ವಕ್ಫ್ ಕಾಯಿದೆ ವಿರೋಧಿ ಹಿಂಸಾಚಾರ: ಮುರ್ಷಿದಾಬಾದ್‌ನಲ್ಲಿ ಕೇಂದ್ರ ಸಶಸ್ತ್ರ ಪಡೆ ನಿಯೋಜಿಸಲು ಕಲ್ಕತ್ತಾ ಹೈಕೋರ್ಟ್ ಆದೇಶ

ಬಿಜೆಪಿಯ ಸುವೇಂದು ಅಧಿಕಾರಿ ಅವರು ಸಲ್ಲಿಸಿದ್ದ ಪಿಐಎಲ್ನ ತುರ್ತು ವಿಚಾರಣೆ ನಡೆಸಿದ ಪೀಠ ರಾಜ್ಯ ಸರ್ಕಾರ ಸಮರ್ಪಕವಾಗಿ ಹಿಂಸಾಚಾರ ನಿಯಂತ್ರಿಸಲಿಲ್ಲ ಎಂದಿತು.
Calcutta High Court
Calcutta High Court
Published on

ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಕೇಂದ್ರ ಸಶಸ್ತ್ರ ಪಡೆ ನಿಯೋಜಿಸಲು ಕಲ್ಕತ್ತಾ ಹೈಕೋರ್ಟ್ ಶನಿವಾರ ಆದೇಶಿಸಿದೆ.

ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳು ಸಮರ್ಪಕವಾಗಿಲ್ಲ. ಗಲಭೆಕೋರರನ್ನು ಬಂಧಿಸಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು  ನ್ಯಾಯಮೂರ್ತಿಗಳಾದ ಸೌಮೆನ್ ಸೇನ್  ಮತ್ತು ರಾಜಾ ಬಸು ಚೌಧರಿ ಅವರಿದ್ದ ಪೀಠ  ಹೇಳಿದೆ.

Also Read
ನಾಗಪುರ ಹಿಂಸಾಚಾರ ಆರೋಪಿಗಳ ಆಸ್ತಿ ತೆರವಿಗೆ ಬಾಂಬೆ ಹೈಕೋರ್ಟ್ ತಡೆ: ಪಾಲಿಕೆಯದ್ದು ದಬ್ಬಾಳಿಕೆಯ ಕ್ರಮ ಎಂದ ಪೀಠ

ʼಜನರ ಸುರಕ್ಷತೆ ಮತ್ತು ಭದ್ರತೆ ಅಪಾಯದಲ್ಲಿದ್ದಾಗ ಸಾಂವಿಧಾನಿಕ ನ್ಯಾಯಾಲಯಗಳು ಮೂಕ ಪ್ರೇಕ್ಷಕರಾಗಿ ತಾಂತ್ರಿಕ ರಕ್ಷಣೆಯಲ್ಲಿ ಸಿಲುಕಿಕೊಳ್ಳಬಾರದು. ಮೊದಲೇ ಕೇಂದ್ರ ಸಶಸ್ತ್ರ ಪಡೆಗಳ ನಿಯೋಜನೆ ಸಾಧ್ಯವಾಗಿದ್ದರೆ ಪರಿಸ್ಥಿತಿ ಉಲ್ಬಣಗೊಳ್ಳುತ್ತಿರಲಿಲ್ಲ. ಸೂಕ್ತ ಸಮಯಕ್ಕೆ ಕ್ರಮ ಕೈಗೊಂಡಿಲ್ಲ ಎಂದು ತೋರುತ್ತದೆʼ ಎಂದ ಪೀಠ ಜಿಲ್ಲೆಯಲ್ಲಿ ಕೇಂದ್ರ ಸಶಸ್ತ್ರ ಪಡೆ ನಿಯೋಜನೆಗೆ ನಿರ್ದೇಶನ ನೀಡಿತು.

ಬಿಜೆಪಿ ನಾಯಕ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ವಕೀಲ ತರುಣ್ ಜ್ಯೋತಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ರಾಜ್ಯದ ಕೆಲ ಭಾಗಗಳಲ್ಲಿ ಹಿಂಸಾಚಾರ ಹೆಚ್ಚಾಗುವುದನ್ನು ತಡೆಯಲು ಕೇಂದ್ರ ಸಶಸ್ತ್ರ ಪಡೆಗಳ ಉಪಸ್ಥಿತಿ ಅಗತ್ಯವಾಗಬಹುದು ಎಂದು ವಾದಿಸಲಾಗಿತ್ತು.

Also Read
ಮಣಿಪುರ ಹಿಂಸಾಚಾರ: ಸಿಎಂ ಬಿರೇನ್ ಸಿಂಗ್ ಅವರದ್ದೆನ್ನಲಾದ ಧ್ವನಿ ಮುದ್ರಿಕೆಯ ಎಫ್ಎಸ್ಎಲ್ ವರದಿ ಬಯಸಿದ ಸುಪ್ರೀಂ

ಆದರೆ ಇದು ರಾಜಕೀಯ ಪ್ರೇರಿತ ಅರ್ಜಿಯಾಗಿದ್ದು ಹಿಂಸಾಚಾರ ತಡೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪಿಸಿತು. ಈವರೆಗೆ 138 ಜನರನ್ನು ಬಂಧಿಸಲಾಗಿದೆ ಮತ್ತು ಪೊಲೀಸರಿಗೆ ಸಹಾಯ ಮಾಡಲು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಆರು ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗಲಭೆಯ ಆತಂಕ ಇದೆ ಎಂದ ನ್ಯಾಯಾಲಯ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿತು.

Kannada Bar & Bench
kannada.barandbench.com