ಸಂವಿಧಾನದ ಅನ್ವಯ ಸಂಪುಟದರ್ಜೆ ಸ್ಥಾನಮಾನದ ಮಿತಿ ಶೇ.15 ಮೀರುವಂತಿಲ್ಲ: ಹೈಕೋರ್ಟ್‌

ನಾವು ವೈಯಕ್ತಿಕವಾಗಿ ಶಾಸಕರು/ಸಚಿವರ ವಿರುದ್ಧವಿಲ್ಲ. ಸರ್ಕಾರದ ಆದೇಶದ ವಿರುದ್ಧ ಮಾತ್ರ ಇದ್ದೇನೆ. ಅಧ್ಯಕ್ಷರು/ಮುಖ್ಯಸ್ಥರುಗಳಿಗೆ ಕರ್ನಾಟಕ ಸಚಿವರು ವೇತನ, ಭತ್ಯೆ ಕಾಯಿದೆ 1956ರ ಅಡಿ ವೇತನ ಸಿಗಲಿದೆ ಎಂದು ಅರ್ಜಿದಾರರು ವಾದಿಸಿದರು.
High Court of Karnataka
High Court of Karnataka
Published on

ಸಂವಿಧಾನದ ವಿಧಿಯ ಪ್ರಕಾರ ಸಚಿವ ಸಂಪುಟ ದರ್ಜೆಯ ಸ್ಥಾನಮಾನವು ಶೇ.15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಗಿಂತ ಹೆಚ್ಚು ಮಂದಿಗೆ ಸರ್ಕಾರ ವೇತನ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ಹೇಳಿದೆ.

ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸೌಲಭ್ಯಗಳೊಂದಿಗೆ 34 ಮಂದಿ ಶಾಸಕರನ್ನು ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಹಾಗೂ ದೆಹಲಿ ವಿಶೇಷ ಪ್ರತಿನಿಧಿ, ಸಿಎಂ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಹಲವು ಶಾಸಕರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿರುವುದು ಸಂವಿಧಾನಬಾಹಿರ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಸೂರಿ ಪಾಯಲ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರು “ಹಾಲಿ ಅರ್ಜಿ ಸಲ್ಲಿಸಿದಾಗ 46 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದರು. ಈಗ 129 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದಾರೆ. ನಾವು ಸರ್ಕಾರದ ಆದೇಶವನ್ನು ಮಾತ್ರ ಪ್ರಶ್ನಿಸುತ್ತೇವೆ. ಎಲ್ಲಾ ಪ್ರತಿವಾದಿಗಳನ್ನು ಡಿಲೀಟ್‌ ಮಾಡಬಹುದು. ಶಾಸಕರು ಫಲಾನುಭವಿಗಳಾಗಿದ್ದಾರೆ. ಸರ್ಕಾರದ ಆದೇಶವು ಕಾರ್ಯಕಾರಿ ಆದೇಶ ರೂಪದಲ್ಲಿದ್ದು, ಅದು ಮತ್ತೆ ಅಂಥ ಹುದ್ದೆಗಳನ್ನು ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರವು ಹೊಸದಾಗಿ ಆಯೋಗ, ಸಮಿತಿ, ಪ್ರಾಧಿಕಾರ, ಮಿಷನ್‌, ಕಾರ್ಯಪಡೆಗಳನ್ನು ರೂಪಿಸಿ ಅದಕ್ಕೆ ಶಾಸಕರನ್ನು ನೇಮಿಸಿ ಅಧ್ಯಕ್ಷರನ್ನಾಗಿಸಿದೆ. ನಾವು ವೈಯಕ್ತಿಕವಾಗಿ ಶಾಸಕರು/ಸಚಿವರ ವಿರುದ್ಧವಿಲ್ಲ. ಸರ್ಕಾರದ ಆದೇಶದ ವಿರುದ್ಧ ಮಾತ್ರ ಇದ್ದೇವೆ. ಅಧ್ಯಕ್ಷರು/ಮುಖ್ಯಸ್ಥರುಗಳಿಗೆ ಕರ್ನಾಟಕ ಸಚಿವರು ವೇತನ, ಭತ್ಯೆ ಕಾಯಿದೆ 1956ರ ಅಡಿ ವೇತನ ಸಿಗಲಿದೆ. ಈಗ ಶಾಸಕರಿಗೆ ಸಚಿವರಿಗೆ ನೀಡುವ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ” ಎಂದರು.

