ಹಿನ್ನೋಟ: ಸಿಎಎ ಪ್ರತಿಭಟನೆ, ಎನ್‌ಎಲ್‌ಎಸ್‌ಐಯು ಸ್ಥಳೀಯ ಮೀಸಲಾತಿ - ಕರ್ನಾಟಕ ಹೈಕೋರ್ಟ್‌ ಹೊರಡಿಸಿದ ಮಹತ್ವದ ಆದೇಶಗಳು

ಒಂದು ಪ್ರಕರಣದಲ್ಲಿ 25 ಕೆಲಸದ ದಿನಗಳವರೆಗೆ ವಿಡಿಯೊ ಕಾನ್ಫರೆನ್ಸ್ ವಿಚಾರಣೆಗಳನ್ನು ನಡೆಸುವುದರಿಂದ ಹಿಡಿದು ರಜಾದಿನಗಳ ಸಂಖ್ಯೆಯನ್ನು ಕಡಿತ ಮಾಡುವವರೆಗೆ, ನ್ಯಾಯಾಲಯವು ದಾವೆದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿತು.
Karnataka High CourtCAA protest
Karnataka High CourtCAA protest

ಕೋವಿಡ್‌ ಸಾಂಕ್ರಾಮಿಕತೆಯು ನ್ಯಾಯದಾನ ವ್ಯವಸ್ಥೆಯನ್ನು ನಿಶ್ಚಲಗೊಳಿಸಿರುವುದರಿಂದ ದೇಶದ ವಿವಿಧ ನ್ಯಾಯಾಲಯಗಳಂತೆ ಕಳೆದ ಏಪ್ರಿಲ್‌ನಿಂದ ಕರ್ನಾಟಕ ಹೈಕೋರ್ಟ್‌ ಸಹ ವರ್ಚುವಲ್‌ ವ್ಯವಸ್ಥೆಗೆ ಒಗ್ಗಿಕೊಂಡಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಾಕಷ್ಟು ಸಮಯ ವ್ಯರ್ಥವಾಗಿದ್ದು, ಅದನ್ನು ಹೊಂದಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಒಂದು ಪ್ರಕರಣದಲ್ಲಿ 25 ಕೆಲಸದ ದಿನಗಳವರೆಗೆ ವಿಡಿಯೊ ಕಾನ್ಫರೆನ್ಸ್ ವಿಚಾರಣೆಗಳನ್ನು ನಡೆಸುವುದರಿಂದ ಹಿಡಿದು ರಜಾದಿನಗಳ ಸಂಖ್ಯೆಯನ್ನು ಕಡಿತ ಮಾಡುವವರೆಗೆ, ನ್ಯಾಯಾಲಯವು ದಾವೆದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿತು.

ವರ್ಚುವಲ್‌ ವ್ಯವಸ್ಥೆಯ ಮೂಲಕ ನ್ಯಾಯಾಲಯವು ನ್ಯಾಯದಾನ ಮಾಡಿದ್ದು, ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸುವುದರ ಜೊತೆಗೆ ಕೆಲವು ಮಹತ್ತರವಾದ ತೀರ್ಪುಗಳನ್ನು ಈ ವರ್ಷ ಹೊರಡಿಸಿದೆ. 2020ರಲ್ಲಿ ಕರ್ನಾಟಕ ಹೈಕೋರ್ಟ್ ನಡೆಸಿದ ಪ್ರಮುಖ ವಿಚಾರಣೆಗಳು ಇಂತಿವೆ.

ಬೆಂಗಳೂರಿನಲ್ಲಿ ಸಿಎಎ ಪ್ರತಿಭಟನೆ ಮತ್ತು ಸೆಕ್ಷನ್‌ 144

ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಡಿಸೆಂಬರ್‌ 18ರಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮದ ಭಾಗ ಎಂದು ಹೇಳಿ ಸರ್ಕಾರವು ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಿತ್ತು. ಇದು ಕಾನೂನಬಾಹಿರ ಮತ್ತು ನ್ಯಾಯಿಕ ವಿಚಾರಣೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿತ್ತು.

