಮಗೆ ಆದೇಶ ನೀಡಲು ಹೈಕೋರ್ಟ್‌ ಯಾರು ಎಂದು ಎನ್‌ಸಿಎಲ್‌ಎಟಿ ಪ್ರಶ್ನಿಸಿದಾಗ ನಾನೇನು ಮಾಡಲು ಸಾಧ್ಯ?” ಎಂದರು.

ಅಲ್ಲದೇ, “ಲಾಭದಾಯಕವಾದ ಕಂಪೆನಿಯನ್ನು ದಿವಾಳಿ ಕಂಪೆನಿಯನ್ನಾಗಿಸುವುದು ತಮ್ಮ ಉದ್ದೇಶವಲ್ಲ ಎಂಬುದನ್ನೂ ನ್ಯಾಯಾಲಯ ಗಮನದಲ್ಲಿಟ್ಟುಕೊಳ್ಳಬೇಕು” ಎಂದರು.

Also Read
ಸಂದಾಯವಾಗದ 158 ಕೋಟಿ ರೂ: ಬೈಜೂಸ್‌ ವಿರುದ್ಧ ಬೆಂಗಳೂರು ಎನ್‌ಸಿಎಲ್‌ಟಿಯಲ್ಲಿ ದಿವಾಳಿ ಅರ್ಜಿ ಸಲ್ಲಿಸಿದ ಬಿಸಿಸಿಐ

ಅಂತಿಮವಾಗಿ ಪೀಠವು ಎನ್‌ಸಿಎಲ್‌ಎಟಿ ಸದಸ್ಯರು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯುತ್ತಾರೆಯೇ ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ತಿಳಿಯಲಾಗುವುದು ಎಂದು ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.

ಪ್ರಾಯೋಜಕತ್ವ ಹಕ್ಕಿನ ಭಾಗವಾಗಿ ₹158 ಕೋಟಿ ಬಾಕಿ ಪಾವತಿಸಿಲ್ಲ ಎಂದು ಥಿಂಕ್‌ ಅಂಡ್‌ ಲರ್ನ್‌ ವಿರುದ್ಧ ಬಿಸಿಸಿಐ ಬೆಂಗಳೂರಿನ ಎನ್‌ಸಿಎಲ್‌ಟಿಯಲ್ಲಿ ಜುಲೈ 16ರಂದು ದಿವಾಳಿ ಪ್ರಕ್ರಿಯೆ ಆರಂಭಿಸಲು ಅರ್ಜಿ ಸಲ್ಲಿಸಿದೆ. ಇದರ ವಿಚಾರಣೆಗೆ ಒಪ್ಪಿರುವ ಎನ್‌ಸಿಎಲ್‌ಟಿಯು ದಿವಾಳಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅಡಿ ಕಾರ್ಪೊರೇಟ್‌ ದಿವಾಳಿ ನಿಲುವಳಿ ಪ್ರಕ್ರಿಯೆ ಆರಂಭಿಸಿತ್ತು. ಐಬಿಸಿಯಲ್ಲಿ ಕಡ್ಡಾಯವಾಗಿ ಹೇಳಿರುವುದರ ಭಾಗವಾಗಿ ಕಂಪೆನಿಯ ಚಟುವಟಿಕೆಗಳನ್ನು ನಿರ್ವಹಿಸಲು ಎನ್‌ಸಿಎಲ್‌ಟಿಯು ನಿಲುವಳಿ ವೃತ್ತಿಪರರನ್ನು ನೇಮಿಸಿದೆ. 

Kannada Bar & Bench
kannada.barandbench.com