ನಂದಿಗ್ರಾಮ ಫಲಿತಾಂಶ ಪ್ರಶ್ನಿಸಿ ಮಮತಾ ಅರ್ಜಿ; ಕಲ್ಕತ್ತಾ ಹೈಕೋರ್ಟ್‌ನಿಂದ ಬಿಜೆಪಿಯ ಸುವೇಂದು ಅಧಿಕಾರಿಗೆ ನೋಟಿಸ್‌

ಆಕ್ಷೇಪಾರ್ಹವಾದ ಚುನಾವಣೆಗೆ ಸಂಬಂಧಪಟ್ಟಿರುವ ಎಲ್ಲಾ ದಾಖಲೆಗಳು, ಚುನಾವಣಾ ಪತ್ರಗಳು, ಸಾಧನಗಳು, ವಿಡಿಯೊ ರೆಕಾರ್ಡಿಂಗ್‌ ಇತ್ಯಾದಿಯನ್ನು ಸಂಬಂಧಪಟ್ಟ ಸಂಸ್ಥೆಯು ಸಂಗ್ರಹಿಸಿಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
Mamata Banerjee and Suvendu Adhikari with Calcutta HC
Mamata Banerjee and Suvendu Adhikari with Calcutta HC
Published on

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ವಿಜೇತರಾಗಿರುವ ಬಿಜೆಪಿಯ ಸುವೇಂದು ಅಧಿಕಾರಿ ಅವರ ಆಯ್ಕೆ ಪ್ರಶ್ನಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಚುನಾವಣಾ ಮನವಿಗೆ ಸಂಬಂಧಿಸಿದಂತೆ ಸುವೇಂದು ಅವರಿಗೆ ಬುಧವಾರ ಕಲ್ಕತ್ತಾ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಆಕ್ಷೇಪಾರ್ಹವಾದ ಚುನಾವಣೆಗೆ ಸಂಬಂಧಿಪಟ್ಟಿರುವ ಎಲ್ಲಾ ದಾಖಲೆಗಳು, ಚುನಾವಣಾ ಪತ್ರಗಳು, ಸಾಧನಗಳು, ವಿಡಿಯೊ ರೆಕಾರ್ಡಿಂಗ್‌ ಇತ್ಯಾದಿಯನ್ನು ಸಂಬಂಧಪಟ್ಟ ಸಂಸ್ಥೆಯು ಸಂಗ್ರಹಿಸಿಡಬೇಕು ಎಂದು ನ್ಯಾಯಮೂರ್ತಿ ಶಂಪಾ ಸರ್ಕಾರ್‌ ನೇತೃತ್ವದ ಏಕಸದಸ್ಯ ಪೀಠವು ನಿರ್ದೇಶಿಸಿದೆ.

ಮೇ 21ರ ರಿಜಿಸ್ಟ್ರಾರ್‌ ಅವರ ವರದಿಯನ್ನು ಪರಿಶೀಲಿಸಿದ ಪೀಠವು ಅರ್ಜಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದಿದೆ. “ಕಚೇರಿಯ ವರದಿಯ ಅನುಸಾರ ಪ್ರಜಾ ಪ್ರತಿನಿಧಿ ಕಾಯಿದೆಯ ಸೆಕ್ಷನ್‌ 86(1)ರ ಅಡಿ ಚುನಾವಣಾ ಮನವಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಈ ನ್ಯಾಯಾಲಯವು ರೂಪಿಸಿರುವ ಚುನಾವಣಾ ಮನವಿ ನಿಯಮಗಳ ಅಡಿ ನಿಯಮ 24ರ ಅಡಿ ನೋಟಿಸ್‌ ಜಾರಿ ಮಾಡಲಾಗುವುದು. ಆಗಸ್ಟ್‌ 12ರೊಳಗೆ ಪ್ರತಿಕ್ರಿಯೆ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶ ಮಾಡಿದೆ.

ಚುನಾವಣಾ ಮನವಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನ ಅವಶ್ಯಕತೆಗಳನ್ನು ಅನುಸರಿಸಲಾಗಿದೆ. ಪ್ರಕರಣ ದಾಖಲಿಸುವುದಕ್ಕೆ ಸಂಬಂಧಿಸಿದ ಕಾಲಾನುಕ್ರಮಣಿಕೆಯನ್ನು ಮಮತಾ ಬ್ಯಾನರ್ಜಿ ಪರ ಹಿರಿಯ ವಕೀಲ ಸೌಮೇಂದ್ರ ನಾಥ್‌ ಮುಖರ್ಜಿ ನ್ಯಾಯಾಲಯಕ್ಕೆ ವಿವರಿಸಿದರು.

Also Read
ಮಮತಾ ಬ್ಯಾನರ್ಜಿ ಚುನಾವಣಾ ಆರ್ಜಿ ವಿಚಾರಣೆಯಿಂದ ಹಿಂಸರಿದ ನ್ಯಾ.ಕೌಶಿಕ್‌ ಚಂದಾ; ಮಮತಾಗೆ ರೂ.5 ಲಕ್ಷ ದಂಡ

ನ್ಯಾಯಮೂರ್ತಿ ಕೌಶಿಕ್‌ ಚಂದಾ ನೇತೃತ್ವದ ಪೀಠದ ಮುಂದೆ ಜೂನ್‌ 24ರಂದು ಪ್ರಕರಣ ವಿಚಾರಣೆಗೆ ಬಂದಾಗ ಅರ್ಜಿದಾರೆ ಮಮತಾ ಬ್ಯಾನರ್ಜಿ ಅವರು ಖುದ್ದು ನ್ಯಾಯಾಲಯದಲ್ಲಿ ಹಾಜರಿದ್ದರು ಎಂದು ಮುಖರ್ಜಿ ಹೇಳಿದರು. “ಸೂಕ್ತ ರೀತಿಯಲ್ಲಿ ಮನವಿ ಮಾಡಲಾಗಿದೆ. ಗೌರವಾನ್ವಿತ ನ್ಯಾಯಮೂರ್ತಿಗಳು ಬಯಸಿದರೆ ಅರ್ಜಿದಾರರು ಮತ್ತೊಮ್ಮೆ ಖುದ್ದು ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ” ಎಂದರು. ಇದಕ್ಕೆ ಪೀಠವು ಜೂನ್‌ 24ರಂದು ಅವರು ಹಾಜರಾಗಿದ್ದರೇʼ ಎಂದು ಪ್ರಶ್ನಿಸಿತು. ಅದಕ್ಕೆ ಮುಖರ್ಜಿ ಅವರು ʼಹೌದುʼ ಎಂದು ಉತ್ತರಿಸಿದರು.

ನೋಟಿಸ್‌ ಜಾರಿ ಮಾಡುವುದಕ್ಕೂ ಮುನ್ನ ಪೀಠವು ಕಾರ್ಯವಿಧಾನ ಅವಶ್ಯಕತೆಗಳನ್ನು ಪೂರೈಸಲಾಗಿದೆಯೇ ಎಂಬುದನ್ನು ಪರಿಶೀಲಿಸಿತು. ಈ ಚುನಾವಣಾ ಮನವಿಯನ್ನು ಮೊದಲಿಗೆ ನ್ಯಾ. ಚಂದಾ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಗೊಳಿಸಲಾಗಿತ್ತು. ವಕೀಲರಾಗಿದ್ದಾಗ ನ್ಯಾ. ಚಂದಾ ಬಿಜೆಪಿಯ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರು ತಕರಾರು ಎತ್ತಿದ ಹಿನ್ನೆಲೆಯಲ್ಲಿ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು.

Kannada Bar & Bench
kannada.barandbench.com