ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ: ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಉದ್ದೇಶ ಮತ್ತು ತಾವು ಇಂತಹದ್ದೆ ಬೇರೆ ಹುದ್ದೆಯ ಆಕಾಂಕ್ಷಿಯಾಗಿರುವುದನ್ನು ಅರ್ಜಿದಾರರು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿಲ್ಲ. ಹೀಗಾಗಿ, ಇದೊಂದು ಸಾರ್ವಜನಿಕ ಹಿತಾಸಕ್ತಿ ಅಲ್ಲ ಎಂದಿರುವ ನ್ಯಾಯಾಲಯ.
MLAs and MLCs with cabinet rank
MLAs and MLCs with cabinet rank
Published on

ರಾಜ್ಯದಲ್ಲಿ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸೌಲಭ್ಯಗಳೊಂದಿಗೆ ಹಲವು ಶಾಸಕರನ್ನು ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳು ಸೇರಿ ವಿವಿಧ ಸಂಸ್ಥೆಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದ ಕ್ರಮವನ್ನು ಸಂವಿಧಾನಬಾಹಿರ ಎಂದು ಘೋಷಿಸಲು ಕೋರಿ ಸಲ್ಲಿಸಿದ್ದ ಅರ್ಜಿಯು ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ, ಇದರಲ್ಲಿ ವೈಯುಕ್ತಿ ಹಿತಾಸಕ್ತಿ ಅಡಗಿದೆ ಎಂದು ಬುಧವಾರ ಹೇಳಿರುವ ಕರ್ನಾಟಕ ಹೈಕೋರ್ಟ್, ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಬೆಂಗಳೂರು ನಿವಾಸಿ ಸೂರಿ ಪಾಯಲ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಇಂತಹದ್ದೇ ವಿಚಾರವಾಗಿ ಈ ಹಿಂದೆ ಕೆ ಬಿ ವಿಜಯಕುಮಾರ್ ವರ್ಸಸ್ ಕರ್ನಾಟಕ ರಾಜ್ಯ ಹಾಗೂ ಎಸ್ ಉಮಾಪತಿ ವರ್ಸಸ್ ಕರ್ನಾಟಕ ರಾಜ್ಯ ಎರಡೂ ಪ್ರಕರಣಗಳಲ್ಲಿ ಇದೇ ಹೈಕೋರ್ಟ್ ಆದೇಶಗಳನ್ನು ಮಾಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಉದ್ದೇಶ ಮತ್ತು ತಾವು ಇಂತಹದ್ದೆ ಬೇರೆ ಹುದ್ದೆಯ ಆಕಾಂಕ್ಷಿಯಾಗಿರುವುದನ್ನು ಅರ್ಜಿದಾರರು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿಲ್ಲ. ಹೀಗಾಗಿ, ಇದೊಂದು ಸಾರ್ವಜನಿಕ ಹಿತಾಸಕ್ತಿ ಅಲ್ಲ, ವೈಯುಕ್ತಿಕ ಹಿತಾಸಕ್ತಿ ಅರ್ಜಿ ಆಗಿದೆ. ಅಲ್ಲದೆ, ನಿಗಮ, ಮಂಡಳಿ, ಪ್ರಾಧಿಕಾರ, ಸಮಿತಿಯ ಅಧ್ಯಕ್ಷರಿಗೆ ವೇತನ, ಭತ್ಯೆ ನಿಗದಿಪಡಿಸಿರುವ ಸಂಬಂಧಿತ 2017ರ ಸೆಪ್ಟೆಂಬರ್‌ 22ರಂದು ಆದೇಶ ಹೊರಡಿಸಲಾಗಿದ್ದು, ಸಂಬಂಧಪಟ್ಟ ಸಂಸ್ಥೆಗಳಿಂದಲೇ ವೇತನ-ಭತ್ಯೆಗಳನ್ನು ನೀಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ಹೇಳಿದ ಹೈಕೋರ್ಟ್, ಸೂರಿ ಪಾಲಯ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿತು.

ಸಂವಿಧಾನದ 164 (1)(ಇ)ನೇ ವಿಧಿಯ ಪ್ರಕಾರ ರಾಜ್ಯದ ವಿಧಾನಮಂಡಲದ ಒಟ್ಟು ಸಂಖ್ಯಾಬಲಕ್ಕೆ 33 ಸಂಪುಟ ಸಚಿವರು ಇರಬೇಕು. ಆದರೆ, ರಾಜ್ಯದಲ್ಲಿ 34 ಮಂದಿ ಶಾಸಕರು ಸೇರಿ ಒಟ್ಟಯ 159 ಮಂದಿ ಸಚಿವ ದರ್ಜೆ ಸ್ಥಾನಮಾನ ಹೊಂದಿದ್ದು, ಅವರಿಗೆಲ್ಲ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆಗಳ ಕಾಯಿದೆ-1956ರ ಪ್ರಕಾರ ಸೌಲಭ್ಯಗಳನ್ನು ಕೊಡಲಾಗುತ್ತಿದೆ. ಯಾವುದೇ ನಿರ್ದಿಷ್ಟ ಕಾನೂನು ಇಲ್ಲದೆ ಮತ್ತು ಕಾಯ್ದೆಗೆ ತಿದ್ದುಪಡಿ ತರದೇ ಈ ರೀತಿಯ ನೇಮಕಾತಿ ಮತ್ತು ಸೌಲಭ್ಯಗಳು ಸಂವಿಧಾನಬಾಹಿರ ಎಂದು ಅರ್ಜಿದಾರರ ವಾದವಾಗಿತ್ತು.

34 ಮಂದಿ ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಹುದ್ದೆ ನೀಡಿ 2024ರ ಜನವರಿ 26ರಂದು ಸರ್ಕಾರ ಹೊರಡಿಸಿರುವ ಹಾಗೂ 8 ಮಂದಿ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ವಿವಿಧ ದಿನಾಂಕಗಳಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ನೇಮಕಾತಿಯನ್ನು ಸಂವಿಧಾನಬಾರವೆಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

Also Read
ವಿಧಾನಸಭೆ, ಪರಿಷತ್‌ನ 42 ಸದಸ್ಯರಿಗೆ ಸಂಪುಟ ದರ್ಜೆ ಸ್ಥಾನಮಾನ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ನರೇಂದ್ರ ಸ್ವಾಮಿ ವಿರುದ್ಧದ ಅರ್ಜಿ ವಜಾ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ 5(6) ಮತ್ತು 5(7) ಮತ್ತು ಜಲ ಕಾಯಿದೆಗೆ ವಿರುದ್ಧವಾಗಿರುವುದರಿಂದ ಮಳವಳ್ಳಿ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ರದ್ದುಪಡಿಸಿ, ಹೊಸ ಅಧ್ಯಕ್ಷರನ್ನು ನೇಮಿಸುವಂತೆ ಕೋರಿ ಬೆಂಗಳೂರಿನ ಎಂ ಶ್ರೇಯಸ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಇದೇ ವೇಳೆ ಹೈಕೋರ್ಟ್ ಆದೇಶಿದೆ.

Kannada Bar & Bench
kannada.barandbench.com