
ಬೆಂಗಳೂರು ಅರಮನೆ ವಶಪಡಿಸಿಕೊಂಡಿರುವ 1997ರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆಯ ಸಿಂಧುತ್ವ ಎತ್ತಿ ಹಿಡಿಯಲು ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನದ ನಡುವಿನ ಸಂಘರ್ಷ ತಾರಕಕ್ಕೇರುವ ಲಕ್ಷಣ ಸ್ಪಷ್ಟವಾಗಿದೆ.
ಅರಮನೆ ಮೈದಾನದ ಮಾಲೀಕತ್ವ ಕುರಿತ ಮೂಲದಾವೆ ಇತ್ಯರ್ಥವಾದ ಬಳಿಕ ಟಿಡಿಆರ್ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ತೀರ್ಮಾನಿಸಿದೆ.
ಟಿಡಿಆರ್ ಪರಿಹಾರ ನೀಡಲು ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮೈಸೂರು ರಾಜಮನೆತನವು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದರಿಂದ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದೆ.
ಇದೇ ಪ್ರಕರಣದಲ್ಲಿ 2001ರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಉಲ್ಲಂಘಿಸಿ ಬೆಂಗಳೂರು ಅರಮನೆಯ ಮೈದಾನದಲ್ಲಿ 2 ಲಕ್ಷ ಚದರ ಮೀಟರ್‌ನಷ್ಟು ಖಾಯಂ ಕಟ್ಟಡ ನಿರ್ಮಿಸಿರುವ ಮೈಸೂರು ಮಹಾರಾಜರ ಉತ್ತರಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸಹ ಸಂಪುಟವು ನಿರ್ಧಾರ ಕೈಗೊಂಡಿದೆ.
ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಿರ್ಮಾಣ ಮಾಡಿರುವ 2 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳನ್ನು 15 ದಿನಗಳ ಒಳಗಾಗಿ ತೆರವುಗೊಳಿಸುವಂತೆ ಜನವರಿ 9ರಂದು ಸರ್ಕಾರದಿಂದ ನೋಟಿಸ್ ಜಾರಿ ಮಾಡಲಾಗಿದೆ. ಈ ಸ್ಥಳದಲ್ಲಿ ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದಿಂದ ಅನುಮತಿ ನೀಡದಿರಲು ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ.
1996-97ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್ ಡಿ ದೇವೇಗೌಡ, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ ಹಾಗೂ ಮೈಸೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆಯನ್ನು ಅಂಗೀಕರಿಸಿ ರಾಜಮನೆತನದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿತ್ತು. ಈ ಬಗ್ಗೆ ರಾಜಮನೆತನವು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯವು ರಾಜ್ಯ ಸರ್ಕಾರದ ಕ್ರಮ ಎತ್ತಿ ಹಿಡಿದಿತ್ತು.
ಈ ತೀರ್ಪಿನ ವಿರುದ್ಧ ರಾಜಮನೆತನ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2001ರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದ್ದು, ಅಂದಿನಿಂದ ಪ್ರಕರಣ ಬಾಕಿ ಉಳಿದಿದೆ.
ಇದರ ನಡುವೆ ರಾಜ್ಯ ಸರ್ಕಾರವು ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ 15.7 ಎಕರೆ ಜಾಗವನ್ನು ಬಳಕೆ ಮಾಡಿತ್ತು. ಈ ಜಮೀನಿಗೆ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋದ ರಾಜಮನೆತನಕ್ಕೆ ಬಳ್ಳಾರಿ ರಸ್ತೆಯಲ್ಲಿ ಪ್ರತಿ ಚದರ ಮೀಟರ್‌ಗೆ 2.83 ಲಕ್ಷ ರೂಪಾಯಿಯಂತೆ ಹಾಗೂ ಜಯಮಹಲ್ ರಸ್ತೆಯಲ್ಲಿ 2.04 ಲಕ್ಷ ಬಳ್ಳಾರಿ ರಸ್ತೆಯಲ್ಲಿ 1.83 ಲಕ್ಷ ರೂಪಾಯಿಯಂತೆ ಒಟ್ಟು 3,011 ಕೋಟಿ ರೂಪಾಯಿ ಮೌಲ್ಯದ ಟಿಡಿಆರ್‌ನ್ನು ಪರಿಹಾರದ ರೂಪದಲ್ಲಿ ನೀಡಲು 2014ರಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಆರ್ಥಿಕ ಹೊರೆ ಆಗುತ್ತದೆ ಎಂದು ಮೇಲ್ಮನವಿ ಸಲ್ಲಿಸಿತ್ತು. ಇದನ್ನೂ ಹೈಕೋರ್ಟ್ ವಜಾಗೊಳಿಸಿತ್ತು.
