ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಇದೇ ಜುಲೈ 1ರಿಂದ ಜಾರಿಯಾಗುತ್ತಿರುವ ಮೂರು ಹೊಸ ಕಾನೂನುಗಳ ವಿರುದ್ಧ ಅದೇ ದಿನ ಪಶ್ಚಿಮ ಬಂಗಾಳ ವಕೀಲರ ಪರಿಷತ್ ಕರೆ ನೀಡಿರುವ ಮುಷ್ಕರದಲ್ಲಿ ನ್ಯಾಯವಾದಿಗಳು ಕೆಲಸ ಸ್ಥಗಿತಗೊಳಿಸಿ ಭಾಗವಹಿಸಬೇಕು ಎಂದು ಒತ್ತಾಯಿಸುವಂತಿಲ್ಲ ಎಂಬುದಾಗಿ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ತಿಳಿಸಿದೆ [ಸಹಸ್ರಗಾಂಶು ಭಟ್ಟಾಚಾರ್ಜಿ ಮತ್ತು ಪಶ್ಚಿಮ ಬಂಗಾಳ ವಕೀಲರ ಪರಿಷತ್ ಇನ್ನಿತರರ ನಡುವಣ ಪ್ರಕರಣ].
ಮೂರು ಹೊಸ ಅಪರಾಧಿಕ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುವುದಕ್ಕಾಗಿ ಜುಲೈ 1ರಂದು ಕರಾಳ ದಿನ ಆಚರಿಸಲು ರಾಜ್ಯ ವಕೀಲರ ಪರಿಷತ್ ಕೈಗೊಂಡಿರುವ ನಿರ್ಧಾರವನ್ನು ಕೇವಲ ವಿನಂತಿಯ ರೂಪದಲ್ಲಿ ತಿಳಿಸಬೇಕೆ ವಿನಾ ಕೆಲಸ ಸ್ಥಗಿತಗೊಳಿಸುವಂತೆ ಒತ್ತಾಯಿಸಬಾರದು ಎಂದು ನ್ಯಾಯಮೂರ್ತಿ ಶಂಪಾ ಸರ್ಕಾರ್ ವಿವರಿಸಿದರು.
ಅಂದು ವಕೀಲರು ನ್ಯಾಯಾಂಗ ಕಾರ್ಯದಿಂದ ದೂರ ಇದ್ದು ಪ್ರತಿಭಟನಾ ಸಭೆ ಆಯೋಜಿಸಲು ಪರಿಷತ್ತಿನ ನಿರ್ಣಯ ಸೂಚಿಸಿರುವುದನ್ನು ಗಮನಿಸಿದ ನ್ಯಾಯಾಲಯ ಸ್ವಇಚ್ಛೆಯಿಂದ ಕೆಲಸ ಮಾಡಲು ಮುಂದಾಗುವ ವಕೀಲರನ್ನು ಪ್ರತಿಭಟನೆಯ ಕಾರಣಕ್ಕಾಗಿ ಕೆಲಸ ಸ್ಥಗಿತಗೊಳಿಸುವಂತೆ ಒತ್ತಾಯಿಸಬಾರದು ಎಂದು ಪೀಠ ಸ್ಪಷ್ಟಪಡಿಸಿದೆ.
“ಮುಷ್ಕರ ಹೂಡಲು ಇಲ್ಲವೇ ಕೆಲಸ ಸ್ಥಗಿತಗೊಳಿಸಲು ಯಾರನ್ನೂ ಒತ್ತಾಯಿಸಬಾರದು ಎಂಬುದು ಇದಾಗಲೇ ನಿರ್ಧರಿತವಾಗಿರುವ ಕಾನೂನಿನ ನಿಲುವಾಗಿದೆ. ವಕೀಲರು ದಾವೆದಾರರೆಡೆಗೆ ಸಾರ್ವಜನಿಕ ಕರ್ತವ್ಯ ಹೊಂದಿದ್ದು ಅದನ್ನು ನಿಭಾಯಿಸುತ್ತಾರೆ. ಹೀಗಾಗಿ ಪ. ಬಂಗಾಳ ವಕೀಲರ ಪರಿಷತ್ತಿನ ಈ ನಿರ್ಣಯವನ್ನು ಅದರ ಆದೇಶ ಎಂದು ಪರಿಗಣಿಸಲಾಗದು. ಪ. ಬಂಗಾಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಂದು ಕೆಲಸ ಮಾಡಲು ಬಯಸುವ ವಕೀಲರು ನ್ಯಾಯಾಲಯಗಳಿಗೆ ಹಾಜರಾಗಲು ಅರ್ಹರು” ಎಂದು ಅದು ತಿಳಿಸಿದೆ.
ಮೂರು ಹೊಸ ಅಪರಾಧಿಕ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಇದೇ ಜುಲೈ 1ರಿಂದ ಜಾರಿಗೆ ಬರಲಿವೆ.
ಮೂರು ಕಾನೂನುಗಳು ಜನವಿರೋಧಿ, ಪ್ರಜಾಸತ್ತಾತ್ಮಕವಲ್ಲದ ಹಾಗೂ ಜನಸಾಮಾನ್ಯರಿಗೆ ಭಾರೀ ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಈಚೆಗೆ ಖಂಡನಾ ನಿರ್ಣಯ ಅಂಗೀಕರಿಸಿದ್ದ ಪಶ್ಚಿಮ ಬಂಗಾಳ ವಕೀಲರ ಪರಿಷತ್ ಜುಲೈ 1ಅನ್ನು ಕರಾಳ ದಿನ ಎಂದು ಆಚರಿಸುವುದಾಗಿ ಘೋಷಿಸಿತ್ತು.