

ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾಗಿದ್ದು, ಅವರಿಗೆ ಬಂಧನದಿಂದ ನೀಡಿರುವ ರಕ್ಷಣೆಯನ್ನು ವಿಸ್ತರಿಸಬಾರದು ಎಂದು ಮಂಗಳವಾರ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿತು.
ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಬೈರತಿ ಬಸವರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ. ಕಳೆದ ವಿಚಾರಣೆಯಲ್ಲಿ ಮಧ್ಯಂತರ ರಕ್ಷಣೆ ಪಡೆಯುವುದಕ್ಕಾಗಿ ಅರ್ಜಿಯ ಪ್ರತಿಯನ್ನು ವಿಶೇಷ ಸರ್ಕಾರಿ ಅಭಿಯೋಜಕರ ಕಚೇರಿಗೆ ನೀಡಲಾಗಿದೆ ಎಂಬ ತಪ್ಪು ಮಾಹಿತಿಯನ್ನು ರಜಾಕಾಲೀನ ಪೀಠಕ್ಕೆ ನೀಡಿ, ಪೂರಕ ಆದೇಶ ಪಡೆಯಲಾಗಿದೆ” ಎಂದು ಆಕ್ಷೇಪಿಸಿದರು.
“ರಜಾಕಾಲೀನ ಪೀಠದ ಆದೇಶದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯ ಪ್ರತಿಯನ್ನು ವಿಶೇಷ ಅಭಿಯೋಜಕರಿಗೆ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಒಂದು ವೇಳೆ ತಮಗೆ ಅರ್ಜಿಯ ಪ್ರತಿ ಲಭ್ಯವಾಗಿರುವುದು ಸಾಬೀತಾದರೆ ಎಲ್ಲಾ ಆರೋಪಗಳನ್ನು ಹಿಂಪಡೆಯಲಾಗುವುದು. ಪ್ರಕರಣ ಸಂಬಂಧ ಎಸ್‌ಪಿಪಿ ನೇಮಕವಾಗಿದ್ದಾಗ, ಅವರಿಗೆ ಅರ್ಜಿಯ ಪ್ರತಿ ಸಲ್ಲಿಸುವುದು ಅರ್ಜಿದಾರರ ಜವಾಬ್ದಾರಿ” ಎಂದರು.
ಆಗ ಪೀಠವು “ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅಗತ್ಯವಿಲ್ಲ ಎಂದಾದಲ್ಲಿ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿ ವಿಚಾರಣೆ ಮಾಡುವ ಅಗತ್ಯವಿಲ್ಲ” ಎಂದಿತು. ಇದಕ್ಕೆ ಜಗದೀಶ್ ಅವರು “ಅರ್ಜಿದಾರರ ವಿರುದ್ಧ ತನಿಖೆ ನಡೆಯಬೇಕಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅಗತ್ಯವಿದೆ” ಎಂದರು.
ಒಂದು ಹಂತದಲ್ಲಿ ಪೀಠವು “ಪ್ರಾಸಿಕ್ಯೂಷನ್ ವಾದ ಆಲಿಸಬೇಕಿತ್ತಲ್ಲವೇ? ಈಗಾಗಲೇ ಒಮ್ಮೆ ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯನ್ನು ವಜಾ ಮಾಡಲಾಗಿತ್ತು. ಮತ್ತದೇ ಕೋರಿಕೆಯ ಅರ್ಜಿ ಬಂದಾಗ ಪ್ರಾಸಿಕ್ಯೂಷನ್ ವಾದ ಆಲಿಸಬೇಕಿತ್ತು. ಇದಾಗಲೇ ರಜಾಕಾಲೀನ ಪೀಠ ಆದೇಶ ಮಾಡಿರುವುದರಿಂದ ಏನೂ ಮಾಡಲಾಗದು. ಮೆರಿಟ್ ಮೇಲೆ ಅರ್ಜಿ ವಿಚಾರಣೆ ನಡೆಸಲಾಗುವುದು” ಎಂದಿತು.
“ಬೈರತಿ ಬಸವರಾಜ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ತನಿಖಾ ವರದಿಯನ್ನು ಪೀಠಕ್ಕೆ ಸಲ್ಲಿಸಿಲ್ಲ ಎಂಬುದಾಗಿ ರಜಾಕಾಲೀನ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ವಿಶೇಷ ಸರ್ಕಾರಿ ಅಭಿಯೋಜಕರು ಹಾಜರಿಲ್ಲದ ವೇಳೆ ಈ ರೀತಿಯಲ್ಲಿ ತಿಳಿಸಲು ಸಾಧ್ಯವೇ? ಪ್ರಾಸಿಕ್ಯೂಷನ್ ಕುರಿತು ಪೂರ್ವಾಗ್ರಹಕ್ಕೊಳಗಾಗಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಬಹುದೇ” ಎಂದು ಪ್ರಶ್ನಿಸಿತು.
“ರಜಾಕಾಲೀನ ಪೀಠವು ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರ ವಾದ ಆಲಿಸುವುದಕ್ಕಾಗಿ ವಿಚಾರಣೆಯನ್ನು ಕನಿಷ್ಠ ಮತ್ತೊಂದು ದಿನಕ್ಕೆ ನಿಗದಿ ಮಾಡಬಹುದಿತ್ತಲ್ಲವೇ? ಅಷ್ಟೊಂದು ತರಾತುರಿಯಲ್ಲಿ ಆದೇಶ ಮಾಡುವ ಅಗತ್ಯವೇನಿತ್ತು” ಎಂದು ಪೀಠ ಪ್ರಶ್ನಿಸಿತು.
ಬೈರತಿ ಬಸವರಾಜ್ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ನಿರೀಕ್ಷಣಾ ಜಾಮೀನು ಅರ್ಜಿಯ ಪ್ರತಿಯನ್ನು ಸರ್ಕಾರಿ ವಕೀಲರಿಗೆ ನೀಡಲಾಗಿತ್ತು. ಈ ಸಂಬಂಧ ಅವರು ಮೆಮೊ ಸಲ್ಲಿಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕರು ವಿದೇಶ ಪ್ರವಾಸದಲ್ಲಿದ್ದಾರೆ ಎಂದು ತಿಳಿಸಿದ್ದರು. ಇದರ ಆಧಾರದಲ್ಲಿ ರಜಾಕಾಲೀನ ಪೀಠ ಆದೇಶ ಮಾಡಿದೆ. ನಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ” ಎಂದರು.
ವಾದ ಆಲಿಸಿದ ಪೀಠ ಮುಂದಿನ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.