ರಾಮ ಮಂದಿರ ಉದ್ಘಾಟನೆ ದಿನ ಟಿಎಂಸಿ ಧಾರ್ಮಿಕ ಸೌಹಾರ್ದ ಸಮಾವೇಶ; ಸುವೇಂದು ಅರ್ಜಿ ತಿರಸ್ಕರಿಸಿದ ಕಲ್ಕತ್ತಾ ಹೈಕೋರ್ಟ್‌

ಸಮಾವೇಶ ರಾಮ ಮಂದಿರ ಉದ್ಘಾಟನೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಪ್ರಶ್ನಿಸಿತು. ಇದೇ ವೇಳೆ ಸಮಾವೇಶದಿಂದ ಶಾಂತಿ ಭಂಗ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.
ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ
ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿರುವ ಜನವರಿ 22ರಂದು ಟಿಎಂಸಿ ಹಮ್ಮಿಕೊಂಡಿರುವ "ಸಂಪ್ರೀತಿ" ಸಮಾವೇಶ (ಎಲ್ಲಾ ಧರ್ಮಗಳ ಸಾಮರಸ್ಯ ಸಮಾವೇಶ) ನಡೆಸುವುದನ್ನು ನಿಲ್ಲಿಸುವಂತೆ ಕೋರಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಸುವೇಂದು ಅಧಿಕಾರಿ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಲು ಕಲ್ಕತ್ತಾ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಸಮಾವೇಶ ರಾಮ ಮಂದಿರದ ಉದ್ಘಾಟನೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ಪ್ರಶ್ನಿಸಿತು. ಇದೇ ವೇಳೆ ಸಮಾವೇಶದಿಂದ ಶಾಂತಿ ಭಂಗ ಉಂಟಾಗದಂತೆ ನೋಡಿಕೊಳ್ಳಬೇಕು ಸರ್ಕಾರಕ್ಕೆ ಸೂಚಿಸಿತು.

"ಸಮಾವೇಶದಲ್ಲಿ ಯಾವುದೇ ನಿರ್ದಿಷ್ಟ ಧರ್ಮ ಅಥವಾ ಪಂಥಕ್ಕೆ ಸೇರಿದ ಜನರ ಭಾವನೆಗಳನ್ನು ನೋಯಿಸುವ ಯಾವುದೇ ಭಾಷಣ ಅಥವಾ ಹೇಳಿಕೆಗಳನ್ನು ನೀಡಬಾರದು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಮಾವೇಶದಲ್ಲಿ ಭಾಗವಹಿಸುವ ಎಲ್ಲ ವ್ಯಕ್ತಿಗಳು ಸಂವೇದನಾಶೀಲರಾಗಿ ನಡೆದುಕೊಳ್ಳಬೇಕು. ಹಿಂಸಾಚಾರ ಸಂಭವಿಸಿದರೆ ಸಂಘಟಕರನ್ನು ಹೊಣೆಗಾರರನ್ನಾಗಿ ಮಾಡಬೇಕು" ಎಂದು ನ್ಯಾಯಾಲಯ ಇಂದು ಆದೇಶಿಸಿದೆ.

 ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ (ಎಲ್) ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ (ರಿ)
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ (ಎಲ್) ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ (ರಿ)

ಜನವರಿ 22 ರಂದು ರಾಜ್ಯದಲ್ಲಿ ನಡೆಯಲಿರುವ ಟಿಎಂಸಿ ಸಮಾವೇಶದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಸಂಭವಿಸಬಹುದು ಎಂದು ಕಳವಳ ವ್ಯಕ್ತಪಡಿಸಿ ಸುವೇಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ವೇಳೆ ಪೀಠ ಮೇಲಿನಂತೆ ಹೇಳಿತು.

ಜನವರಿ 22ರಂದು ಅಂತಹ ಯಾವುದೇ ಸಮಾವೇಶ ನಡೆಸಬಾರದು. ಬದಲಿಗೆ ಹಿಂಸೆ ತಡೆಗಟ್ಟಲು ಸೇನೆ ನಿಯೋಜಿಸಬೇಕು ಎಂದು ತಿಳಿಸಿರುವ ಅರ್ಜಿಯಲ್ಲಿ ರಾಮಮಂದಿರ ಉದ್ಘಾಟನೆ ದಿನವೇ ಏಕೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಶ್ನಿಸಲಾಗಿದೆ.

"ದ್ವೇಷ ಭಾಷಣ ಮಾಡದಂತೆ, ಸಾಕಷ್ಟು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ರಾಜ್ಯಕ್ಕೆ ಸೂಚಿಸಬಹುದಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಮಾವೇಶಗಳು ಹೊಸತಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಗಮನಸೆಳೆದರು.

ದಿನಾಂಕ ಬದಲಿಸುವಂತೆ ಸುವೇಂದು ಪರ ವಕೀಲರು ಒತ್ತಾಯಿಸಿದ್ದಕ್ಕೆ ಆಕ್ಷೇಪಿಸಿದ ಪ. ಬಂಗಾಳ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು "ದಿನಾಂಕ ಆಯ್ಕೆ ಮಾಡುವ ಹಕ್ಕು ನಿಮಗೆ ಮಾತ್ರ ಇದೆಯೇ ಉಳಿದವರು ಅದನ್ನು ಮಾಡಬಾರದೆ?" ಎಂದು ಪ್ರಶ್ನಿಸಿದರು. ಘರ್ಷಣೆಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಸರ್ಕಾರದ ಪರವಾಗಿ ಅವರು ಭರವಸೆ ನೀಡಿದರು.

ಈ ಹಂತದಲ್ಲಿ ಸರ್ಕಾರಕ್ಕೆ ವಿವಿಧ ನಿರ್ದೇಶನಗಳನ್ನು ನೀಡಿದ ನ್ಯಾಯಾಲಯ ಸುವೇಂದು ಅವರ ಅರ್ಜಿಯನ್ನು ವಿಲೇವಾರಿ ಮಾಡಿತು.

Kannada Bar & Bench
kannada.barandbench.com