ಸಿಎಎಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ: ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ಸೂಚನೆ

ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ಕೇಂದ್ರಕ್ಕೆ ನೋಟಿಸ್ ನೀಡಿದ್ದು, ಏಪ್ರಿಲ್ 2ರೊಳಗೆ ಉತ್ತರ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 9ರಂದು ನಡೆಯಲಿದೆ.
ಸುಪ್ರೀಂ ಕೋರ್ಟ್, ಪೌರತ್ವ ತಿದ್ದುಪಡಿ ಕಾಯಿದೆ
ಸುಪ್ರೀಂ ಕೋರ್ಟ್, ಪೌರತ್ವ ತಿದ್ದುಪಡಿ ಕಾಯಿದೆ

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ- 2019) ಪರಿಣಾಮಕಾರಿ ಜಾರಿಗಾಗಿ ಇತ್ತೀಚಿಗೆ ಅಧಿಸೂಚನೆ ಹೊರಡಿಸಲಾದ ಪೌರತ್ವ (ತಿದ್ದುಪಡಿ) ನಿಯಮಾವಳಿ- 2024ಕ್ಕೆ ತಡೆ ನೀಡುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಈ ಸಂಬಂಧ ಕೇಂದ್ರಕ್ಕೆ ನೋಟಿಸ್‌ ನೀಡಿರುವ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಏಪ್ರಿಲ್ 2ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 9ರಂದು ನಡೆಯಲಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಂದ್ರ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿದರು. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಇದನ್ನು ವಿರೋಧಿಸಿದರು.

"ತಡೆಯಾಜ್ಞೆಯ ಅರ್ಜಿಗೆ ಉತ್ತರಿಸಲು ನಾಲ್ಕು ವಾರಗಳು ತುಂಬಾ ಹೆಚ್ಚೇ ಆಯಿತು. ಸಿಎಎ ಮಂಡಿಸಿದ ನಾಲ್ಕು ವರ್ಷಗಳ ಬಳಿಕ ನಿಯಮಾವಳಿಗಳನ್ನು ವಿಧಿಸಲಾಗುತ್ತಿದೆ. 2020ರಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಈ ನಿಯಮಗಳು ಸಂಸತ್ತಿಗೆ ಎಡತಾಕುತ್ತಿದ್ದರೂ ಇದೀಗ ಅಧಿಸೂಚನೆ ಹೊರಡಿಸಲಾಗಿದೆ. ಈಗ ಪೌರತ್ವ ನೀಡಿದರೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಒಮ್ಮೆ ಪೌರತ್ವ ನೀಡಿದ ಬಳಿಕ ಅದನ್ನು ಹಿಂಪಡೆಯುವಂತಿಲ್ಲ" ಎಂದು ವಾದಿಸಿದರು.

ಸಿಎಎ ಮಂಡಿಸಿದ ಸುಮಾರು ನಾಲ್ಕು ವರ್ಷಗಳ ನಂತರ ನಿಯಮಾವಳಿಗಳನ್ನು ವಿಧಿಸುವ ಹಠಾತ್ ತುರ್ತು ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪಿಸಿದ ಮೆಹ್ತಾ, "ಸಿಬಲ್‌ ಅವರು ಶಾಸನಬದ್ಧ ನಿಯಮಗಳಿಗೆ ತಡೆಯಾಜ್ಞೆ ಕೋರುತ್ತಿದ್ದಾರೆ" ಎಂದರು. ಪ್ರತಿಕ್ರಿಯೆ ಸಲ್ಲಿಸಲು ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡುವುದಾಗಿ ನ್ಯಾಯಾಲಯ ಹೇಳಿತು.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವಾಗ ನಿಯಮಗಳಂತೆ ಯಾವುದೇ ಪೌರತ್ವವನ್ನು ನೀಡದಿರಲು ಸರ್ಕಾರ ಒಪ್ಪಬೇಕು ಎಂದು ವಾದಿಸಿದರು. ಹಿರಿಯ ವಕೀಲ ರಂಜಿತ್ ಕುಮಾರ್ ಕೂಡ ವಾದ ಮಂಡಿಸಿದರು.

 ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ

ಸಿಎಎ, ಅಕ್ರಮ ವಲಸಿಗರನ್ನು ವ್ಯಾಖ್ಯಾನಿಸುವ 1955ರ ಪೌರತ್ವ ಕಾಯಿದೆಯ ಸೆಕ್ಷನ್ 2ಕ್ಕೆ ಸಂಸತ್ತು 2019ರಲ್ಲಿ ತಿದ್ದುಪಡಿ ಮಾಡಿತ್ತು. ತಿದ್ದುಪಡಿ ವೇಳೆ ಕಾಯಿದೆಯ ಸೆಕ್ಷನ್ 2(1)(ಬಿ) ಗೆ ಹೊಸ ನಿಯಮಾವಳಿ ಸೇರಿಸಿದ್ದು ಆಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್, ಬೌದ್ಧ,ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಮತ್ತು 1920ರ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ- ಅಥವಾ 1946ರ ವಿದೇಶಿಯರ ಕಾಯಿದೆಯಡಿ ಕೇಂದ್ರ ಸರ್ಕಾರದಿಂದ ವಿನಾಯಿತಿ ಪಡೆದವರನ್ನು "ಅಕ್ರಮ ವಲಸಿಗ" ಎಂದು ಪರಿಗಣಿಸಲಾಗುವುದಿಲ್ಲ. ಪರಿಣಾಮವಾಗಿ, ಅಂತಹ ವ್ಯಕ್ತಿಗಳು 1955ರ ಕಾಯಿದೆ ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿತ್ತು.

ಆದರೆ ಸಿಎಎ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಕಾಯಿದೆಯಿಂದ ಹೊರಗಿಟ್ಟಿದ್ದು ದೇಶದೆಲ್ಲೆಡೆ ಪ್ರತಿಭಟನೆಗೆ ಕಾರಣವಾಗಿ ಅನೇಕ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದವು.

ಐಯುಎಂಎಲ್, ಅಸ್ಸಾಂ ಕಾಂಗ್ರೆಸ್ ನಾಯಕ ದೇಬಬ್ರತಾ ಸೈಕಿಯಾ, ಅಸ್ಸಾಂ ಜಾತಿಯಾತಾವಾದಿ ಯುವ ಛಾತ್ರ ಪರಿಷತ್ (ಪ್ರಾದೇಶಿಕ ವಿದ್ಯಾರ್ಥಿ ಸಂಘಟನೆ), ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸೇರಿದಂತೆ ಕೆಲ ವ್ಯಕ್ತಿಗಳು, ಸಂಘ ಸಂಸ್ಥೆಗಳು ಕಾಯಿದೆ ಮತ್ತು ಈಗಿನ ನಿಯಮಾವಳಿಯನ್ನು ತಡೆಹಿಡಿಯುವಂತೆ ಕೋರಿವೆ. ಸಿಎಎ ಧರ್ಮದ ಆಧಾರದ ಮೇಲೆ ಮುಸ್ಲಿಮರ ವಿರುದ್ಧ ತಾರತಮ್ಯ ಎಸಗುತ್ತದೆ ಎಂದು ವಾದಿಸಿದ್ದವು.

Related Stories

No stories found.
Kannada Bar & Bench
kannada.barandbench.com