ಇದೀಗ ರಾಜಮನೆತನವು ಟಿಡಿಆರ್ ಪರಿಹಾರ ನೀಡದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಸರ್ಕಾರಕ್ಕೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ.
ಇದರಿಂದ ಕುಪಿತಗೊಂಡಿರುವ ರಾಜ್ಯ ಸರ್ಕಾರವು ಬೆಂಗಳೂರು ಅರಮನೆ ವಶಪಡಿಸಿಕೊಂಡಿರುವ 1997ರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆಯ ಸಿಂಧುತ್ವ ಎತ್ತಿ ಹಿಡಿಯಲು ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲು ತೀರ್ಮಾನಿಸಿದೆ. ಅರಮನೆ ಮೈದಾನದ ಮಾಲೀಕತ್ವ ಕುರಿತ ಮೂಲದಾವೆ ಇತ್ಯರ್ಥವಾದ ಬಳಿಕ ಟಿಡಿಆರ್ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಅಲ್ಲದೇ, 2001ರಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದರೂ 2 ಲಕ್ಷ ಚದರ ಮೀಟರ್‌ನಲ್ಲಿ ಅನಧಿಕೃತ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಈ ಕಟ್ಟಡಗಳ ನೆಲಸಮಕ್ಕೆ ಜನವರಿ 9ರಂದು ನೋಟಿಸ್ ಜಾರಿ ಮಾಡಲಾಗಿದೆ. ಇಲ್ಲಿ ಯಾವುದೇ ಕಾರ್ಯಕ್ರಮ ನಡೆಯಲು ಸರ್ಕಾರ ಅನುಮತಿ ನೀಡಬಾರದು ಎಂಬುದು ಸೇರಿದಂತೆ ಸರಣಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಎಚ್‌ಎಂಟಿ ಲಿಮಿಟೆಡ್ ಸ್ವಾಧೀನದಲ್ಲಿರುವ 14,300 ಕೋಟಿ ರೂಪಾಯಿ ಮೌಲ್ಯದ ಅರಣ್ಯ ಭೂಮಿಯನ್ನು ಹಿಂಪಡೆಯಲು ಅಗತ್ಯ ಕ್ರಮ ಜರುಗಿಸಲು ಸಂಪುಟ ನಿರ್ಧರಿಸಿದೆ.
ಎಚ್‌ಎಂಟಿ ಕಾರ್ಖಾನೆಯು ಬೆಂಗಳೂರಿನಲ್ಲಿ ಹೊಂದಿರುವ ಪ್ರದೇಶಗಳನ್ನು ಕೇಂದ್ರ ಸರ್ಕಾರದ ಇತರೆ ಸಂಸ್ಥೆಗಳಿಗೆ ಹಸ್ತಾಂತರಿಸಲು ನಿರಾಕ್ಷೇಪಣಾ ಪತ್ರ ನೀಡುವ ಕುರಿತು ಅಧಿಕಾರಿಗಳು ಸ್ವಯಂ ನಿರ್ಧಾರ ಕೈಗೊಂಡಿದ್ದು, ಸಚಿವ ಸಂಪುಟದ ಪೂರ್ವಾನುಮತಿ ಅಥವಾ ಉನ್ನತ ಮಟ್ಟದ ಸಮಿತಿಯ ಅನುಮೋದನೆ ಪಡೆಯದೇ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಿಂಪಡೆಯಲು ಅರಣ್ಯ ಸಚಿವರು ತೆಗೆದುಕೊಂಡಿರುವ ನಿರ್ಣಯಕ್ಕೆ ರಾಜ್ಯ ಸಚಿವ ಸಂಪುಟ ಘಟನೋತ್ತರ ಮಂಜೂರಾತಿ ನೀಡಿದೆ.
