ರಾಜ್ಯ ವಿಪತ್ತು ನಿರ್ವಹಣಾ ಯೋಜನೆಗೆ ಸಚಿವ ಸಂಪುಟ ಅನುಮೋದನೆ: ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ

ರಾಜ್ಯ ವಿಪತ್ತು ನಿರ್ವಹಣಾ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ಯೋಜನೆಯ ಪ್ರತಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರವು ಸಲ್ಲಿಸಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬರ, ಪ್ರವಾಹ, ಸಾಂಕ್ರಾಮಿಕ ಕಾಯಿಲೆಗಳು ಸೇರಿದಂತೆ ಪ್ರಕೃತಿ ವಿಕೋಪಗಳನ್ನು ಎದುರಿಸಲು 2021-22ನೇ ಸಾಲಿನ ‘ರಾಜ್ಯ ವಿಪತ್ತು ನಿರ್ವಹಣಾ ಯೋಜನೆ’ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿತು.

ರಾಜ್ಯ ಹೈಕೋರ್ಟ್‌ನ ಕಾನೂನು ಸೇವೆಗಳ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಎ. ಮಲ್ಲಿಕಾರ್ಜುನ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಸರ್ಕಾರದ ಪರ ವಕೀಲರು, ರಾಜ್ಯ ವಿಪತ್ತು ನಿರ್ವಹಣಾ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ಯೋಜನೆಯ ಪ್ರತಿಯನ್ನು ಪೀಠಕ್ಕೆ ಒದಗಿಸಿದರು.

ಅದನ್ನು ಅಧಿಕೃತವಾಗಿ ಪರಿಗಣಿಸಿದ ನ್ಯಾಯಾಲಯವು ಅನುಮೋದನೆ ಪಡೆದಿರುವ ರಾಜ್ಯ ವಿಪತ್ತು ನಿರ್ವಹಣಾ ಯೋಜನೆಯ ಪ್ರತಿಯನ್ನು ಅರ್ಜಿದಾರರ ಪರ ವಕೀಲರಿಗೆ ಒದಗಿಸಬೇಕು. ಅರ್ಜಿದಾರರ ಪರ ವಕೀಲರು, ಯೋಜನೆಯನ್ನು ಪರಿಶೀಲಿಸಿ ಯಾವುದಾದರೂ ಆಕ್ಷೇಪಣೆಗಳಿದ್ದರೆ ನ್ಯಾಯಾಲಯಕ್ಕೆ ತಿಳಿಸಬಹುದು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com