ಯಾವುದೇ ನಾಗರಿಕ ಹಾಗೂ ಆತನ ಕುಟುಂಬದ ಸದಸ್ಯರು ಸಾಮಾಜಿಕ ಬಹಿಷ್ಕಾರಕ್ಕೆ ಈಡಾದರೆ ಅದರ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ (ರಣಜಿತ್ ಮೊಂಡಲ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯ).
ತನ್ನ ಆಸ್ತಿಯ ಮುಂದೆ ಅಕ್ರಮವಾಗಿ ನಿರ್ಮಿಸಲಾದ ದೇವಾಲಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ತನ್ನ ವಿರುದ್ಧ ಸ್ಥಳೀಯರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜೇ ಸೇನ್ ಗುಪ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.
"ಒಬ್ಬ ನಾಗರಿಕ ಅಥವಾ ಆತನ ಕುಟುಂಬದ ಸದಸ್ಯರು ಸಾಮಾಜಿಕ ಬಹಿಷ್ಕಾರವಕ್ಕೆ ಈಡಾದರೆ ಆಡಳಿತವು ಅದರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ನಾಗರಿಕ ಸಮಾಜದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಸ್ಥಾನವಿಲ್ಲ" ಎಂದು ನ್ಯಾಯಮೂರ್ತಿ ಸೇನ್ ಗುಪ್ತಾ ಡಿಸೆಂಬರ್ 27 ರ ಆದೇಶದಲ್ಲಿ ಹೇಳಿದ್ದಾರೆ.
ಯಾವುದೇ ಪಕ್ಷಕಾರರು ಪ್ರಶ್ನಾರ್ಹ ಆಸ್ತಿಗೆ ಸಂಬಂಧಿಸಿದಂತೆ ತಮ್ಮ ಹಕ್ಕಿನ ದಾವೆದಾರಿಕೆ ಮಂಡಿಸಲು ಬಯಸಿದರೆ, ಅವರು ಸಿವಿಲ್ ನ್ಯಾಯಾಲಯದ ಮುಂದೆ ಅದನ್ನು ಮಾಡಬಹುದು. ಅದರೆ, ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಯಾರಿಗೂ ಯಾವುದೇ ಹಕ್ಕಿಲ್ಲ ಎಂದು ನ್ಯಾಯಾಲಯ ಹೇಳಿತು.
ಅರ್ಜಿದಾರರು ಆಸ್ತಿಯನ್ನು ಹೊಂದಿದ್ದು, ಅದರ ಆನಂದದಾಯಕ ಉಪಭೋಗಕ್ಕ ಕೆಲವು ವ್ಯಕ್ತಿಗಳು (ಪ್ರತಿವಾದಿಗಳು) ಅಡ್ಡಿಪಡಿಸುತ್ತಿದ್ದರು. ಇದರ ವಿರುದ್ಧ ಅರ್ಜಿದಾರರು ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದರು. ಇದನ್ನು ಆಲಿಸಿದ್ದ ನ್ಯಾಯಾಲಯವು ಪ್ರತಿವಾದಿಗಳ ವಿರುದ್ಧ ನಿರ್ಬಂಧಕ ಆದೇಶವನ್ನು ಹೊರಡಸಿತ್ತು ಎಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದರು.
ಮುಂದುವರೆದು, ನ್ಯಾಯಾಲಯದ ಆದೇಶದ ಹೊರತಾಗಿಯೂ ಪ್ರತಿವಾದಿಗಳು ಮಧ್ಯಂತರ ನಿರ್ಬಂಧಕಾಜ್ಞೆಯನ್ನು ಉಲ್ಲಂಘಿಸುತ್ತಲೇ ಇದ್ದಾರೆ ಮತ್ತು ಇತರ ಸ್ಥಳೀಯರೊಂದಿಗೆ ಸೇರಿ ಅರ್ಜಿದಾರರನ್ನು ಸಾಮಾಜಿಕವಾಗಿ ಬಹಿಷ್ಕರಿಸಲು ಪ್ರಾರಂಭಿಸಿದ್ದಾರೆ ಎಂದು ಹೈಕೋರ್ಟ್‌ಗೆ ತಿಳಿಸಲಾಯಿತು.
ಕಕ್ಷಿದಾರರ ನಡುವೆ ಸಿವಿಲ್ ವಿವಾದ ಬಾಕಿ ಇರುವಾಗ, ಈ ಪ್ರದೇಶದಲ್ಲಿ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 107 (ಶಾಂತಿ ಕಾಪಾಡಲು ಭದ್ರತೆ) ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ರಾಜ್ಯದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಖಾಸಗಿ ಪ್ರತಿವಾದಿಗಳ ವಿರುದ್ಧದ ನಿರ್ಬಂಧಕ ಆದೇಶವನ್ನು ಗಮನಿಸಿದ ನ್ಯಾಯಾಲಯವು ಶಾಂತಿ ಉಲ್ಲಂಘನೆ ನಡೆಯದಂತೆ ಮತ್ತು ಸಿವಿಲ್ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸದಂತೆ ಖಚಿತಪಡಿಸಿಕೊಳ್ಳಲು ಈ ಪ್ರದೇಶದಲ್ಲಿ ವ್ಯಾಪಕ ಗಸ್ತು ಕೈಗೊಳ್ಳುವಂತೆ ಪೊಲೀಸರಿಗೆ ಆದೇಶಿಸಿತು.
"ಪೊಲೀಸರು ಕಣ್ಗಾವಲು ಇರಿಸಬೇಕಿದ್ದು ಈ ಪ್ರದೇಶದಲ್ಲಿ ನಿಯಮಿತವಾಗಿ ಗಸ್ತು ನಡೆಸಬೇಕು" ಎಂದು ಮನವಿಯನ್ನು ವಿಲೇವಾರಿ ಮಾಡುವಾಗ ಹೇಳಿತು.
[ತೀರ್ಪು ಓದಿ]