ಎಚ್‌ಡಿಕೆ, ನಿರಾಣಿ, ಜೊಲ್ಲೆ, ರೆಡ್ಡಿ ಪ್ರಾಸಿಕ್ಯೂಷನ್‌ ಅನುಮತಿಗೆ ರಾಜ್ಯಪಾಲರಿಗೆ ಸಂಪುಟ ಶಿಫಾರಸ್ಸು: ಸಚಿವ ಪಾಟೀಲ್‌

ಕುಮಾರಸ್ವಾಮಿ ಪ್ರಕರಣದಲ್ಲಿ ಎಸ್‌ಐಟಿ ಆರೋಪ ಪಟ್ಟಿ ಕುರಿತು ರಾಜ್ಯಪಾಲರು 2024ರ ಜುಲೈ 29ರಂದು ಸ್ಪಷ್ಟೀಕರಣ ಕೇಳಿದ್ದರು. ಇದಕ್ಕೆ ಎಸ್‌ಐಟಿ ಆಗಸ್ಟ್‌ 16ರಂದು ರಾಜ್ಯಪಾಲರಿಗೆ ಅಗತ್ಯ ಸ್ಪಷ್ಟೀಕರಣ ನೀಡಿದೆ.
H D Kumaraswamy, Murugesh Nirani, Shashikala Jolle, Janardhan Reddy and Karnataka Raj Bhavan
H D Kumaraswamy, Murugesh Nirani, Shashikala Jolle, Janardhan Reddy and Karnataka Raj Bhavan
Published on

ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮತ್ತು ಮುರುಗೇಶ ನಿರಾಣಿ ಅವರ ವಿರುದ್ಧ ಅಭಿಯೋಜನಾ ಮಂಜೂರಾತಿಗೆ ಬಾಕಿಯಿರುವ ವಿಷಯಗಳ ಕುರಿತು ಶೀಘ್ರ ತೀರ್ಮಾನ ಮಾಡಲು ಹಾಗೂ ನ್ಯಾಯದ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಜ್ಯಪಾಲರಿಗೆ ಸಂವಿಧಾನದ 163ನೇ ವಿಧಿ ಅನ್ವಯ ನೆರವು ಮತ್ತು ಸಲಹೆ ನೀಡಲು ರಾಜ್ಯ ಸಚಿವ ಸಂಪುಟವು ಗುರುವಾರ ನಿರ್ಧರಿಸಿದೆ.

“ಸಂವಿಧಾನದ 163 ವಿಧಿ ಅನ್ವಯ ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಸಚಿವ ಸಂಪುಟಕ್ಕೆ ಅವಕಾಶವಿದೆ. ಅದರಂತೆ ಈ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಭ್ರಷ್ಟಾಚಾರ ನಿರೋಧಕ ಕಾಯಿದೆ 1988ರ ಅಡಿಯಲ್ಲಿ ತನಿಖಾ ಸಂಸ್ಥೆಗಳು ಸಲ್ಲಿಸಿರುವ ಹಲವು ಅನುಮೋದನಾ ಅರ್ಜಿಗಳು ರಾಜ್ಯಪಾಲರ ಬಳಿ ಬಾಕಿ ಉಳಿದಿದೆ. ಈ ಅರ್ಜಿಗಳ ತನಿಖೆ ಬಳಿಕ ಕೆಲವು ಪ್ರಕರಣಗಳಲ್ಲಿ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಕಾಯಿದೆ ಸೆಕ್ಷನ್‌ ಹಾಗೂ ವಿವಿಧ ಕಾಯಿದೆಗಳ ಅಡಿಯಲ್ಲಿ ಅನುಮೋದನೆಗಾಗಿ ಮನವಿ ಮಾಡಲಾಗಿದೆ. ಕೆಲವು ಅರ್ಜಿಗಳು ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಅಡಿಯಲ್ಲಿ ಪೂರ್ವಾನುಮತಿಗೆ ರಾಜ್ಯಪಾಲರ ಬಳಿ ಬಾಕಿಯಿವೆ” ಎಂದರು.

