ಇ ಡಿ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ: ಎಸ್ಐಟಿ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ಆದೇಶ

ರಾಜ್ಯ ಪೊಲೀಸ್ ಮತ್ತು ಸಿಬಿಐ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ನ್ಯಾಯಮೂರ್ತಿ ಜಯ್ ಸೇನ್‌ಗುಪ್ತಾ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತು.
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ

ಬಹುಕೋಟಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ನಡೆಸಿದ ದಾಳಿ ವೇಳೆ ಜಾರಿ ನಿರ್ದೇಶನಾಲಯ (ಇ ಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಘಟನೆಯ ತನಿಖೆಗಾಗಿ ಕಲ್ಕತ್ತಾ ಹೈಕೋರ್ಟ್ ಬುಧವಾರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ (ಜಾರಿ ನಿರ್ದೇಶನಾಲಯ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ).

ರಾಜ್ಯ ಪೊಲೀಸ್ ಮತ್ತು ಸಿಬಿಐ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ನ್ಯಾಯಮೂರ್ತಿ ಜಯ್ ಸೇನ್‌ಗುಪ್ತಾ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತು.

ಇಸ್ಲಾಂಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಿಸಿರುವ ನ್ಯಾಯಾಲಯ ಸಿಬಿಐ ಮತ್ತು ರಾಜ್ಯ ಪೊಲೀಸರನ್ನು ಸಮಾನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಬೇಕು ಹಾಗೂ ಅದು ಫೆಬ್ರವರಿ 12 ರೊಳಗೆ ತನಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಸ್ಥಳೀಯ ಪೊಲೀಸರು ಘಟನೆಯ ಬಗ್ಗೆ ನ್ಯಾಯಯುತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಇ ಡಿ ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಜನವರಿ 16ರಂದು ನಡೆದ ವಿಚಾರಣೆಯ ಸಮಯದಲ್ಲಿ, ಪ್ರಕರಣದ ಪ್ರಮುಖ ಆರೋಪಿ ಶಹಜಹಾನ್ ಅವರ ಮನೆಯ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು. 

ವರದಿಗಳ ಪ್ರಕಾರ, ಬಹುಕೋಟಿ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಇ ಡಿ ಅಧಿಕಾರಿಗಳು ಪ. ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಲಿ ಪ್ರದೇಶದಲ್ಲಿ ದಾಳಿ ನಡೆಸಿದ್ದ ವೇಳೆ ಟಿಎಂಸಿ ಮುಖಂಡ ಶೇಖ್ ಶಹಜಹಾನ್ ಅವರ ನಿವಾಸದ ಬಳಿ ಸ್ಥಳೀಯ ಟಿಎಂಸಿ ಬೆಂಬಲಿಗರು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಜ್ಯೋತಿಪ್ರಿಯೋ ಮಲ್ಲಿಕ್ (ಪ್ರಸ್ತುತ ರಾಜ್ಯ ಅರಣ್ಯ ಸಚಿವ) ಅವರೊಂದಿಗೆ ಶಹಜಹಾನ್ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಜನವರಿ 5 ರಂದು, ಅಕುಂಜಿಪಾರಾದಲ್ಲಿರುವ ಶಹಜಹಾನ್ ನಿವಾಸದ ಮೇಲೆ ದಾಳಿ ನಡೆಸಲು ಆಗಮಿಸಿದ ಇಡಿ ಅಧಿಕಾರಿಗಳನ್ನು ಸುಮಾರು 200 ಸ್ಥಳೀಯ ಜನರು ಸುತ್ತುವರಿದು ಘೇರಾವ್ ಹಾಕಿದ್ದರು. ಇ ಡಿ ಅಧಿಕಾರಿಗಳು ಮತ್ತು ಅವರೊಂದಿಗೆ ಬಂದ ಅರೆಸೈನಿಕ ಪಡೆಗಳ ಮೇಲೆ ದಾಳಿ ನಡೆದಿದ್ದು ಇ ಡಿ ಆ ಪ್ರದೇಶ ತೊರೆಯುವಂತಾಗಿತ್ತು. ಘಟನೆಯಲ್ಲಿ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು.ಘಟನೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರು ಶಹಜಹಾನ್ ಅವರನ್ನು ಬಂಧಿಸುವಂತೆ ಸೂಚಿಸಿದ್ದರು.

ನಂತರ ಪ್ರಕರಣ ಇ ಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆದದ್ದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿತ್ತು. ಜಾರಿ ನಿರ್ದೇಶನಾಲಯ ಕೇಂದ್ರ ಸಂಸ್ಥೆಯಾಗಿರುವುದರಿಂದ, ಪಿಐಎಲ್ ಮೂಲಕ ರಕ್ಷಣೆಯ ಪಡೆಯಬೇಕಾದಷ್ಟು ಶಕ್ತಿಹೀನ ಅಥವಾ ಅಸಹಾಯಕವಲ್ಲ ಎಂದು ಮುಖ್ಯ ಎಂದು ಅದು ಹೇಳಿತ್ತು.

Kannada Bar & Bench
kannada.barandbench.com