ಧ್ರುವ್ ರಾಠಿ ಮತ್ತು ಡಾಬರ್ ನಡುವಿನ ರಿಯಲ್ ಜ್ಯೂಸ್ ವ್ಯಾಜ್ಯ ಇತ್ಯರ್ಥಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಗ್ರಾಹಕರ ಅದರಲ್ಲಿಯೂ ಮಕ್ಕಳ ಆರೋಗ್ಯದ ಮೇಲೆ ರಿಯಲ್ ಫ್ರೂಟ್ ಜ್ಯೂಸ್ ಪರಿಣಾಮ ಬೀರುತ್ತದೆ ಎಂದು ರಾಠಿ ಅವರ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು.
Dhruv Rathee , real fruit juice and Calcutta hC
Dhruv Rathee , real fruit juice and Calcutta hC
Published on

ಡಾಬರ್‌ನ ರಿಯಲ್ ಹಣ್ಣಿನ ರಸದ ಉತ್ಪನ್ನವನ್ನು ತಮ್ಮ ವಿಡಿಯೋದಲ್ಲಿ ಮಸುಕು ಮಾಡಲು ಜನಪ್ರಿಯ ಯೂಟ್ಯೂಬರ್ ಧ್ರುವ ರಾಠಿ ಅವರು ಒಪ್ಪಿದ ಹಿನ್ನೆಲೆಯಲ್ಲಿ ಅವರು ಮತ್ತು ಡಾಬರ್‌ ಇಂಡಿಯಾ ನಡುವಿನ ಒಂದು ವರ್ಷ ಹಳೆಯದಾದ ವ್ಯಾಜ್ಯ  ಜೂನ್ 18 ರಂದು ಇತ್ಯರ್ಥಗೊಂಡಿದೆ.

ತಾಜಾ ಹಣ್ಣಿನ ರಸಗಳಿಗೆ ಹೋಲಿಸಿದರೆ ಪ್ಯಾಕ್‌ ಮಾಡಿದ ಹಣ್ಣಿನ ರಸಗಳು ಜನರ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮವನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು. ರಿಯಲ್‌ ಹಣ್ಣಿನ ರಸದ ಲೋಗೊ ಮತ್ತು ವಾಣಿಜ್ಯ ಚಿಹ್ನೆಯನ್ನು ಇದಕ್ಕಾಗಿ ವೀಡಿಯೊದಲ್ಲಿ ಬಳಸಿಕೊಳ್ಳಲಾಗಿತ್ತು.

ರಿಯಲ್ ಹಣ್ಣಿನ ರಸದ ಪ್ಯಾಕೇಜಿಂಗ್ ಅನ್ನು ಮಸುಕುಗೊಳಿಸುವುದಾಗಿ ತಿಳಿಸಿರುವ ರಾಠಿ ಅವರ ನಿರ್ಧಾರವನ್ನು ಎಲ್ಲರೂ ಒಪ್ಪುವ ಮೂಲಕ ನ್ಯಾಯಮೂರ್ತಿ ಕೃಷ್ಣರಾವ್ ಅವರಿದ್ದ ಏಕಸದಸ್ಯ ಪೀಠ  ಡಾಬರ್ ಹೂಡಿದ್ದ ಮೊಕದ್ದಮೆಯನ್ನು ಇತ್ಯರ್ಥಗೊಳಿಸಿತು.

ವಿಡಿಯೋದ ಎಲ್ಲೆಡೆ ರಿಯಲ್‌ ಗೆ ಸಂಬಂಧಿಸಿದ ವಾಣಿಜ್ಯ ಚಿಹ್ನೆ, ಹಕ್ಕುಸ್ವಾಮ್ಯ, ವಸ್ತುವಿಷಯ, ಲೇಬಲ್‌, ಪ್ಯಾಕೇಜಿಂಗ್‌ ಹಾಗೂ ಜಾಹೀರಾತು ಇತ್ಯಾದಿಗಳ ಉಲ್ಲೇಖ ಇಲ್ಲವೇ ಬಳಕೆ ತೆಗೆದುಹಾಕುವ ರಾಠಿ ಅವರ ನಿಲುವನ್ನು ಡಾಬರ್‌ ಒಪ್ಪಿಕೊಂಡಿದೆ ಎಂಬುದಾಗಿ ನ್ಯಾಯಾಲಯ ದಾಖಲಿಸಿಕೊಂಡಿದೆ.

ಬದಲಾವಣೆಯನ್ನು ಡಾಬರ್‌ ಒಪ್ಪಿದ್ದು ಮಾರ್ಪಡಿಸಿದ ವೀಡಿಯೊ ಪ್ರಸಾರ ಮಾಡಲು ಅದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ವಿವರಿಸಲಾಗಿದೆ.

ನ್ಯಾಯಮೂರ್ತಿ ರವಿ ಕ್ರಿಶನ್ ಕಪೂರ್ ಅವರಿದ್ದ ಮತ್ತೊಂದು ಪೀಠ ಮಾರ್ಚ್ 2023 ರಲ್ಲಿ ನೀಡಿದ್ದ ಆದೇಶದಲ್ಲಿ ಆಕ್ಷೇಪಾರ್ಹ ವೀಡಿಯೊವನ್ನು ತೆಗೆದುಹಾಕಲು ಅಥವಾ ಅದರ ವೀಕ್ಷಣೆ ನಿರ್ಬಂಧಿಸಲು ಯೂಟ್ಯೂಬ್‌ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಿತ್ತು. ತಾಜಾ ಹಣ್ಣಿನ ರಸಗಳ ಹೋಲಿಕೆಯಲ್ಲಿ ರಿಯಲ್‌ ಪಾನೀಯವು ಜನರ ಆರೋಗ್ಯ ಮತ್ತು ಕೂದಲಿನ ಬೆಳವಣಿಗೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ವಿವರಿಸುವ ರಾಠಿ ಅವರ ವಿಡಿಯೋ ಲಕ್ಷ್ಮಣ ರೇಖೆ ಮೀರಿದೆ ಎಂದು ನ್ಯಾಯಾಲಯ ಹೇಳಿತ್ತು.

Kannada Bar & Bench
kannada.barandbench.com