ಮಕ್ಕಳ ಅಶ್ಲೀಲ ಚಿತ್ರಗಳನ್ನು ತಡೆಯಲು ಮಾರ್ಗಸೂಚಿ

ಚಿಣ್ಣರ ಸಂರಕ್ಷಣಾ ಸಂಸ್ಥೆಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ಕುರಿತಾದ ಚಟುವಟಿಕೆಗಳನ್ನು ತಡೆಯಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಸ್ತುತ ಎನಿಸಿದ ಹಲವು ನಿರ್ದೇಶನಗಳನ್ನು ನೀಡಿದೆ. ಮಕ್ಕಳ ಅಶ್ಲೀಲ ಚಿತ್ರಗಳ ಚಟುವಟಿಕೆಗಳನ್ನು ತಡೆಗಟ್ಟುವುದು ಮತ್ತು ನಾಪತ್ತೆಯಾದ ಮಕ್ಕಳ ಹುಡುಕಾಟಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳು ಸೇರಿದಂತೆ ಹಲವು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ರೂಪಿಸಲು ನ್ಯಾಯಾಲಯವು ನಿರ್ದೇಶಿಸಿತು.

ಮಲಹೊರುವ ಪದ್ಧತಿ ಅಮಾನವೀಯ

ಮಲಹೊರುವ ಪದ್ಧತಿಯು ಅತ್ಯಂತ ಅಮಾನವೀಯವಾದ ನಡೆ ಎಂದಿರುವ ಹೈಕೋರ್ಟ್‌ ಮಲಹೊರುವ ಪದ್ಧತಿಯ ನಿಷೇಧ ಮತ್ತು ಅವರಿಗೆ ಪುನರ್ವಸತಿ ಕಾಯಿದೆ – 2013 (ಮಲಹೊರುವವರ ಕಾಯಿದೆ) ಅನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸುವ ಸಂಬಂಧ ಹಲವು ನಿರ್ದೇಶನಗಳನ್ನು ಈ ವರ್ಷ ಹೊರಡಿಸಿತು.

ಫ್ರಾಂಕ್ಲಿನ್‌ ಟೆಂಪಲ್ಟನ್‌ ಟ್ರಸ್ಟೀ ಸಾಲ ಯೋಜನೆ ವಿಚಾರಣೆ

ಆರು ಸಾಲ ಯೋಜನೆಗಳನ್ನು ರದ್ದುಪಡಿಸಿರುವ ಫ್ರಾಂಕ್ಲಿನ್ ಟೆಂಪಲ್ಟನ್ ನಿರ್ಧಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ಸಾಧ್ಯ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ಯೋಜನೆಯನ್ನು ಅಂತ್ಯಗೊಳಿಸುವುದಕ್ಕೂ ಮುನ್ನ ನಿಯಮಾವಳಿಗಳ ಪ್ರಕಾರ ಯೂನಿಟ್‌ ಹೋಲ್ಡರ್‌ಗಳ ಒಪ್ಪಿಗೆ ಪಡೆಯಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿತ್ತು.

ಓಐಸಿ ಕಾರ್ಡ್‌ ಹೊಂದಿರುವವರು ಭಾರತೀಯ ಪ್ರಜೆಗಳು ಎಂದು ಪರಿಗಣಿಸಬೇಕು

ಹೊರದೇಶಗಳಲ್ಲಿ ಹುಟ್ಟಿದ ಭಾರತೀಯರ ಅಪ್ರಾಪ್ತ ವಯಸ್ಸಿನ ಮಕ್ಕಳಿಗೂ ಭಾರತದ ಪ್ರಜೆಗಳಿಗಿರುವ ಹಕ್ಕುಗಳು, ಕರ್ತವ್ಯಗಳು, ಸ್ಥಾನಮಾನ ಇರಬೇಕು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದ್ದು, ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಉದ್ದೇಶದಿಂದ ಓಐಸಿ (ಹೊರದೇಶಲ್ಲಿರುವ ಭಾರತೀಯ ಪೌರರು) ಕಾರ್ಡ್‌ ಹೊಂದಿರುವವರನ್ನು ಭಾರತೀಯ ಪ್ರಜೆಗಳು ಎಂದು ಪರಿಗಣಿಸಬೇಕು ಎಂದು ಹೇಳಿತ್ತು.

