ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟಿದ್ದ ನಿವೇಶನ ಹಂಚಿಕೆ: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ಆದೇಶ

ಬಿಡಿಎ, ವೈಯಾಲಿಕಾವಲ್ ಸೊಸೈಟಿಗೆ ಯಥಾಸ್ಥಿತಿ ಕಾಪಾಡಲು ಪೀಠ ಆದೇಶಿಸಿದ್ದು, ಖಾಲಿ ನಿವೇಶನದಲ್ಲಿ ಕಟ್ಟಡ ನಿರ್ಮಿಸದಂತೆ ಮತ್ತು ಸದ್ಯಕ್ಕೆ ನಿರ್ಮಾಣವಾಗಿರುವ ಯಾವುದೇ ಕಟ್ಟಡವನ್ನು ತೆರವುಗೊಳಿಸದಂತೆ ನಿರ್ದೇಶನ ನೀಡಿದೆ.
Karnataka High Court
Karnataka High Court
Published on

ಬೆಂಗಳೂರಿನ ವೈಯಾಲಿಕಾವಲ್ ಸೊಸೈಟಿಯು ನಾಗರಿಕ ಸೌಲಭ್ಯ ಕಲ್ಪಿಸಲು ಮೀಸಲಿಟ್ಟಿದ್ದ ನಿವೇಶನಗಳನ್ನು ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ನಿವೇಶನದಾರರಾದ ವಿ ಆರ್ ಪದ್ಮಾವತಿ ಸೇರಿದಂತೆ 53 ಮಂದಿ ಸಲ್ಲಿಸಿದ್ದ ತೀರ್ಪು ಮರು ಪರಿಶೀಲನಾ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಲೇಔಟ್ ಯೋಜನೆಯಂತೆ ನಿವೇಶನ ಖರೀದಿ ಮಾಡಲಾಗಿದೆ. ಆದರೆ ಆನಂತರ ಸೊಸೈಟಿ ಮತ್ತು ಬಿಡಿಎ ಸೇರಿ ಬಡಾವಣೆಯ ಯೋಜನೆ ಬದಲಿಸಿವೆ. ಇದರಲ್ಲಿ ನಿವೇಶನದಾರರ ತಪ್ಪಿಲ್ಲ. ಆದರೂ ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ವಾದಿಸಿದರು.

Also Read
ಸಿಎ ಸೈಟ್ ಹಗರಣ: ಸಂಸದ ಜಾಧವ್ ಪತ್ನಿ ಎಂದು ಕೆಎಚ್‌ಬಿಯಿಂದ ಪಕ್ಷಪಾತದ ನಿಲುವು; ರೂ.1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ವಾದ ಆಲಿಸಿದ ಪೀಠವು ಯಥಾಸ್ಥಿತಿ ಕಾಯ್ದುಕೊಳ್ಳಲು ಬಿಡಿಎ, ವೈಯಾಲಿಕಾವಲ್ ಸೊಸೈಟಿಗೆ ಆದೇಶ ಮಾಡಿತು. ಅಲ್ಲದೇ, ಖಾಲಿ ನಿವೇಶನದಲ್ಲಿ ಕಟ್ಟಡ ನಿರ್ಮಿಸದಂತೆ ಮತ್ತು ಸದ್ಯಕ್ಕೆ ನಿರ್ಮಾಣವಾಗಿರುವ ಯಾವುದೇ ಕಟ್ಟಡವನ್ನು ತೆರವುಗೊಳಿಸದಂತೆ ಸೂಚನೆ ನೀಡಿತು.

ಹೈಕೋರ್ಟ್ ಹಿಂದೆ ನಾಗರಿಕ ಸೌಲಭ್ಯಕ್ಕೆ ಮೀಸಲಾಗಿರುವ ನಿವೇಶನಗಳನ್ನು ಹಂಚಿಕೆ ಮಾಡಿದ್ದರೆ ಅಂತಹವುಗಳನ್ನು ತೆರವುಗೊಳಿಸಬೇಕು ಎಂದು ಆದೇಶ ನೀಡಿತ್ತು. ಹಾಗಾಗಿ ನಿವೇಶನದಾರರು ತೀರ್ಪು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com