ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ (ಎಐಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಪ್ರಮುಖ ಆರೋಪಿಯಾಗಿರುವ ಪಶ್ಚಿಮ ಬಂಗಾಳದ ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಮಾಡುವಾಗ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ನಿಗದಿಪಡಿಸಿದೆ [ರುಜಿರಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].
ಹಗರಣ ಕುರಿತಂತೆ ತಾವು ಮಾಡುತ್ತಿರುವ ವರದಿಗಳು ನಿಖರ, ವಸ್ತುನಿಷ್ಠವಾಗಿವೆ ಹಾಗೂ ಅವುಗಳಿಗೆ ಆಧಾರ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ಹಗರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡದಂತೆಯೂ ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳಿಗೆ ಅದು ಎಚ್ಚರಿಕೆ ನೀಡಿದೆ.
ತಮ್ಮ ಹಾಗೂ ತಮ್ಮ ಪತಿ ವಿರುದ್ಧ ನಡೆಯತ್ತಿರುವ ತನಿಖೆಯ ವರದಿ ಮಾಡದಂತೆ ಕೆಲ ಮಾಧ್ಯಮ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರಿ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರು ಮಾರ್ಗಸೂಚಿಗಳನ್ನು ನೀಡಿದರು.
ಪರಿಶೀಲಿಸದ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಬಾರದು. ಆರೋಪಟ್ಟಿ ಸಲ್ಲಿಸುವ ಮುನ್ನವೇ ಅಪರಾಧದ ಜೊತೆಗೆ ವ್ಯಕ್ತಿಗಳನ್ನು ತಳಕು ಹಾಕಬಾರದು ಹಾಗೂ ಅಭಿಪ್ರಾಯಗಳನ್ನು ಸುದ್ದಿಯಾಗಿ ಪ್ರಸಾರ ಮಾಡಬಾರದು ಎಂದು ಉಳಿದ ಮಾರ್ಗಸೂಚಿಗಳ ಜೊತೆಗೆ ನ್ಯಾಯಾಲಯ ಹೇಳಿದೆ.
ಎಲ್ಲಾ ಮಾಧ್ಯಮ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳು ಈ ಮಾರ್ಗಸೂಚಿಗಳನ್ನು ಜನವರಿ 15, 2024 ರವರೆಗೆ ಇಲ್ಲವೇ ಮುಂದಿನ ಆದೇಶ ನೀಡುವವರೆಗೆ "ಕಟ್ಟುನಿಟ್ಟಾಗಿ" ಪಾಲಿಸಬೇಕಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ. ಡಿಸೆಂಬರ್‌ನಲ್ಲಿ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವಾದ ಆಲಿಸಲಿದೆ.