ಪಶ್ಚಿಮ ಬಂಗಾಳ ಚುನಾವಣೋತ್ತರ ಗಲಭೆ: ಎಸ್‌ಐಟಿ ತನಿಖೆ ಮೇಲ್ವಿಚಾರಣೆ ಹೊಣೆ ಹೊತ್ತ ನಿವೃತ್ತ ನ್ಯಾ. ಮಂಜುಳಾ ಚೆಲ್ಲೂರ್‌

ಚುನಾವಣೋತ್ತರ ಹಿಂಸಾಚಾರದ ಕುರಿತ ತನಿಖೆಗಾಗಿ ಕಲ್ಕತ್ತಾ ಹೈಕೋರ್ಟ್‌ ಆ. 19ರಂದು ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿತ್ತು. ಅತ್ಯಾಚಾರ, ಕೊಲೆಯಂತಹ ಗಂಭೀರ ಪ್ರಕರಣಗಳ ಹೊರತಾದ ಚುನಾವಣೋತ್ತರ ಹಿಂಸಾಚಾರದ ತನಿಖೆಯನ್ನು ತಂಡ ನಡೆಸಲಿದೆ.
Justice Manjula chellur
Justice Manjula chellur

ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರದ ತನಿಖೆ ನಡೆಸಲು ಕಲ್ಕತ್ತಾ ಹೈಕೋರ್ಟ್‌ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೇಲ್ವಿಚಾರಣೆ ವಹಿಸಲು ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್‌ ಅವರನ್ನು ನೇಮಿಸಲಾಗಿದೆ.

ಈ ಕುರಿತು ಹೊರಡಿಸಲಾದ ಹೈಕೋರ್ಟ್‌ ಆದೇಶದಲ್ಲಿ, ಮೇಲ್ವಿಚಾರಣೆ ವಹಿಸಲಿರುವ ನಿವೃತ್ತ ನ್ಯಾ. ಮಂಜುಳಾ ಚೆಲ್ಲೂರ್‌ ಅವರಿಗೆ “ಮಧ್ಯಂತರ ಕ್ರಮವಾಗಿ ರಾಜ್ಯ ಸರ್ಕಾರವು ರೂ. 10 ಲಕ್ಷವನ್ನು ಈ ಕಾರ್ಯಕ್ಕಾಗಿ ನೀಡಬೇಕು” ಎಂದು ಹೇಳಲಾಗಿದೆ. ಇದರ ಹೊರತಾಗಿ, ನ್ಯಾ. ಚೆಲ್ಲೂರ್‌ ಅವರು ತಮಗೆ ವಹಿಸಲಾದ ಕೆಲಸವನ್ನು ನಿರ್ವಹಿಸುವ ಸಲುವಾಗಿ ಯಾವುದೇ ಸ್ಥಳಕ್ಕೆ ಬೇಕಾದರೂ ತೆರಳಬಹುದಾಗಿದ್ದು ಅವರಿಗೆ ಮುಖ್ಯ ನ್ಯಾಯಮೂರ್ತಿಗೆ ಸರಿಸಮನಾಗಿ ತಂಗಲು ವ್ಯವಸ್ಥೆ ಕಲ್ಪಿಸಬೇಕು ಎನ್ನಲಾಗಿದೆ. ಈ ಕುರಿತಾದ ಎಲ್ಲ ವ್ಯವಸ್ಥೆಯನ್ನು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನೋಡಿಕೊಳ್ಳಲಿದ್ದಾರೆ.

ಚುನಾವಣೋತ್ತರ ಹಿಂಸಾಚಾರದ ಕುರಿತ ತನಿಖೆಗಾಗಿ ಕಲ್ಕತ್ತಾ ಹೈಕೋರ್ಟ್‌ ವಿಶೇಷ ತನಿಖಾ ತಂಡವನ್ನು ರಚಿಸಿ ಆ. 19ರಂದು ಆದೇಶಿಸಿತ್ತು. ಅತ್ಯಾಚಾರ, ಕೊಲೆಯಂತಹ ಗಂಭೀರ ಪ್ರಕರಣಗಳ ಹೊರತಾದ ಚುನಾವಣೋತ್ತರ ಹಿಂಸಾಚಾರದ ಪ್ರಕರಣಗಳ ತನಿಖೆಯನ್ನು ಈ ತಂಡವು ನಡೆಸಲಿದೆ.

ತನಿಖಾ ತಂಡದ ರಚನೆಯ ತನ್ನ ಆದೇಶದಲ್ಲಿ ನ್ಯಾಯಾಲಯವು, “ರಾಜ್ಯ ಹಾಗೂ ನ್ಯಾಯಾಲಯ ಎದುರಿಸಿದ ಅಸಾಮಾನ್ಯ ಸಂದರ್ಭಗಳ ಹಿನ್ನೆಲೆಯಲ್ಲಿ ಜನರಲ್ಲಿ ಶಾಸನಬದ್ಧ ಆಡಳಿತದಲ್ಲಿ ನಂಬಿಕೆ ಉಳಿಸುವ ಸಲುವಾಗಿ ನಾವು ತನಿಖಾ ತಂಡದ ರಚನೆಯನ್ನು ಪ್ರಸ್ತಾಪಿಸುತ್ತೇವೆ,” ಎಂದು ಹೇಳಿದ್ದನ್ನು ಇಲ್ಲಿ ನೆನೆಯಬಹುದು.

ತನಿಖಾ ತಂಡದ ಉಸ್ತುವಾರಿಯನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ವಹಿಸಲಿದ್ದಾರೆ ಎಂದು ಈ ಹಿಂದೆ ಹೈಕೋರ್ಟ್‌ ಹೇಳಿತ್ತು. ಆದರೆ, ತಕ್ಷಣದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಲಭ್ಯತೆ ದೊರೆಯದ ಕಾರಣಕ್ಕೆ ತನ್ನ ಹಿಂದಿನ ಆದೇಶವನ್ನು ಮಾರ್ಪಾಡು ಮಾಡುವುದು ಸೂಕ್ತವೆಂದು ನಿರ್ಧರಿಸಿದ್ದಾಗಿ ನ್ಯಾಯಾಲಯವು ಹೇಳಿತ್ತು. ಈ ಹಿನ್ನೆಲೆಯಲ್ಲಿ ಈಗ ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್‌ ಅವರ ನೇಮಕವಾಗಿದೆ.

Related Stories

No stories found.
Kannada Bar & Bench
kannada.barandbench.com