Also Read
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ ಮಂಜೂರಾತಿಗೆ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸ್‌ ಮನವಿ

“ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ಅವರ ಪ್ರಕರಣದಲ್ಲಿ 2021ರ ಡಿಸೆಂಬರ್‌ 9ರಂದು, ಮುರುಗೇಶ ನಿರಾಣಿ ಪ್ರಕರಣದಲ್ಲಿ 2024ರ ಫೆಬ್ರವರಿ 26ರಂದು ರಾಜ್ಯಪಾಲರ ಒಪ್ಪಿಗೆ ಕೋರಲಾಗಿದೆ. ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಪ್ರಕರಣದಲ್ಲಿ 2023ರ ನವೆಂಬರ್‌ 21ರಂದು ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 19 ಮತ್ತು ಸಿಆರ್‌ಪಿಸಿ 197 ಅಡಿಯಲ್ಲಿ ಅನುಮೋದನೆ ಕೋರಲಾಗಿದೆ. ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಆರೋಪ ಪಟ್ಟಿ ಕುರಿತು ರಾಜ್ಯಪಾಲರು 2024ರ ಜುಲೈ 29ರಂದು ಸ್ಪಷ್ಟೀಕರಣ ಕೇಳಿದ್ದರು. ಇದಕ್ಕೆ ಎಸ್‌ಐಟಿ ಆಗಸ್ಟ್‌ 16ರಂದು ರಾಜ್ಯಪಾಲರಿಗೆ ಅಗತ್ಯ ಸ್ಪಷ್ಟೀಕರಣ ನೀಡಿದೆ. ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಮೇ 13ರಂದು ಅನುಮೋದನೆಗಾಗಿ ಮನವಿ ಸಲ್ಲಿಸಲಾಗಿದೆ. ವಿಶೇಷವೆಂದರೆ ಕುಮಾರಸ್ವಾಮಿ ಮತ್ತು ಜನಾರ್ದನ ರೆಡ್ಡಿ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನೂ ಅಡಕಗೊಳಿಸಲಾಗಿದೆ ಎಂದರು.

“ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನ್ನು ಸ್ವೀಕರಿಸಲು ಬಾಧ್ಯಸ್ಥರಾಗಿದ್ದು, ಈ ವಿಷಯದಲ್ಲಿ ತಮ್ಮ ವಿವೇಚನೆಯನ್ನು ನ್ಯಾಯಯುತವಾಗಿ ಬಳಸಿಕೊಳ್ಳುವ ವಿಶ್ವಾಸವಿದೆ” ಎಂದರು.

“ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿ ರಾಜ್ಯಪಾಲರಿಗೆ ದೂರು ನೀಡಿದ್ದು, ತರಾತುರಿಯಲ್ಲಿ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಆದರೆ, ಈ ನಾಲ್ಕು ಪ್ರಕರಣಗಳು ಭಿನ್ನವಾಗಿದ್ದು, ಎಲ್ಲಾ ಪ್ರಕ್ರಿಯೆಗಳು ಮುಗಿದರೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಸಾರ್ವಜನಿಕರ ದೃಷ್ಟಿಯಲ್ಲಿ ರಾಜ್ಯಪಾಲರ ಕಚೇರಿ ಬಗ್ಗೆ ತಪ್ಪು ಭಾವನೆ ಬರಬಾರದು ಮತ್ತು ಯಾವುದೇ ಗೊಂದಲ ಆಗಬಾರದು ಎಂದು ಸಚಿವ ಸಂಪುಟ ನೆರವು ಮತ್ತು ಸಲಹೆ ನೀಡಲು ನಿರ್ಧರಿಸಿದೆ” ಎಂದು ವಿವರಿಸಿದ್ದಾರೆ.

Kannada Bar & Bench
kannada.barandbench.com