ಆಗ ಪೀಠವು “ಸಂವಿಧಾನದ 164(1ಎ) ವಿಧಿ ಪ್ರಕಾರ ಸಚಿವರ ಸಂಖ್ಯೆಯು ಶೇ. 15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಸಿರುವ ಮಂದಿಗಿಂತ ಹೆಚ್ಚು ಮಂದಿಗೆ ವೇತನ ನೀಡಲಾಗದು” ಎಂದರು.

ಅಂತಿಮವಾಗಿ ಪೀಠವು “ಪ್ರತಿವಾದಿಗಳನ್ನಾಗಿಸಿರುವ ಶಾಸಕರ ವಿರುದ್ಧ ಯಾವುದೇ ಕೋರಿಕೆ ಇಲ್ಲವಾದ್ದರಿಂದ ಅವರನ್ನು ಪ್ರತಿವಾದಿಗಳ ಸ್ಥಾನದಿಂದ ವಜಾಗೊಳಿಸಬಹುದು. 7.10.2020ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸರ್ಕಾರದ ಆದೇಶವನ್ನು ಮಾತ್ರ ಅರ್ಜಿದಾರರು ಪ್ರಶ್ನಿಸಿದ್ದಾರೆ” ಎಂದು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್‌ 4ಕ್ಕೆ ಮುಂದೂಡಿತು.

Also Read
ವಿಧಾನಸಭೆ, ಪರಿಷತ್‌ನ 42 ಸದಸ್ಯರಿಗೆ ಸಂಪುಟ ದರ್ಜೆ ಸ್ಥಾನಮಾನ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕರ್ನಾಟಕ ವಿಧಾನಸಭೆಯ ಒಟ್ಟು ಸಂಖ್ಯಾಬಲದ ಶೇ.15ರಷ್ಟು ಸಚಿವರಾಗಲು ಅವಕಾಶವಿದೆ. ಅದರಂತೆ 224 ಶಾಸಕರಲ್ಲಿ 34 ಮಂದಿ ಸಚಿವರಾಗಬೇಕು. ಸದ್ಯ ಸಿಎಂ ಸೇರಿ 33 ಮಂದಿ ಸಚಿವರಿದ್ದಾರೆ. ಇದರ ಜೊತೆಗೆ 34 ಮಂದಿ ಶಾಸಕರನ್ನು ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಿಸಿ ಅವರಿಗೆ ಸಂಪುಟದ ದರ್ಜೆ ಸ್ಥಾನಮಾನ, ಸೌಲಭ್ಯ, ವೇತನ, ಭತ್ಯೆಗಳನ್ನು ನೀಡಲಾಗಿದೆ. ಇದು ಸಂವಿಧಾನದ 164 (1) (ಎ)ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಆಗಿದೆ. ಶಾಸಕರಿಗೆ ನಿಗಮ-ಮಂಡಳಿಗಳ ಹುದ್ದೆ ಕೊಡುವುದಕ್ಕೆ ತಕರಾರು ಇಲ್ಲ. ಆದರೆ, ಸಂಪುಟ ದರ್ಜೆ ನೀಡುವುದಕ್ಕೆ ಆಕ್ಷೇಪವಿದೆ. ಅಲ್ಲದೇ ಲಾಭದಾಯಕ ಹುದ್ದೆಗೆ ಸಂಬಂಧಿಸಿದಂತೆ ಸಂವಿಧಾನದ 191ನೇ ವಿಧಿ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Kannada Bar & Bench
kannada.barandbench.com