ಸಿಎಎ ತಮಿಳು ಜನಾಂಗದ ವಿರೋಧಿ, ತಮಿಳು ನಿರಾಶ್ರಿತರ ಸಮಸ್ಯೆ ನಿರ್ಲಕ್ಷಿಸಿದೆ: ಸುಪ್ರೀಂ ಕೋರ್ಟ್‌ಗೆ ಡಿಎಂಕೆ ಅಫಿಡವಿಟ್‌

ತಮಿಳು ನಿರಾಶ್ರಿತರ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದ್ದು ಇದರಿಂದ ಅವರು ಗಡಿಪಾರಾಗುವ ನಿರಂತರ ಭಯದಲ್ಲಿ ಬದುಕುತ್ತಿದ್ದಾರೆ ಎಂದಿದೆ ಅಫಿಡವಿಟ್.
CAA, Supreme Court
CAA, Supreme Court
Published on

ಪೌರತ್ವ (ತಿದ್ದುಪಡಿ) ಕಾಯಿದೆ, 2019 ತಮಿಳು ಜನಾಂಗಕ್ಕೆ ವಿರುದ್ಧವಾಗಿದ್ದು ತಮಿಳುನಾಡಿನಲ್ಲಿ ನೆಲೆಸಿರುವ ತಮಿಳು ನಿರಾಶ್ರಿತರ ವಾಸ್ತವ ಸಮಸ್ಯೆಯನ್ನು ನಿರ್ಲಕ್ಷಿಸುತ್ತದೆ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಡಿಎಂಕೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಧರ್ಮದ ನೆಲೆಯಲ್ಲಿ ಪೌರತ್ವ ನೀಡಲು ಸಿಎಎ ಸಂಪೂರ್ಣವಾಗಿ ಹೊಸ ಆಧಾರವನ್ನು ಜಾರಿಗೆ ತಂದಿದ್ದು ಇದು ಜಾತ್ಯತೀತತೆಯ ಮೂಲ ಹೆಣಿಗೆಯನ್ನೇ ನಾಶ ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ವಕೀಲ ಡಿ ಕುಮನನ್ ಅವರ ಮೂಲಕ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಅಫಿಡವಿಟ್‌ನಲ್ಲಿರುವ ಪ್ರಮುಖ ಅಂಶಗಳು

  • ಶೋಷಣೆಗೆ ತುತ್ತಾದ ದೇಶಗಳಲ್ಲಿ ಕೂಡ ಮುಸ್ಲಿಮರನ್ನು ಏಕೆ ಸಂಪೂರ್ಣ ಹೊರಗಿಡಲಾಗುತ್ತಿದೆ ಎಂಬುದಕ್ಕೆ ಕಾರಣ ಇಲ್ಲ.

  • ತಮಿಳು ನಿರಾಶ್ರಿತರ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದ್ದು ಇದರಿಂದ ಅವರು ಗಡಿಪಾರಾಗುವ ನಿರಂತರ ಭಯದಲ್ಲಿ ಬದುಕುತ್ತಿದ್ದಾರೆ

  • ದೇಶರಹಿತವಾಗಿರುವ ಅವರಿಗೆ ಸರ್ಕಾರಿ ಉದ್ಯೋಗ ಮತ್ತು ಸಂಘಟಿತ ಖಾಸಗಿ ವಲಯಗಳಲ್ಲಿ ಉದ್ಯೋಗ ನಿರಾಕರಿಸಲಾಗಿದ್ದು ಆಸ್ತಿ ಪಡೆಯುವ, ಮತಲಾಯಿಸುವ ಹಕ್ಕನ್ನು ನೀಡಿಲ್ಲ. ಜೊತೆಗೆ ಸರ್ಕಾರಿ ಸವಲತ್ತುಗಳು ಕೂಡ ಅವರಿಗೆ ಇಲ್ಲ.

