ಪ. ಬಂಗಾಳದಲ್ಲಿ 37 ವರ್ಗಗಳಿಗೆ ನೀಡಿದ್ದ ಒಬಿಸಿ ಸ್ಥಾನಮಾನ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಪ. ಬಂಗಾಳ ಹಿಂದುಳಿದ ವರ್ಗಗಳ (ಪರಿಶಿಷ್ಟ ಜಾತಿ ಮತ್ತು ಪ. ಪಂಗಡ ಹೊರತಾದ) (ಸೇವಾ ಮತ್ತು ಹುದ್ದೆ ಭರ್ತಿ ಮೀಸಲಾತಿ) ಕಾಯಿದೆ - 2012ರ ವಿವಿಧ ಸೆಕ್ಷನ್‌ಗಳನ್ನು ಪೀಠ ಬುಧವಾರ ರದ್ದುಗೊಳಿಸಿತು.
Calcutta High Court
Calcutta High Court

ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೊರತಾದ) (ಸೇವಾ ಮತ್ತು ಹುದ್ದೆ ಭರ್ತಿ ಮೀಸಲಾತಿ) ಕಾಯಿದೆ - 2012ರ ಅಡಿ 37 ಸಮುದಾಯಗಳಿಗೆ ನೀಡಲಾಗಿದ್ದ ಇತರೆ ಹಿಂದುಳಿದ ವರ್ಗಗಳ ಸ್ಥಾನಮಾನವನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ [ಅಮಲ್‌ ಚಂದ್ರ ದಾಸ್‌ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].

ಈ ಕಾಯ್ದೆಯಡಿ ನೀಡಲಾದ ಒಬಿಸಿ ಪ್ರಮಾಣಪತ್ರಗಳನ್ನು  ನ್ಯಾಯಮೂರ್ತಿಗಳಾದ ತಪಬ್ರತ ಚಕ್ರವರ್ತಿ ಮತ್ತು ರಾಜಶೇಖರ್ ಮಂಥ ಅವರಿದ್ದ ವಿಭಾಗೀಯ ಪೀಠ ರದ್ದುಗೊಳಿಸಿದೆಯಾದರೂ ಈಗಾಗಲೇ ಕಾಯಿದೆಯಡಿ ಸೌಲಭ್ಯ ಮತ್ತು ಉದ್ಯೋಗ ಪಡೆದವರ ಮೇಲೆ ತನ್ನ ಆದೇಶ ಪರಿಣಾಮ ಬೀರದು ಎಂದಿದೆ.

2012 ರ ಕಾಯಿದೆಯ ಸೆಕ್ಷನ್ 16 ಅನ್ನು ನ್ಯಾಯಾಲಯ ರದ್ದುಗೊಳಿಸುತ್ತಿದೆ ಏಕೆಂದರೆ ಇದು 2012 ರ ಕಾಯಿದೆಯ ಪರಿಚ್ಛೇದವನ್ನು ತಿದ್ದುಪಡಿ ಮಾಡಲು ರಾಜ್ಯ ಕಾರ್ಯಾಂಗಕ್ಕೆ ಅಧಿಕಾರ ನೀಡುತ್ತದೆ. ಪರಿಣಾಮ ಸೆಕ್ಷನ್ 16 ರ ಅಡಿಯಲ್ಲಿ ಸೇರಿಸಲಾದ 37 ವರ್ಗಗಳು ಕಾಯಿದೆಯ ಪರಿಚ್ಛೇದ 1ರಿಂದ ಹೊರಗುಳಿಯುತ್ತಿವೆ” ಎಂದು ನ್ಯಾಯಾಲಯ ನುಡಿದಿದೆ.

ಸಾರ್ವಜನಿಕ ಸೇವೆಯಲ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ವಿವಿಧ ಸಮುದಾಯಗಳನ್ನು OBC ಗಳಾಗಿ ವರ್ಗೀಕರಿಸಿದ್ದ ವಿವಿಧ ಕಾರ್ಯಾಂಗ ಆದೇಶಗಳನ್ನು ಕೂಡ ನ್ಯಾಯಾಲಯ ರದ್ದುಗೊಳಿಸಿತು.

ಇದಲ್ಲದೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಸಮಾಲೋಚಿಸಿ ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊಸ ವರ್ಗಗಳನ್ನು ಸೇರ್ಪಡೆಗೊಳಿಸುವ ಅಥವಾ ರಾಜ್ಯ ಒಬಿಸಿ ಪಟ್ಟಿಯಲ್ಲಿ ಉಳಿದ ವರ್ಗಗಳನ್ನು ಹೊರಗಿಡುವ ಬಗ್ಗೆ  ರಾಜ್ಯ ಶಾಸಕಾಂಗಕ್ಕೆ ಶಿಫಾರಸು ವರದಿ ಸಲ್ಲಿಸುವಂತೆ ಪೀಠ ಆದೇಶಿಸಿತು.

ರಾಜ್ಯದ ಅಧಿಕಾರಗಳಿಗೆ ಮಾರ್ಗದರ್ಶನ ನೀಡುವ ಮತ್ತು ಮತ್ತು ಯಾವುದೇ ವರ್ಗವನ್ನು ಒಬಿಸಿ ಎಂದು ವರ್ಗೀಕರಿಸುವಲ್ಲಿ ತನ್ನ ಅಧಿಕಾರವನ್ನು ನಿಯೋಜಿಸುವ ಮೊದಲು ಶಾಸಕಾಂಗ ನೀತಿಯನ್ನು ರೂಪಿಸಲು ರಾಜ್ಯಕ್ಕೆ ಆದೇಶಿಸಿದ 2012ರ ಕಾಯಿದೆಗೆ ಸಂಬಂಧಿಸಿದಂತೆ ಶಾಸಕಾಂಗ ನೀತಿಯಲ್ಲಿ ಸಂಪೂರ್ಣ ಕೊರತೆ ಇದ್ದುದನ್ನು ನ್ಯಾಯಾಲಯ ಗಮನಿಸಿದೆ.

Kannada Bar & Bench
kannada.barandbench.com