

ಅಯೋಧ್ಯೆಯಲ್ಲಿ 1992ರಲ್ಲಿ ನಡೆದ ಕೋಮು ಗಲಭೆ ವೇಳೆ ಕೆಡವಲಾದ ಬಾಬರಿ ಮಸೀದಿಯಂತೆಯೇ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮಸೀದಿ ನಿರ್ಮಾಣ ಸಂಬಂಧ ಹಮ್ಮಿಕೊಳ್ಳಲಾದ ಶಿಲಾನ್ಯಾಸ ಕಾರ್ಯಕ್ರಮ ಸ್ಥಗಿತಗೊಳಿಸಲು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ [ಡಾ. ಅಬ್ದುಸ್ ಸಲಾಮ್ ಶೇಖ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಡಿಸೆಂಬರ್ 6 ರಂದು ಶಿಲಾನ್ಯಾಸ ಸಮಾರಂಭ ನಡೆಸುವುದಾಗಿ ಟಿಎಂಸಿಯ ಅಮಾನತುಗೊಂಡ ಶಾಸಕ ಹುಮಾಯೂನ್ ಕಬೀರ್ ಘೋಷಿಸಿದ್ದರು, ಅವರು ಬೆಲ್ದಂಗಾದಲ್ಲಿ ಮಸೀದಿ ನಿರ್ಮಿಸುವ ಪ್ರಸ್ತಾಪ ಮಾಡಿದ್ದರು.
ಬಾಬರಿ ಶೈಲಿಯ ಮಸೀದಿ ನಿರ್ಮಿಸವ ಬಗ್ಗೆ ಕಬೀರ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಟಿಎಂಸಿ ಅವರನ್ನು ಡಿಸೆಂಬರ್ 4 ರಂದು ಪಕ್ಷದಿಂದ ಅಮಾನತು ಮಾಡಿತ್ತು. ಜೊತೆಗೆ ಶಿಲಾನ್ಯಾಸ ಕಾರ್ಯಕ್ರಮದಿಂದಲೂ ಅದು ದೂರ ಉಳಿದಿತ್ತು ಎಂದು ವರದಿಯಾಗಿದೆ.
ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಡಾ. ಅಬ್ದುಸ್ ಸಲಾಮ್ ಶೇಖ್ ಎಂಬುವವರು ಕೋಮು ಸಾಮರಸ್ಯವನ್ನು ಕದಡಬಹುದು ಎಂಬ ಕಳವಳದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ತಡೆ ನೀಡುವಂತೆ ಕೋರಿದ್ದರು.
ಆದರೆ ಕಾರ್ಯಕ್ರಮ ಸ್ಥಗಿತಗೊಳಿಸಲು ನಿರಾಕರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ಮುಕ್ತಾಯಗೊಳಿಸಿತು.
ಅರ್ಜಿದಾರರು ಪ್ರಸ್ತಾಪಿಸಿದ ಮೂಲ ಆತಂಕ ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಜನರ ಜೀವ ಮತ್ತು ಆಸ್ತಿ ರಕ್ಷಣೆಗೆ ಸಂಬಂಧಪಟ್ಟಿದೆ ಎಂದು ನ್ಯಾಯಾಲಯ ತಿಳಿಸಿತು.
ವಿಚಾರಣೆಯ ಸಮಯದಲ್ಲಿ, ಅಡ್ವೊಕೇಟ್ ಜನರಲ್ ಕಿಶೋರ್ ದತ್ತ ಅವರು, ಸರ್ಕಾರ ಪರಿಸ್ಥಿತಿಯ ಬಗ್ಗೆ ಎಚ್ಚರದಿಂದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಕಾಪಾಡಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತು.
ಸರ್ಕಾರ ತನ್ನ ನಿಲುವಿನಂತೆ ನಡೆದುಕೊಳ್ಳಬೇಕು. ಮುರ್ಷಿದಾಬಾದ್‌ನಲ್ಲಿ ಕಾನೂನು- ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳಬೇಕು. ನಾಗರಿಕರ ಜೀವನ ಮತ್ತು ಆಸ್ತಿ ಸುರಕ್ಷತೆ ಬಗ್ಗೆ ನಿಗಾವಹಿಸಬೇಕು ಎಂದು ಕೋರ್ಟ್ ಆದೇಶ ತಿಳಿಸಿದೆ.
[ಆದೇಶದ ಪ್ರತಿ]