ಪ. ಬಂಗಾಳ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರ ವಿರುದ್ಧ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನಾಯಕರು ಕಾನೂನಿನ ಮಿತಿಯಲ್ಲಿ ಯಾವುದೇ ಹೇಳಿಕೆಗಳನ್ನು ನೀಡಲು ಸ್ವತಂತ್ರರು ಎಂದು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಹೇಳಿದೆ.
ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮಮತಾ ಹಾಗೂ ಮೂವರ ವಿರುದ್ಧ ಜುಲೈ 15 ರಂದು ಏಕಸದಸ್ಯಪೀಠ ರಾಜ್ಯಪಾಲರ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಿಸಿ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದನ್ನು ಮಮತಾ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಐ ಪಿ ಮುಖರ್ಜಿ ಮತ್ತು ನ್ಯಾ. ಬಿಸ್ವರೂಪ್ ಚೌಧರಿ ಅವರಿದ್ದ ವಿಭಾಗೀಯ ಪೀಠ ಮಮತಾ ಹಾಗೂ ಟಿಎಂಸಿ ನಾಯಕರು ರಾಜ್ಯಪಾಲರ ವಿರುದ್ಧ ಹೇಳಿಕೆಗಳನ್ನು ನೀಡಲು ವಿಧಿಸಿದ್ದ ನಿರ್ಬಂಧವನ್ನು ತೆಗೆದುಹಾಕಿತು.
ಮಮತಾ, ಇಬ್ಬರು ಶಾಸಕರು ಹಾಗೂ ಟಿಎಂಸಿ ನಾಯಕರೊಬ್ಬರ ವಿರುದ್ಧ ನ್ಯಾಯಮೂರ್ತಿ ಕೃಷ್ಣರಾವ್ ಅವರು ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ಮಾರ್ಪಾಡು ಮಾಡಿದೆ.
ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿರುವುದರಿಂದ ಪ. ಬಂಗಾಳದ ರಾಜಭವನಕ್ಕೆ ಮಹಿಳೆಯರು ಪ್ರವೇಶಿಸುವುದು ಸುರಕ್ಷಿತವಲ್ಲ ಎಂದು ಬ್ಯಾನರ್ಜಿ ಹೇಳಿಕೆ ನೀಡಿದ್ದನ್ನು ಪ್ರಶ್ನಿಸಿ ಬೋಸ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಬೋಸ್ ಅವರು ಸಾಂವಿಧಾನಿಕ ಅಧಿಕಾರಿಯಾಗಿದ್ದು ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸಿಕೊಂಡು ಬ್ಯಾನರ್ಜಿ ಹಾಗೂ ಇತರ ಟಿಎಂಸಿ ನಾಯಕರು ಅವರ ವಿರುದ್ಧ ಮಾಡುತ್ತಿರುವ ವೈಯಕ್ತಿಕ ದಾಳಿಯನ್ನು ಅವರಿಗೆ ಎದುರಿಸಲು ಸಾಧ್ಯವಾಗದು ಎಂದು ಏಕಸದಸ್ಯ ಪೀಠ ನುಡಿದಿತ್ತು.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಸೋಗಿನಲ್ಲಿ ವ್ಯಕ್ತಿಯ ಪ್ರತಿಷ್ಠೆಗೆ ಕಳಂಕತರುವ ಹೇಳಿಕೆಗಳನ್ನು ನೀಡಲು ಅದು ಅನಿಯಂತ್ರಿತ ಹಕ್ಕಲ್ಲ ಎಂದು ನ್ಯಾಯಾಲಯ ನುಡಿದಿತ್ತು.
ಬೋಸ್ ಅವರ ವಿರುದ್ಧ ಮಮತಾ ಹಾಗೂ ಇತರರು 14 ಆಗಸ್ಟ್ 2024ರವರೆಗೆ ಪ್ರಕಟಣೆ ಇಲ್ಲವೇ ಸಾಮಾಜಿಕ ವೇದಿಕೆಗಳ ಮೂಲಕ ಯಾವುದೇ ಮಾನಹನಿಕರ ಇಲ್ಲವೇ ಅಸಮಂಜಸ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿತ್ತು.