ವಿಶ್ವಭಾರತಿ ವಿಶ್ವವಿದ್ಯಾಲಯವು ತಮಗೆ ನೀಡಿರುವ ತೆರವು ನೋಟಿಸ್‌ಗೆ ತಡೆ ಕೋರಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಸಲ್ಲಿಸಿರುವ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವು ಇತ್ಯರ್ಥ ಪಡಿಸುವವರೆಗೆ ನೋಟಿಸ್ ಜಾರಿಗೆ ಮುಂದಾಗದಂತೆ ಕಲ್ಕತ್ತಾ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಭಾಸ್ ರಂಜನ್ ಡೆ ಅವರು, ತಡೆಯಾಜ್ಞೆ ನೀಡುವಂತೆ ಕೋರಿ ಅಮರ್ತ್ಯ ಸೇನ್ ಅವರು ಸಲ್ಲಿಸಿರುವ ಅರ್ಜಿಯನ್ನು ಮೇ 10ರಂದು ವಿಚಾರಣೆ ನಡೆಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿದರು. ಅಲ್ಲಿಯವರೆಗೆ ವಿಶ್ವಭಾರತಿ ಮತ್ತು ಭೂ ಅಧಿಕಾರಿ ನೀಡಿರುವ ಆದೇಶವನ್ನು ಜಾರಿಗೊಳಿಸಬಾರದು ಎಂದು ಆದೇಶಿಸಿದರು.
ಭೂಮಿ ತೆರವುಗೊಳಿಸುವಂತೆ ವಿಶ್ವಭಾರತಿ ಏಪ್ರಿಲ್ 19ರಂದು ನೀಡಿರುವ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಅಮರ್ತ್ಯ ಸೇನ್ ಅವರು ಏಪ್ರಿಲ್ 26 ರಂದು ಬೀರ್‌ಭೂಮ್ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.
ಸೇನ್ ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ 13 ಡೆಸಿಮಲ್ ಭೂಮಿಯನ್ನು ತೆರವುಗೊಳಿಸಲು ಬಲಪ್ರಯೋಗ ಮಾಡಬೇಕಾಗುತ್ತದೆ ಎಂದು ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿತ್ತು.
ಅಮರ್ತ್ಯ ಸೇನ್ ಅವರು ವಿಶ್ವವಿದ್ಯಾಲಯದ ಆವರಣದಲ್ಲಿ ಕಾನೂನು ಪ್ರಕಾರ 1.25 ಎಕರೆ ವಿಸ್ತೀರ್ಣ ಜಾಗವನ್ನು ಮಾತ್ರ ಗುತ್ತಿಗೆಗೆ ಪಡೆದಿದ್ದಾರೆ. ಅದರೆ ಅವರು 1.38 ಎಕರೆ ಜಾಗವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಂದರೆ ಹೆಚ್ಚುವರಿಯಾಗಿ 13 ಡೆಸಿಮಲ್ ಭೂಮಿಯನ್ನು ಅತಿಕ್ರಮಿಸಿದ್ದಾರೆ. ಹೆಚ್ಚುವರಿ ಜಾಗವನ್ನು ಮೇ 6ರೊಳಗೆ ಖಾಲಿ ಮಾಡದೆ ಹೋದರೆ ಅಲ್ಲಿರುವವರನ್ನು ಬಲವಂತವಾಗಿ ತೆರವುಗೊಳಿಸಬೇಕಾಗುತ್ತದೆ ಎಂದು ವಿವಿಯ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]