ನ್ಯಾಯಾಲಯಗಳಲ್ಲಿ ಸಾಕ್ಷಿ, ಆರೋಪಿಗಳಿಗೆ ಗೌರವ ಸೂಚಕ ಸಂಬೋಧನೆ: ಕಾನೂನು ಮತ್ತು ನೀತಿ-2023ಕ್ಕೆ ಸಂಪುಟದ ಅನುಮೋದನೆ

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಕಾನೂನು ಮತ್ತು ನೀತಿ-2023 ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಅನುಸೂಚಿ-1ರ ಅಂಶ 28ರನ್ವಯ ಅನುಮೋದನೆ.
Vidhana Soudha
Vidhana Soudha

ನ್ಯಾಯಾಲಯಗಳಲ್ಲಿ ಸಾಕ್ಷಿ ಮತ್ತು ಆರೋಪಿಗಳ ಹೆಸರುಗಳನ್ನು ಪೂರ್ವಪ್ರತ್ಯಯವಿಲ್ಲದೆ (ಗೌರವ ಸೂಚಕಗಳು) ಕೂಗುವ ಹಳೆಯ ಮತ್ತು ಮುಜುಗರವನ್ನು ಉಂಟು ಮಾಡುವಂಥ ಪದ್ಧತಿಗೆ ರಾಜ್ಯ ಸರ್ಕಾರವು ಕೊನೆ ಹಾಡಲಿದೆ. ಈ ಸಂಬಂಧ ʼಕಾನೂನು ಮತ್ತು ನೀತಿ-2023ʼಗೆ ಸಚಿವ ಸಂಪುಟವು ಗುರುವಾರ ಒಪ್ಪಿಗೆ ನೀಡಿದೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಕಾನೂನು ಮತ್ತು ನೀತಿ-2023 ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಅನುಸೂಚಿ-1ರ ಅಂಶ 28ರನ್ವಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ತಿಳಿಸಿದ್ದಾರೆ.

ಈಗ ಜಾರಿಯಲ್ಲಿರುವ ಪದ್ಧತಿಯಲ್ಲಿ ಸಾಕ್ಷಿ, ಪರಿಣತ ಸಾಕ್ಷಿ ಮತ್ತು ಆರೋಪಿಗಳನ್ನು ಕರೆಯುವಾಗುವ ಅವರ ಹೆಸರಿನೊಂದಿಗೆ ಪೂರ್ವಪ್ರತ್ಯಯಗಳನ್ನು ಬಳಸದೇ, ಅವರ ಹೆಸರನ್ನು ಬಹಿರಂಗವಾಗಿ ಕೂಗಲಾಗುತ್ತದೆ. ಹೀಗೆ ಕರೆಯುವುದು ಮುಜುಗರ ಉಂಟು ಮಾಡುತ್ತದೆ ಎಂದು ವಿವರಿಸಲಾಗಿದೆ. 

ನೀತಿಯಲ್ಲಿರುವ ಪ್ರಮುಖ ಅಂಶಗಳು

  • ಮಾನವ ಹಕ್ಕುಗಳನ್ನು ಗೌರವಿಸುವ ವ್ಯವಸ್ಥೆಗೆ ಬಲ ತುಂಬುವುದು.

  • ನ್ಯಾಯಾಲಯ, ಅರೆ ನ್ಯಾಯಾಂಗ ಸಂಸ್ಥೆ ಮತ್ತು ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳ ಮೂಲಕ ವಿವಾದಗಳಿಗೆ ತ್ವರಿತ ಪರಿಹಾರ ಒದಗಿಸುವ ಮೂಲಕ ಜೀವನ ಗುಣಮಟ್ಟ ಉತ್ತಮಪಡಿಸುವುದು.

  • ಶಾಂತಿ, ಪ್ರಗತಿಗಾಗಿ ವ್ಯಾಜ್ಯ ಮುಕ್ತ ಗ್ರಾಮ ರೂಪಿಸುವುದು.

  • ನ್ಯಾಯವನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವುದು, ಸಾಕ್ಷಿಗಳ ಘನತೆ ಮತ್ತು ಗೌರವವನ್ನು ರಕ್ಷಿಸುವುದು. ವ್ಯಾಜ್ಯಗಳತ್ತ ಸರ್ಕಾರದ ಧೋರಣೆಯಲ್ಲಿ ಬದಲಾವಣೆ ತರುವುದು.

  • ಸಾರ್ವಜನಿಕ ಕಾನೂನು ಶಿಕ್ಷಣಕ್ಕಾಗಿ ಕ್ರಮಗಳನನು ಆರಂಭಿಸುವುದು. ಗುಣಾತ್ಮಕ, ಸ್ಪಂದನಾತ್ಮಕ ಮತ್ತು ವೃತ್ತಿಪರ ಮೌಲ್ಯಗಳಿಗೆ ಬದ್ಧರಾಗಿರುವ ಪದವೀಧರರಿಗೆ ತರಬೇತಿಗಾಗಿ ಕಾನೂನು ಶಿಕ್ಷಣವನ್ನು ಬಲಪಡಿಸುವುದು.

  • ವ್ಯಾಜ್ಯಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ರೂಪಿಸುವುದು ಮತ್ತು ಅನಗತ್ಯವಾಗಿ ನಾಗರಿಕರನ್ನು ನ್ಯಾಯಾಲಯಗಳಿಗೆ ಓಡಾಡಿಸುವುದನ್ನು ತಡೆಯುವುದು.

  • ಕಾನೂನು ಶಿಕ್ಷಣವನ್ನು ಒದಗಿಸಲು ವಕೀಲ ವಕೀಲರ ಅಕಾಡೆಮಿ ಸ್ಥಾಪನೆ, ಅಗತ್ಯವಿರುವ ಕಡೆಗಳಲ್ಲಿ ಮಾದರಿ ನ್ಯಾಯಾಲಯಗಳನ್ನು ಸ್ಥಾಪಿಸಿವುದು. ರೈತರು ಮತ್ತು ದುರ್ಬಲ ವರ್ಗದವರಿಗೆ ಕಾನೂನು ನೆರವಿನ ಮೂಲಕ ಒಳಿತು ಮಾಡುವುದು.

Kannada Bar & Bench
kannada.barandbench.com