ಚಳಿಗಾಲದಲ್ಲಿ ವಲಸೆ ಬರುವ ಅಳಿವಿನಂಚಿನಲ್ಲಿರುವ ಹಕ್ಕಿಗಳ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಕಲ್ಕತ್ತಾ ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾಗಿದೆ. ಇಂತಹ ಕಳ್ಳಸಾಗಣೆಯನ್ನು ʼಕ್ರೂರ, ಅನೈತಿಕ ಹಾಗೂ ಅಕ್ರಮʼ ಎಂದು ಕರೆದಿರುವ ಮುಖ್ಯ ನ್ಯಾಯಮೂರ್ತಿ ತೊಟ್ಟತಿಲ್ ಬಿ ರಾಧಾಕೃಷ್ಣನ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರಿದ್ದ ನ್ಯಾಯಪೀಠ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ ನೋಂದಾಯಿಸುವಂತೆ ನಿರ್ದೇಶಿಸಿದೆ.
ಅಲ್ಲದೆ ಮೂರು ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ:
· ಅಳಿವಿನಂಚಿನಲ್ಲಿರುವ ಪಕ್ಷಿಗಳ ಕಳ್ಳಸಾಗಣೆ ಮತ್ತು ಅಕ್ರಮ ವ್ಯಾಪಾರದ ವ್ಯಾಪ್ತಿ
· ಇದಕ್ಕೆ ಯಾರು ಹೊಣೆಗಾರರು ಎಂದು ನಿಗದಿಪಡಿಸುವುದು
· ಕಳ್ಳಸಾಗಣೆ ಮತ್ತಿತರ ಅಕ್ರಮ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡುವುದು ಮತ್ತು ಅವುಗಳನ್ನು ಉಲ್ಲಂಘಿಸಿದರೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವುದು.
ಬಂಗಾಳಿ ದಿನಪತ್ರಿಕೆ ʼಆನಂದ್‌ಬಜಾರ್ ಪತ್ರಿಕಾʼದಲ್ಲಿ ಡಿ. 2ರಂದು ಪ್ರಕಟವಾದ ಸುದ್ದಿಯನ್ನು ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಪತ್ರಿಕೆಯಲ್ಲಿ ವರದಿಯಾಗಿರುವಂತೆ ಚಳಿಗಾಲದ ವೇಳೆ ಅನೇಕ ಪಕ್ಷಗಳ ರೆಕ್ಕೆಗಳು ಭಾರವಾಗಿ ಬೆಳೆಯುತ್ತವೆ ಎಂಬುದರ ಲಾಭ ಪಡೆದ ಕಳ್ಳಸಾಗಣಿಕದೆದಾರರು ಮಂಗಳವಾರ ರಾತ್ರಿ ʼಪಾಟ್ನಾದಿಂದ ಕೋಲ್ಕತ್ತಾಗೆ ಬರುವ ಬಸ್ಸುಗಳಲ್ಲಿ ನೂರಾರು ಪಕ್ಷಿಗಳನ್ನು ಸಾಗಿಸಿದ್ದಾರೆ. ದುರ್ಗಾಪುರ ಹೆದ್ದಾರಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಸ್ ತಡೆದಾಗ 300 ಕ್ಕೂ ಹೆಚ್ಚು ಗಿಳಿ ಪ್ರಬೇಧಕ್ಕೆ ಸೇರಿದ ಟಿಯಾ ಮತ್ತು ಕನಿಷ್ಠ 25 ಬೆಟ್ಟದ ಮೈನಾ ಹಕ್ಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವನ್ನು ವಿವರವಾಗಿ ವಿಚಾರಣೆಗೆ ಒಳಪಡಿಸಲು ಪೀಠದ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಇಂತಹ ಅಕ್ರಮ ಕಳ್ಳಸಾಗಣೆ ಚಟುವಟಿಕೆಗಳು ವಿವಿಧ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದು ಪಶು-ಪಕ್ಷಿಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತವೆ ಎಂದು ನ್ಯಾಯಾಲಯದ ಪರವಾಗಿ ರೂಪಿಸಲಾದ ಅರ್ಜಿಯಲ್ಲಿ ವಿವರಿಸಲಾಗಿದೆ.
