ದುರ್ಗಾ ಪೂಜೆ: ಪೆಂಡಾಲ್‌ಗಳಿಗೆ ಸಾರ್ವಜನಿಕರು ಪ್ರವೇಶಿಸುವಂತಿಲ್ಲ ಎಂದ ಕಲ್ಕತ್ತಾ ಹೈಕೋರ್ಟ್‌

ದುರ್ಗಾ ಪೂಜೆಯ ಸಮಯದಲ್ಲಿ ಜನದಟ್ಟಣೆ ನಿರ್ಬಂಧಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾನದಂಡ ರೂಪಿಸಬೇಕೆಂದು ಕಲ್ಕತ್ತಾ ಹೈಕೋರ್ಟ್‌ ಸೋಮವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Calcutta High Court
Calcutta High Court

ಕೋವಿಡ್‌- 19 ಹಿನ್ನೆಲೆಯಲ್ಲಿ ದುರ್ಗಾ ಪೂಜೆಯ ಪೆಂಡಾಲ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸಾರ್ವಜನಿಕ ಪ್ರವೇಶ ಇಲ್ಲದ ವಲಯಗಳನ್ನಾಗಿ ಮಾಡುವಂತೆ ಕಲ್ಕತ್ತಾ ಹೈಕೋರ್ಟ್‌ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹಬ್ಬದ ವೇಳೆ ಉಂಟಾಗುವ ಜನದಟ್ಟಣೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಅಜಯ್‌ ಕುಮಾರ್‌ ಡೇ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ಪೀಠ ಈ ಆದೇಶ ನೀಡಿದೆ.

"2020ರ ಮಾರ್ಚ್‌ನಿಂದಲೂ ಮನುಷ್ಯರ ಜೀವನ ಸಾಮಾನ್ಯವಾಗಿಲ್ಲ. ಹೀಗಾಗಿ ಈ ವರ್ಷ ದುರ್ಗಾ ಪೂಜೆ ಹಬ್ಬವನ್ನು ಹೇಗೆ ಆಚರಿಸಬೇಕೆಂಬ ಕುರಿತು ನಿರ್ಬಂಧ ಹೇರಿದರೆ ಉತ್ತಮ”.
ಕಲ್ಕತ್ತಾ ಹೈಕೋರ್ಟ್‌

ನ್ಯಾಯಮೂರ್ತಿಗಳಾದ ಸಂಜೀವ್ ಬ್ಯಾನರ್ಜಿ ಮತ್ತು ಅರಿಜಿತ್ ಬ್ಯಾನರ್ಜಿ ಅವರಿದ್ದ ನ್ಯಾಯಪೀಠ ಸೋಮವಾರ ದುರ್ಗಾ ಪೂಜೆ ವೇಳೆ ಜನದಟ್ಟಣೆ ನಿರ್ಬಂಧಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಸರಿಸಲಾಗುತ್ತಿರುವ ಮಾನದಂಡಗಳನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿತು.

ಪೆಂಡಾಲ್‌ಗಳಿಗೆ ಸಾರ್ವಜನಿಕರು ಪ್ರವೇಶಿಸುವಂತಿಲ್ಲ. ಪೂಜಾರಿಗಳು, ಸಂಘಟಕರಿಗೆ ಈ ನಿರ್ಬಂಧ ಇಲ್ಲ. ಪ್ರವೇಶ ಪಡೆಯುವ ವ್ಯಕ್ತಿಗಳನ್ನು ಗುರುತಿಸಿ ಅವರ ಹೆಸರುಗಳನ್ನು ಪ್ರದರ್ಶಿಸಬೇಕು. ಯಾವುದೇ ಸಮಯದಲ್ಲಿ ಸಣ್ಣ ಪೆಂಡಾಲ್‌ಗಳಲ್ಲಿ 15 ಹಾಗೂ ದೊಡ್ಡ ಪೆಂಡಾಲ್‌ಗಳಲ್ಲಿ 30ಕ್ಕಿಂತ ಹೆಚ್ಚು ಜನ ಸೇರಬಾರದು. ದೊಡ್ಡ ಪೆಂಡಾಲ್‌ ಸುತ್ತಮುತ್ತಲಿನ 10 ಮೀಟರ್ ಮತ್ತು ಸಣ್ಣ ಪೆಂಡಾಲ್‌ ಸುತ್ತಮುತ್ತಲಿನ 5 ಮೀಟರ್‌ ಪ್ರದೇಶಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ಅನುಮತಿಸಬಾರದು ಎಂದು ಸೂಚಿಸಲಾಗಿದೆ.

Also Read
ತಿರುಮಲ ಟ್ರೇಡ್ ಮಾರ್ಕ್ ಬಳಸದಂತೆ ಕುಟೆ‌ ಕಂಪೆನಿಯನ್ನು ಪ್ರತಿಬಂಧಿಸಿದ ಮದ್ರಾಸ್‌ ಹೈಕೋರ್ಟ್

ಅಲ್ಲದೆ ಸಾಮಾಜಿಕ ಅಂತರ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳುವ ಬಗ್ಗೆ ಸಣ್ಣ ಊರುಗಳು ಮತ್ತು ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುವಂತೆ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಆದರೆ ರಾಜ್ಯ ಸರ್ಕಾರ ಈ ನಿರ್ದೇಶನಗಳಿಗೆ ಆಕ್ಷೇಪ ವ್ಯಕ್ತಪಡಿಸಿತು ಮತ್ತು ಆದೇಶಕ್ಕೆ ತಡೆ ನೀಡುವಂತೆ ಕೋರಿತು. ಇದಕ್ಕೆ ಒಪ್ಪದ ಪೀಠ ʼಸರ್ಕಾರ ನಿರ್ದೇಶನಗಳನ್ನು ಕಠಿಣವೆಂದು ಭಾವಿಸುವುದು ಕಳವಳಕಾರಿ ಸಂಗತಿಯಾಗಿದೆ. ಕೋರಿಕೆಯನ್ನು ಮನಸ್ಸಿಲ್ಲದೆ ನಿರಾಕರಿಸಲಾಗಿದೆ" ಎಂದು ನ್ಯಾಯಾಲಯ ಹೇಳಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕಾಸ್‌ ರಂಜನ್ ಭಟ್ಟಾಚಾರ್ಯ ಮತ್ತು ವಕೀಲ ಸವ್ಯಸಾಚಿ ಚಟರ್ಜಿ ವಾದ ಮಂಡಿಸಿದರು. ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಮತ್ತು ವಕೀಲ ಸಯಾನ್ ಸಿನ್ಹಾ ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದರು.

Related Stories

No stories found.
Kannada Bar & Bench
kannada.barandbench.com