  • ಈ ಬಗೆಯ ದ್ವಂದ್ವದಿಂದಾಗಿ ಅವರು ಭವಿಷ್ಯದ ಭದ್ರತೆ ಇಲ್ಲದೆ, ಶೋಷಣೆಗೆ ತುತ್ತಾಗುವಂತಹ ಶಿಬಿರಗಳಲ್ಲಿ ಬದುಕು ಕಳೆಯಲು ಬಲವಂತಪಡಿಸಲಾಗಿದೆ. ನಿರಾಶ್ರಿತರ ಶಿಬಿರಗಳಲ್ಲಿ ಹಲವಾರು ವರ್ಷಗಳನ್ನು ಕಳೆದಿರುವ ತಮಿಳು ನಿರಾಶ್ರಿತರ ಪೌರತ್ವಕ್ಕಾಗಿ ಮಾಡಿದ ಮನವಿಗಳಿಗೆ ಪ್ರತಿವಾದಿ ಕೇಂದ್ರ ಸರ್ಕಾರ ಕಿವುಡಾಗಿದೆ.   

  • ಶೋಷಣೆಗೆ ಒಳಗಾದ ಮುಸ್ಲಿಮರನ್ನು ಕಾಯಿದೆ ದೂರವಿಡುತ್ತದೆಯಾದ್ದರಿಂದ, ಇದು ಅತ್ಯಂತ ತಾರತಮ್ಯ ಹೊಂದಿದ್ದು, ಮನಸೋಇಚ್ಛೆ ರಾಚುವಂತಿದೆ.  

  • ಈ ಹಿನ್ನೆಲೆಯಲ್ಲಿ ಸಂವಿಧಾನದ 14 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುವುದರಿಂದ, ಸಿಎಎಯನ್ನು ನ್ಯಾಯಾಲಯ ಅಸಾಂವಿಧಾನಿಕ ಎಂದು ಘೋಷಿಸಬೇಕು.

ಡಿಸೆಂಬರ್ 12, 2019 ರಂದು ಸಂಸತ್ತಿನಲ್ಲಿ ಅಂಗೀಕೃತವಾದ ಸಿಎಎ, ಅಕ್ರಮ ವಲಸಿಗರನ್ನು ವ್ಯಾಖ್ಯಾನಿಸುವ 1955 ರ ಪೌರತ್ವ ಕಾಯಿದೆಯ ಸೆಕ್ಷನ್ 2ಕ್ಕೆ ತಿದ್ದುಪಡಿ ಮಾಡಿತು.

ತಿದ್ದುಪಡಿ ವೇಳೆ ಕಾಯಿದೆಯ ಸೆಕ್ಷನ್ 2(1)(ಬಿ) ಗೆ ಹೊಸ ನಿಯಮಾವಳಿ ಸೇರಿಸಿದ್ದು ಆಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಮತ್ತು 1920ರ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ- ಅಥವಾ 1946ರ ವಿದೇಶಿಯರ ಕಾಯಿದೆಯಡಿ  ಕೇಂದ್ರ ಸರ್ಕಾರದಿಂದ ವಿನಾಯಿತಿ ಪಡೆದವರನ್ನು "ಅಕ್ರಮ ವಲಸಿಗ" ಎಂದು ಪರಿಗಣಿಸಲಾಗುವುದಿಲ್ಲ. ಪರಿಣಾಮವಾಗಿ, ಅಂತಹ ವ್ಯಕ್ತಿಗಳು 1955ರ ಕಾಯಿದೆ ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಅದು ಹೇಳುತ್ತದೆ.  

ಈ ಎಲ್ಲ ಹಿನ್ನೆಲೆಯಲ್ಲಿ ಸಿಎಎಯು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದ್ದು ಇದನ್ನು ಅಸಾಂವಿಧಾನಿಕವೆಂದು ಘೋಷಿಸಬೇಕೆಂದು ಡಿಎಂಕೆ ಕೋರಿದೆ.

ಇತ್ತ ಕೇಂದ್ರ ಸರ್ಕಾರವು ಅಸ್ತಿತ್ವದಲ್ಲಿರುವ ನಾಗರಿಕ ಹಕ್ಕುಗಳ ಮೇಲೆ ಸಿಎಎ ಪರಿಣಾಮ ಬೀರದು ಎಂದಿದೆ. ಅಲ್ಲದೆ, ಪೌರತ್ವವನ್ನು ಪಡೆಯಲು ಪ್ರಸಕ್ತ ಇರುವ ಇತರ ಅವಕಾಶಗಳು ಎಂದಿನಂತೆಯೇ ಮುಂದುವರೆಯಲಿವೆ ಎಂದು ಅದು ವಾದಿಸಿದೆ.

Kannada Bar & Bench
kannada.barandbench.com