ಇಡಿ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ: ತುರ್ತು ವಿಚಾರಣೆಗೆ ಕಲ್ಕತ್ತಾ ಹೈಕೋರ್ಟ್ ನಕಾರ

ಅರ್ಜಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಓದಿದ್ದು ಪಿಐಎಲ್‌ಗಳನ್ನು ವಿಚಾರಣೆ ನಡೆಸುವ ಗುರುವಾರದಂದು ಅರ್ಜಿ ಕೈಗೆತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನೇತೃತ್ವದ ಪೀಠ ನುಡಿಯಿತು.
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ
Published on

ಪ. ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಲಿ ಪ್ರದೇಶದಲ್ಲಿ ಜಾರಿ ನಿರ್ದೇಶನಾಲಯದ (ಇ ಡಿ) ಅಧಿಕಾರಿಗಳ ಮೇಲೆ ಇತ್ತೀಚೆಗೆ ನಡೆದ ದಾಳಿಯ ಕುರಿತು ಗಮನಸೆಳೆದಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ತುರ್ತು ವಿಚಾರಣೆ ನಡೆಸಲು ಕಲ್ಕತ್ತಾ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. 

ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಪ್ರಕರಣವನ್ನು ಇಂದು ಕೈಗೆತ್ತಿಕೊಳ್ಳುವ ಬದಲು ಗುರುವಾರ ವಿಚಾರಣೆ ನಡೆಸುವುದಾಗಿ ಹೇಳಿದೆ. 

ಘಟನೆ ನಂತರ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಇರುವುದರಿಂದ ನ್ಯಾಯಾಲಯ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು. ಆದರೆ "ನಾವು ನಿಮ್ಮ ಅರ್ಜಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಓದಿದ್ದೇವೆ. ಅರ್ಜಿಯನ್ನು ಸೂಕ್ತ ಸಮಯದಲ್ಲಿ ಅಂದರೆ ಗುರುವಾರ ಆಲಿಸುತ್ತೇವೆ" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಜಿಲ್ಲಾ ಪರಿಷತ್‌ ಸ್ಥಳೀಯ ಸದಸ್ಯರೊಬ್ಬರಿಗೆ ಸಂಬಂಧಿಸಿದ 'ಪಡಿತರ ವಿತರಣಾ ಹಗರಣ'ದ ತನಿಖೆಗಾಗಿ ತೆರಳಿದ್ದ ಇ ಡಿ ಅಧಿಕಾರಿಗಳ ತಂಡದ ಮೇಲೆ ಸಂದೇಶ್‌ಖಲಿ ಪ್ರದೇಶದಲ್ಲಿ ಸ್ಥಳೀಯರು ಹಲ್ಲೆ ನಡೆಸಿದ್ದರು ಎಂದು ವರದಿಯಾಗಿತ್ತು.

ಇ ಡಿ ಅಧಿಕಾರಿಗಳು ಮಹಿಳೆಯರ ಗೌರವಕ್ಕೆ ಧಕ್ಕೆ ತರಲು ಯತ್ನಿಸಿದ್ದರು ಎಂಬುದು ಸ್ಥಳೀಯರ ಆರೋಪವಾಗಿತ್ತು.

Kannada Bar & Bench
kannada.barandbench.com