ಪೇಸಿಎಂ ಅಭಿಯಾನಕ್ಕೆ ಕರೆ ಪ್ರಕರಣ: ಕಾಂಗ್ರೆಸ್‌ನ ಇಬ್ಬರು ಮುಖಂಡರ ವಿರುದ್ಧದ ಎಫ್‌ಐಆರ್‌ ವಜಾಗೊಳಿಸಿದ ಹೈಕೋರ್ಟ್‌

ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣೆ ಕಾಯಿದೆ - 1984 ಮತ್ತು ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಕಾಯಿದೆ - 1981 ಮತ್ತು ಐಪಿಸಿ ಸೆಕ್ಷನ್‌ 290ರ ಅಡಿ ದಾಖಲಿಸಿದ್ದ ಪ್ರಕರಣವನ್ನು ವಜಾಗೊಳಿಸಿದ ಹೈಕೋರ್ಟ್‌.
PayCM Campaign
PayCM Campaign

ಪೇಸಿಎಂ ಅಭಿಯಾನಕ್ಕೆ ಕರೆಕೊಟ್ಟಿದ ಆರೋಪದ ಮೇಲೆ ಬೆಂಗಳೂರಿನ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಹಾಗೂ ವಕೀಲರಿಬ್ಬರ ಮೇಲೆ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.

ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣೆ ಕಾಯಿದೆ - 1984 ಮತ್ತು ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಕಾಯಿದೆ - 1981 ಮತ್ತು ಐಪಿಸಿ ಸೆಕ್ಷನ್‌ 290ರ ಅಡಿ ದಾಖಲಿಸಿದ್ದ ಪ್ರಕರಣವನ್ನು ಪ್ರಶ್ನಿಸಿ ನೆಲಮಂಗಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ವಕೀಲ ನಾರಾಯಣ ಗೌಡ ಜೆ ಎಸ್‌ ಮತ್ತು ಕಾನೂನು ಘಟಕದ ಮುಖ್ಯಸ್ಥ ವಕೀಲ ವಿ ರಾಮಕೃಷ್ಣ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

“ಅರ್ಜಿದಾರರು ಇತರರಿಗೆ ಮೊಬೈಲ್‌ ಮೂಲಕ ಪೋಸ್ಟರ್‌ ಅಥವಾ ಭಿತ್ತಿಪತ್ರಗಳನ್ನು ಅಂಟಿಸುವಂತೆ ಸೂಚಿಸಿದ್ದಾರೆ ಎಂದ ಮಾತ್ರಕ್ಕೆ ಅವರು ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣೆ ಕಾಯಿದೆ ಮತ್ತು ಕಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಕಾಯಿದೆ ನಿಬಂಧನೆಗಳ ಅಡಿ ಅಪರಾಧಿಗಳಾಗುವುದಿಲ್ಲ. ಕಾಯಿದೆ ಅಡಿ ಅಪರಾಧವಾಗುವಂಥ ಯಾವುದೇ ಕೆಲಸವನ್ನು ಅರ್ಜಿದಾರರು ಮಾಡಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ದದ ಎಫ್‌ಐಆರ್‌ ಮತ್ತು ನೆಲಮಂಗಲದಲ್ಲಿನ 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಲ್ಲಿನ ಪ್ರಕ್ರಿಯೆಯನ್ನು ವಜಾಗೊಳಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮುಂದುವರಿದು, “ಆದೇಶದಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯವು ಹಾಲಿ ಅರ್ಜಿದಾರರ ವಿರುದ್ದದ ಪ್ರಕರಣವನ್ನು ಪರಿಗಣಿಸುವುದಕ್ಕೆ ಸೀಮಿತವಾಗಿದ್ದು, ಇತರೆ ಆರೋಪಿಗಳ ವಿರುದ್ಧದ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಎಫ್‌ಐಆರ್‌ನಲ್ಲಿ ಏನಿತ್ತು?: ಅರ್ಜಿದಾರರ ಸೂಚನೆಯಂತೆ ವರುಣ್‌ ಕುಮಾರ್‌ ಎಲ್‌ ಎನ್‌, ಕೃಷ್ಣ ಪವಾರ್‌ ಮತ್ತು ಸಿ ಅಶೋಕ್‌ ಕುಮಾರ್‌ ಎಂಬವರು ನೆಲಮಂಗಲದ ವಿವಿಧೆಡೆ ಮುಖ್ಯಮಂತ್ರಿ ಭಾವಚಿತ್ರ ಇರುವ ಕ್ಯೂಆರ್‌ ಕೋಡ್‌ನ ಭಿತ್ತಿಪತ್ರ ಅಂಟಿಸಿದ್ದು, ಅದರಲ್ಲಿ ಪೇಸಿಎಂ ಶೇ.40ರಷ್ಟು (ಲಂಚ) ಇಲ್ಲಿ ಸ್ವೀಕರಿಸಲಾಗಿದೆ. ಶೇ. 40 ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಲು ಈ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಎಂದು ಉಲ್ಲೇಖಿಸಿರುವ ಭಿತ್ತಿಪತ್ರಗಳನ್ನು ಅಂಟಿಸಿ ಸಾರ್ವಜನಿಕ ಸ್ಥಳವನ್ನು ಅಂದಗೆಡಿಸಿ, ಹಾಳು ಮಾಡುತ್ತಿದ್ದರು ಎಂದು ಎಎಸ್‌ಐ ಕೆ ಆರ್‌ ನಾರಾಯಣ್‌ ರಾವ್‌ ನೀಡಿದ್ದ ದೂರಿನ ಮೇರೆಗೆ ಅವರ ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣೆ ಕಾಯಿದೆ ಸೆಕ್ಷನ್‌ 3(1) ಮತ್ತು ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಕಾಯಿದೆ ಸೆಕ್ಷನ್‌ 3 ಮತ್ತು ಐಪಿಸಿ ಸೆಕ್ಷನ್‌ 290ರ ಅಡಿ ಅರ್ಜಿದಾರರು ಸೇರಿದಂತೆ ಐವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಮೂವರಿಗೆ ನಿರೀಕ್ಷಣಾ ಜಾಮೀನು: ಮೂರನೇ ಆರೋಪಿ ವರುಣ್‌ ಕುಮಾರ್‌ ಎಲ್‌ ಎನ್‌, ನಾಲ್ಕನೇ ಆರೋಪಿ ಕೃಷ್ಣ ಪವಾರ್‌ ಮತ್ತು ಐದನೇ ಆರೋಪಿ ಸಿ ಅಶೋಕ್‌ ಕುಮಾರ್‌ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್‌ ಶ್ರೀಧರ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.

ಅರ್ಜಿದಾರರನ್ನು ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ, ವಕೀಲರಾದ ಸೂರ್ಯ ಮುಕುಂದರಾಜ್‌, ಬಿ ಸಂಜಯ್‌ ಯಾದವ್‌ ಪ್ರತಿನಿಧಿಸಿದ್ದರು. ರಾಜ್ಯ ಸರ್ಕಾರವನ್ನು ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್‌ ಎಸ್‌. ಜವಳಿ ಮತ್ತು ವಕೀಲ ಕೆ ಎಸ್‌ ಅಭಿಜಿತ್‌ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com