2015ರಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯ ಸಭೆಗಳಲ್ಲಿ ಹಲವು ಬಾರಿ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ ಕುರಿತು ಚರ್ಚೆ ನಡೆಸಲಾಗಿತ್ತು. 17.07.2018 ರಂದು ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಯಲ್ಲಿ ಇನ್ನೂ ಹಸಿರು ಹೊದಿಕೆಯನ್ನು ಹೊಂದಿದ ಅರಣ್ಯ ಭೂಮಿಯನ್ನು ಎಚ್‌ಎಂಟಿ ಸಂಸ್ಥೆಯು ಮಾರಾಟ ಮತ್ತು ಹರಾಜು ಮಾಡುತ್ತಿದ್ದು, ಇದು ಬೆಂಗಳೂರಿನ ಒಳಿತಿಗೆ ಅಗತ್ಯವಾದ ಶುದ್ಧಗಾಳಿ, ಮನರಂಜನೆಯನ್ನು ಒದಗಿಸುಂತಹ ವಿರಾಮದಾಯಕ ಪ್ರದೇಶವಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳು ಸ್ವಯಂ ನಿರ್ಧಾರ ಕೈಗೊಂಡು 2020ರಲ್ಲಿ ವಿವಾದಿತ ಭೂಮಿಯ ಡಿನೋಟಿಫಿಕೇಶನ್ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ಕೋರಿದೆ. ಅಧಿಕಾರಿಗಳು 14,300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಲು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು, ಕಾಯ್ದಿರಿಸಿದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಮಧ್ಯಂತರ ಅರ್ಜಿಯನ್ನು ಸಲ್ಲಿಸಿರುವುದು ಕರ್ತವ್ಯ ಲೋಪವಾಗಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಎಚ್‌ಎಂಟಿ ಸಂಸ್ಥೆಯು ಈ ಎಲ್ಲಾ ಭೂಮಿಯನ್ನು ಇತರೆ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿರುವುದರಿಂದ ರಾಜ್ಯಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತದೆ. ಬೆಂಗಳೂರಿಗರಿಗೆ ವಿರಾಮದಾಯಕವಾದ ಪ್ರಶಾಂತ ಪ್ರದೇಶ ನಷ್ಟವಾಗುತ್ತದೆ ಎಂಬುದು ಕಾನೂನು ಇಲಾಖೆಯ ಅಭಿಪ್ರಾಯವಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಹುಬ್ಬಳ್ಳಿಯ ನವನಗರದಲ್ಲಿರುವ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಕಾನೂನು ಇಲಾಖೆಯ ವ್ಯಾಪ್ತಿಯಲ್ಲಿ ಬರುವ 19 ಖಾಸಗಿ ಅನುದಾನಿತ ಕಾನೂನು ಕಾಲೇಜುಗಳ ಬೋಧಕ ಸಿಬ್ಬಂದಿಗೆ 16.03.2019ರಿಂದ ಯುಜಿಸಿಯ 7ನೇ ಪರಿಷ್ಕೃತ ವೇತನ ಶ್ರೇಣಿ ಅನ್ವಯಿಸಲು ಹಾಗೂ 01.01.2016 ರಿಂದ 16.03.2019ರವರೆಗೆ ಯುಜಿಸಿಯ 6ನೇ ವೇತನ ಹಾಗೂ ಪರಿಷ್ಕೃತ 7ನೇ ವೇತನ ಶ್ರೇಣಿಗಳ ಮೂಲ ವೇತನದ ವ್ಯತ್ಯಾಸ ಹಿಂಬಾಕಿ ಮೊತ್ತ ಪಾವತಿಸುವ (ತುಟ್ಟಿ ಭತ್ಯ ಮತ್ತು ಮನೆ ಬಾಡಿಗೆ ಭತ್ಯೆಯ ಹಿಂಬಾಕಿ ಹೊರತುಪಡಿಸಿ) ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ.