ಕೋವಿಡ್ ಲಸಿಕೆ ಪಡೆಯದಂತೆ ಕರಪತ್ರ ಹಂಚುತ್ತಿದ್ದ ವ್ಯಕ್ತಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದತಿಗೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ [ಅನಿಧ್ಯ ದಾಸ್ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].
ಶಾಲೆಯಲ್ಲಿ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಅಡ್ಡಿ ಉಂಟುಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಅನಿಂದ್ಯಾ ದಾಸ್ ವಿರುದ್ಧ ಹೂಡಲಾಗಿದ್ದ ವಿವಿಧ ಕ್ರಿಮಿನಲ್ ಮೊಕದ್ದಮೆಗಳು ಸಮರ್ಥನೀಯವೆಂದು ತೋರುತ್ತಿದೆ ಎಂಬುದಾಗಿ ನ್ಯಾಯಾಧೀಶೆ ಶಂಪಾ ದತ್ (ಪೌಲ್) ತಿಳಿಸಿದ್ದಾರೆ.
ರಾಜ್ಯ ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾದ ಇಂತಹ ಕೃತ್ಯಗಳನ್ನು ಪ್ರೋತ್ಸಾಹಿಸುವುದು ಸ್ಪಷ್ಟವಾಗಿ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದ ನ್ಯಾಯಾಲಯ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದು ನ್ಯಾಯದ ಹಿತದೃಷ್ಟಿಯಿಂದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದೆ.
ಪ. ಬಂಗಾಳದ ಟೀಟಾಗಢದ ಬಾಲಕಿಯರ ಶಾಲೆಯಲ್ಲಿ ನವೆಂಬರ್ 1, 2022ರಂದು ಲಸಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗ ದಾಸ್ ಹಾಗೂ ಇನ್ನಿಬ್ಬರು ಕರಪತ್ರ ಹಂಚಿ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿರುವುದರಿಂದ ಮಕ್ಕಳಿಗೆ ಲಸಿಕೆ ಹಾಕಿಸದಂತೆ ಪೋಷಕರಿಗೆ ಒತ್ತಾಯಿಸಿದ್ದರು. ಭಾರತ್ ಜಾಗರಣ್ ಆಂದೋಲನ ಅಥವಾ ಅವೇಕನ್ ಇಂಡಿಯಾ ಮೂವ್‌ಮೆಂಟ್ ಸದಸ್ಯರು ತಾವೆಂದು ದಾಸ್ ಹಾಗೂ ಇತರರು ಹೇಳಿಕೊಂಡಿದ್ದರು.
ಲಸಿಕೆ ಅಭಿಯಾನಕ್ಕೆ ಅಡ್ಡಿಪಡಿಸುವುದಕ್ಕಾಗಿ ಅವರು ವದಂತಿ ಹರಡಿದ್ದರು. ಮುಖಕ್ಕೆ ಮಾಸ್ಕ್ ಧರಿಸದೆ ತೊಂದರೆ ಉಂಟುಮಾಡಲು ಯತ್ನಿಸುತ್ತಿದ್ದಾರೆ. ಎಚ್ಚರಿಕೆಯ ಹೊರತಾಗಿಯೂ ಅವರು ಈ ಕೃತ್ಯ ನಿಲ್ಲಿಸಿರಲಿಲ್ಲ ಎಂದು ಆರೋಪಿಸಲಾಗಿತ್ತು. ಹೀಗಾಗಿ ಕರಪತ್ರ ಹಂಚಿಕೊಂಡ ತಾವು ಎಲ್ಲಾ ಮೂವರನ್ನು ಸಾಕ್ಷಿಗಳ ಸಮ್ಮುಖದಲ್ಲಿ ಬಂಧಿಸಿದ್ದೆವು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಏಪ್ರಿಲ್ 19 ರಂದು, ಮೂವರು ಆರೋಪಿಗಳಲ್ಲಿ ಒಬ್ಬರಾದ ಅನಿಂಧ್ಯಾ ದಾಸ್ ಅವರ ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್ ಕ್ರಿಮಿನಲ್ ಮೊಕದ್ದಮೆ ರದ್ದತಿಗೆ ನಿರಾಕರಿಸಿತು.