'ನ್ಯಾಯಾಲಯ ತನ್ನನ್ನು ಮಾರಿಕೊಂಡಿದೆ': ಸಿಎಂ ಮಮತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯ
ಕಲ್ಕತ್ತಾ ಹೈಕೋರ್ಟ್ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ (ಸಿಎಂ) ಮಮತಾ ಬ್ಯಾನರ್ಜಿ ಅವರು ಮಾಡಿದ ಟೀಕೆಗಳ ಕುರಿತು ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ವಕೀಲರ ಗುಂಪೊಂದು ಗುರುವಾರ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಒತ್ತಾಯಿಸಿದೆ.
ಶಾಲಾ ನೇಮಕಾತಿಗೆ ಸಂಬಂಧಿಸಿದಂತೆ ಸುಮಾರು 24,000 ಶಿಕ್ಷಕರ ನೇಮಕಾತಿ ರದ್ದುಗೊಳಿಸಿ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ “ಹೈಕೋರ್ಟ್ ತನ್ನನ್ನು ಮಾರಿಕೊಂಡಿದೆ” ಎಂದು ಸಿಎಂ ಮಮತಾ ಹೇಳಿರುವುದಾಗಿ ವರದಿಯಾಗಿತ್ತು.
ಮಾನಹಾನಿಕರ ಹೇಳಿಕೆಗಳ ವಿರುದ್ಧ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠವನ್ನು ಸಂಪರ್ಕಿಸಿದ ಹಿರಿಯ ವಕೀಲ ಮತ್ತು ಸಿಪಿಎಂ ನಾಯಕ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಜನರ ದೃಷ್ಟಿಯಲ್ಲಿ ನ್ಯಾಯಾಲಯದ ಸ್ಥಾನವನ್ನು ಕೆಳಗಿಳಿಸಲು ಮುಖ್ಯಮಂತ್ರಿ ಬ್ಯಾನರ್ಜಿ ಅವರು ನಿರಂತರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನ 2 ಗಂಟೆಯೊಳಗೆ ಅನುವಾದಿತ ವರದಿಗಳು ಹಾಗೂ ಆಂಗ್ಲಪತ್ರಿಕೆಗಳ ವರದಿಗಳ ಮಾಹಿತಿ ಒದಗಿಸುವುದಾಗಿ ಅವರು ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈ ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಕೀಲರು ಅರ್ಜಿ ಸಲ್ಲಿಸಿದ್ದು ಮಮತಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕ್ರಮಕ್ಕೆ ಒತ್ತಾಯಿಸಿ ಮತ್ತೊಬ್ಬ ವಕೀಲರು ನ್ಯಾಯಾಲಯಕ್ಕೆ ಪತ್ರ ಬರೆದಿದ್ದಾರೆ.
ಮಧ್ಯಾಹ್ನದ ನಂತರ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಅರ್ಜಿಗಳನ್ನು ಸಲ್ಲಿಸಲು ಅನುಮತಿ ನೀಡಿತು. ಜೊತೆಗೆ ಮುಖ್ಯಮಂತ್ರಿಯವರ ವಿವಾದಾತ್ಮಕ ಹೇಳಿಕೆಗಳ ಕುರಿತು ಭಟ್ಟಾಚಾರ್ಯ ಅವರು ಸಲ್ಲಿಸಿದ ಮಾಧ್ಯಮ ವರದಿಗಳನ್ನು ದಾಖಲೆಯಲ್ಲಿ ಪಡೆಯಿತು. ಈ ದಾಖಲೆಗಳನ್ನು ಮುಂದಿನ ಕ್ರಮಕ್ಕಾಗಿ ಆಡಳಿತಾತ್ಮಕ ನೆಲೆಯಿಂದ ಮುಖ್ಯ ನ್ಯಾಯಮೂರ್ತಿಗಳೆದುರು ಇಡುವುದಾಗಿ ಪೀಠ ತಿಳಿಸಿದೆ.
ಹೈಕೋರ್ಟ್ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳ ನೇಮಕಾತಿಯನ್ನು ರದ್ದು ಮಾಡಿರುವುದನ್ನು ಪ್ರಶ್ನಿಸಿ ನಿನ್ನೆ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಪ್ರಕರಣದ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