ಇಚ್ಛೆಪಟ್ಟವರನ್ನು ವಿವಾಹವಾಗುವುದು ಅವನ/ಅವಳ ಮೂಲಭೂತ ಹಕ್ಕು

ಜಾತಿ ಅಥವಾ ಧರ್ಮದ ಹೊರತಾಗಿ ಇಚ್ಛೆಪಟ್ಟ ವ್ಯಕ್ತಿಯನ್ನು ವಿವಾಹವಾಗುವುದು ಸಂವಿಧಾನದ ಅಡಿ ವ್ಯಕ್ತಿಗೆ ದೊರೆತಿರುವ ಮೂಲಭೂತ ಹಕ್ಕಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಪ್ರಕರಣವೊಂದರಲ್ಲಿ ಆದೇಶಿಸಿತು. ಮಹಿಳೆಯ ಪ್ರಿಯಕರ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಮನವಿ ಮನ್ನಿಸಿ ಆಕೆಯ ಬಿಡುಗಡೆಗೆ ಆದೇಶಿಸಿದ್ದ ನ್ಯಾಯಾಲಯವು ಮೇಲಿನಂತೆ ಹೇಳಿತ್ತು.

ಪಿಂಚಣಿಯು ಉದ್ಯೋಗಿಯ ರದ್ದುಪಡಿಸಲಾಗದ ಹಕ್ಕು

ಪಿಂಚಣಿ ಅಥವಾ ನಿವೃತ್ತಿ ವೇತನ ಎಂಬುದು ಔದಾರ್ಯ, ದಾನ ಅಥವಾ ಅನಪೇಕ್ಷಿತ ಪಾವತಿಯಲ್ಲ ಬದಲಿಗೆ ಪ್ರತಿಯೊಬ್ಬ ನೌಕರನ ರದ್ದುಗೊಳಿಸಲಾಗದ ಹಕ್ಕು ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದೆ. ನಿವೃತ್ತಿಯ 21 ವರ್ಷಗಳ ಬಳಿಕವೂ ಪಿಂಚಣಿಗಾಗಿ ಹೋರಾಟ ನಡೆಸುತ್ತಿರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುಚ್ಚಕ್ತಿ ಪ್ರಸರಣ ನಿಗಮ ನಿಯಮಿತದ ನೌಕರ ತಿಮ್ಮಯ್ಯ ಅವರ ಅರ್ಜಿಯನ್ನು ಆಲಿಸಿದ ಪೀಠ ಕೆಪಿಟಿಸಿಎಲ್‌ಗೆ ಪರಿಹಾರ ಒದಗಿಸುವಂತೆ ಸೂಚಿಸಿತು.

ಅತ್ಯಾಚಾರ ಆರೋಪಿಗೆ ಗರಿಷ್ಠ ಶಿಕ್ಷೆಗೆ ಶಿಫಾರಸ್ಸು

ಕೊಲೆಗಿಂತಲೂ ಸಾಮೂಹಿಕ ಅತ್ಯಾಚಾರ ಅತ್ಯಂತ ಘೋರ ಎಂದಿರುವ ಕರ್ನಾಟಕ ಹೈಕೋರ್ಟ್‌ ಹಾಲಿ ಇರುವ ಜೀವಾವಧಿ ಶಿಕ್ಷೆ ಹಾಗೂ ದಂಡದ ಜೊತೆಗೆ ಮರಣದಂಡನೆ ಶಿಕ್ಷೆ ವಿಧಿಸಲು ಶಿಫಾರಸ್ಸು ಮಾಡಿದೆ. ಬೆಂಗಳೂರಿನಲ್ಲಿ 2012ರಲ್ಲಿ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಏಳು ಮಂದಿಗೆ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿದ್ದ ನ್ಯಾಯಾಲಯವು ಮೇಲಿನಂತೆ ಶಿಫಾರಸು ಮಾಡಿತ್ತು.