“ಬಹುತೇಕ ಭಾರತೀಯ ಕುಟುಂಬಗಳು ತಮ್ಮ ಮನೆಗಳಲ್ಲಿ ಪಕ್ಷಿಗಳನ್ನು ಸಾಕುವುದು ಸಾಮಾನ್ಯ. ಆದರೆ ಆ ಕುಟುಂಬಗಳು ಮರೆತುಬಿಡುವ ಸಂಗತಿ ಎಂದರೆ ಅವು ಕ್ರೂರ ವಿಧಿಯನ್ನು ಅನುಭವಿಸುವುದು. ಕಾಡಿನಿಂದ ಕಬಳಿಸಿ, ಗೂಡುಗಳಿಂದ ಕದ್ದು, ಸಾಗಣೆ ವೇಳೆ ಸಾಯುವಂತೆ ಮಾಡಿ, ಕಾನೂನುಬಾಹಿರವಾಗಿ ಹೃದಯಹೀನ ವ್ಯಾಪಾರಿಗಳ ಕೈಬದಲಾದ ಮೇಲೆ ವಿನಾಶದಂಚಿನಲ್ಲಿರುವ ಪಕ್ಷಿಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಲಾಗುತ್ತದೆ. ಸಾಕು ಪಕ್ಷಿಗಳ ವ್ಯಾಪಾರ ಈ ಕಾಲದ ಜ್ವಲಂತ ಸಮಸ್ಯೆ. ದಿಗ್ಭ್ರಮೆಗೊಳಿಸುವ ಪ್ರಮಾಣದಲ್ಲಿ ಹಕ್ಕಿಗಳನ್ನು ವಿವಿಧ ಸ್ಥಳಗಳಿಂದ ಭಯಾನಕ ಸ್ಥಿತಿಯಲ್ಲಿ ಕಳ್ಳಸಾಗಣೆ ಮಾಡಲಾಗುತ್ತದೆ. ಸೂಟ್‌ಕೇಸ್, ಪಿವಿಸಿ ಪೈಪುಗಳ ಒಳಗೆ ತುರುಕಿ ಉಸಿರುಟ್ಟಿಸಿ ಸಾಗಣೆ ಮಾಡಲಾಗುತ್ತದೆ. ಅವುಗಳನ್ನು ಕಾಲುಚೀಲಗಳಲ್ಲಿ, ಬೂಟುಗಳೊಳಗೆ ತುಂಬಲಾಗುತ್ತದೆ. ಅವುಗಳ ಕೊಕ್ಕುಗಳನ್ನು ಬಿಗಿಯಲಾಗಿರುತ್ತದೆ. ಅಕ್ಟೋಬರ್‌ನಿಂದ ನವೆಂಬರ್ ವೇಳೆಗೆ ಮಾಟ ಮಂತ್ರಗಳಿಗೆ ಬಳಸಲು ತಾಂತ್ರಿಕರು ಗೂಬೆಗಳನ್ನು ಬಳಸುವ ರೂಢಿಯಿದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸಂವಿಧಾನದ ಏಳನೇ ಪರಿಚ್ಛೇದಲ್ಲಿರುವ ಸಮವರ್ತಿ ಪಟ್ಟಿಯ 48-ಎ ಮತ್ತು 51-ಎ (ಜಿ) ವಿಧಿಗಳನ್ನು ಮತ್ತು ವಿನಾಶದಂಚಿನಲ್ಲಿರುವ ಹಕ್ಕಿಗಳ ರಕ್ಷಣೆಗಾಗಿ ವನ್ಯಜೀವಿ ಸಂರಕ್ಷಣಾ ಕಾಯಿದೆ ರೂಪುಗೊಂಡಿರುವುದನ್ನುಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ. ಇದರ ಆಧಾರದಲ್ಲಿ ʼಅಡ್ವೊಕೋಟ್ ಜನರಲ್ ಅವರು ಸರ್ಕಾರದ ಪರವಾಗಿ ಹಾಜರಾಗುವುದರ ಜೊತೆಗೆ ವಕೀಲರಾಗಿಯೂ ಅವರು ಸಹಾಯ ಮಾಡಬೇಕುʼ ಎಂದು ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ಡಿ. 8ರಂದು ವಿಚಾರಣೆ ನಡೆಯಲಿದ್ದು ಹೈಕೋರ್ಟ್ ಪರವಾಗಿ ನ್ಯಾಯವಾದಿ ಸೈಕತ್ ಬ್ಯಾನರ್ಜಿ ಹಾಜರಿದ್ದರು.