ಸರ್ಕಾರಿ ಉದ್ಯೋಗದಲ್ಲಿ ತೃತೀಯಲಿಂಗಿ ವ್ಯಕ್ತಿಗಳಿಗೆ ಶೇ.1ರಷ್ಟು ಮೀಸಲಾತಿ: ಕಲ್ಕತ್ತಾ ಹೈಕೋರ್ಟ್ ಆದೇಶ

ತೃತೀಯಲಿಂಗಿಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ನಾಲ್ಸಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಗಮನಿಸಿದ ಹೈಕೋರ್ಟ್ ಈ ಆದೇಶ ನೀಡಿದೆ.
Calcutta High Court, transgender persons
Calcutta High Court, transgender persons
Published on

ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ತೃತೀಯಲಿಂಗಿಗಳಿಗೆ ಶೇ 1ರಷ್ಟು ಮೀಸಲಾತಿ ಜಾರಿಗೊಳಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್‌ ನಿರ್ದೇಶನ ನೀಡಿದೆ [ಮೃಣಾಲ್ ಬಾರಿಕ್ ಮತ್ತು ಪ. ಬಂಗಾಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತೃತೀಯಲಿಂಗಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ನಾಲ್ಸಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2014 ರಲ್ಲಿ ನೀಡಿದ್ದ ತೀರ್ಪನ್ನು ಗಮನಿಸಿದ ನ್ಯಾಯಮೂರ್ತಿ ರಾಜಶೇಖರ್ ಮಂಥ ಅವರು ಈ ಆದೇಶ ಹೊರಡಿಸಿದ್ದಾರೆ.

ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ಸೇರಿದಂತೆ ತೃತೀಯಲಿಂಗಿ ವ್ಯಕ್ತಿಗಳಿಗೆ ಕಲ್ಯಾಣ ಕ್ರಮಗಳನ್ನು ಜಾರಿಗೆ ತರಲು ನಾಲ್ಸಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಉದ್ಯೋಗದಲ್ಲಿ ತೃತೀಯಲಿಂಗಿಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂಬುದಾಗಿ ಪಶ್ಚಿಮ ಬಂಗಾಳದಲ್ಲಿ ಕೂಡ 2022 ರಿಂದ ರಾಜ್ಯ ನೀತಿ ಜಾರಿಯಲ್ಲಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು. ಆದರೆ ರಾಜ್ಯ ಸರ್ಕಾರ ಈಗಲೂ ತೃತೀಯ ಲಿಂಗಿ ವ್ಯಕ್ತಿಗಳಿಗೆ ಉದ್ಯೋಗ ಮೀಸಲಾತಿ ಜಾರಿಗೊಳಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಆದೇಶ ನೀಡಿದೆ.

“ನಾಲ್ಸಾ ಪ್ರಕರಣದ ತೀರ್ಪಿನಂತೆ ರಾಜ್ಯದಲ್ಲಿ ತೃತೀಯ ಲಿಂಗಿ ವ್ಯಕ್ತಿಗಳಿಗೆ ರಾಜ್ಯದಲ್ಲಿ ಇನ್ನೂ ಮೀಸಲಾತಿ ನೀಡಿಲ್ಲ. ನಾಲ್ಸಾ ಪ್ರಕರಣದಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳ ವರ್ಗಕ್ಕೆ ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಶೇ 1ರಷ್ಟು ಮೀಸಲಾತಿ ಒದಗಿಸಬೇಕು ಎಂದು ನ್ಯಾಯಾಲಯವು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈ ನ್ಯಾಯಾಲಯ ನಿರ್ದೇಶಿಸುತ್ತದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತೃತೀಯಲಿಂಗಿ ಮಹಿಳೆಯೊಬ್ಬರು 2014 ಮತ್ತು 2022 ರಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (TET) ಉತ್ತೀರ್ಣರಾಗಿದ್ದರೂ ಕೌನ್ಸೆಲಿಂಗ್ ಪ್ರಕ್ರಿಯೆ ಅಥವಾ ಸಂದರ್ಶನಕ್ಕೆ ತಮ್ಮನ್ನು ಆಯ್ಕೆ ಮಾಡ ಹಿನ್ನೆಲೆಯಲ್ಲಿ ನೇಮಕಾತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

Kannada Bar & Bench
kannada.barandbench.com