ಎನ್‌ಎಲ್‌ಎಸ್‌ಐಯು ಸ್ಥಳೀಯ ಮೀಸಲಾತಿ ವಜಾ

ರಾಜ್ಯದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ಶೇ. 25ರಷ್ಟು ಮೀಸಲಾತಿ ಕಲ್ಪಿಸುವ 2020ರ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ತಿದ್ದುಪಡಿ ಕಾಯಿದೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿತು. ಸ್ಥಳೀಯರಿಗೆ ಶೇ. 25 ಮೀಸಲಾತಿ ಕಲ್ಪಿಸುವುದನ್ನು ಪ್ರಶ್ನಿಸಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾ. ಬಿ ವಿ ನಾಗರತ್ನ ಮತ್ತು ನ್ಯಾ. ರವಿ ಹೊಸಮನಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಬೀದರ್‌ನಲ್ಲಿ ರಾಷ್ಟ್ರದ್ರೋಹ ಪ್ರಕರಣ

ಬೀದರ್‌ನ ಶಾಹೀನ್‌ ಶಿಕ್ಷಣ ಸಂಸ್ಥೆಯ ಅಪ್ರಾಪ್ತ ವಿದ್ಯಾರ್ಥಿಗಳ ಕಾನೂನುಬಾಹಿರ ವಿಚಾರಣೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ತನಿಖಾಧಿಕಾರಿಯು ಪೊಲೀಸ್‌ ಸಮವಸ್ತ್ರದಲ್ಲಿದ್ದರೇ ಅಥವಾ ಸಾಮಾನ್ಯ ಧಿರಿಸು ಧರಿಸಿದ್ದರೆ, ಅವರು ಮಕ್ಕಳನ್ನು ವಿಚಾರಣೆಗೆ ಒಳಪಡಿಸಲು ಸೂಕ್ತ ತರಬೇತಿಯನ್ನು ಹೊಂದಿದ್ದರೆ ಎಂದು ಪ್ರಶ್ನಿಸಿತ್ತು. ಸಿಎಎ ಬಗ್ಗೆ ಜಾಗೃತಿಮೂಡಿಸುವ ಸಲುವಾಗಿ ಶಾಲೆಯಲ್ಲಿ ಮಕ್ಕಳ ನಾಟಕ ಏರ್ಪಡಿಸಿದ್ದನ್ನು ಆಧರಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪ್ರತಿನಿಧಿ ನೀಡಿದ್ದ ದೂರು ಆಧರಿಸಿ ಪೊಲೀಸರು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಯ ತಾಯಿಯೊಬ್ಬರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಮತ್ತು ವಿದ್ಯಾರ್ಥಿನಿಯೊಬ್ಬರ ತಾಯಿಯನ್ನು ಬಂಧಿಸಲಾಗಿತ್ತು. ಅವರು ಆನಂತರ ಜಾಮೀನಿನ ಮೇಲೆ ಬಿಡುಗಡೆಯಾದರು.

ಅಮೂಲ್ಯ ಲಿಯೋನಾ ಪ್ರಕರಣ

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನಾ ಅವರು ಪಾಕಿಸ್ತಾನದ ಪರ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಅಮೂಲ್ಯರ ಹೇಳಿಕೆಯಿಂದ ದೇಶದ ಸಮಗ್ರತೆಗೆ ಧಕ್ಕೆಯಾಗಿದ್ದು, ಸದರಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸುವಂತೆ ಕೋರಿದ್ದ ಮನವಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಅರ್ಜಿದಾರರ ವಕೀಲರಿಗೆ ಬೆವರಿಳಿಸಿತ್ತು. “ಪ್ರಕರಣವನ್ನು ಎನ್‌ಐಎ ವರ್ಗಾಯಿಸಲು ಅಂಥ ವಿಶೇಷ ಏನಿದೆ?” ಎಂದು ಪೀಠ ಪ್ರಶ್ನಿಸಿತ್ತು. ಮುಂದೆ ಈ ಮನವಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com