ಇನ್‌ಸ್ಟಾಗ್ರಾಂನಲ್ಲಿ ಸಹಪಾಠಿಗೆ ಸುಂದರಿ ಎಂದು ಸಂದೇಶ ಕಳುಹಿಸಿರುವುದು ಮಹಿಳೆ ಘನತೆಗೆ ಚ್ಯುತಿಯಲ್ಲ: ಎಫ್‌ಐಆರ್‌ ವಜಾ

ಖಾಸಗಿ ಸಂದೇಶವು "ಜನರಲ್ ಝಡ್ ಭಾಷೆ" ಪ್ರತಿಬಿಂಬಿಸುತ್ತದೆ & ಕ್ರಿಮಿನಲ್ ಪ್ರಕರಣ ಮುಂದುವರಿಸಲು ಅವಕಾಶ ನೀಡುವುದರಿಂದ ವಿದ್ಯಾರ್ಥಿಯ ವೃತ್ತಿಜೀವನಕ್ಕೆ ಅಪಾಯವಾಗುತ್ತದೆ ಮತ್ತು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
Instagram and Karnataka High Court
Instagram and Karnataka High Court
Published on

ತನ್ನ ಸಹಪಾಠಿಗೆ ಇನ್‌ಸ್ಟಾಗ್ರಾಂನಲ್ಲಿ ಚೆಲುವೆ (ಪ್ರೆಟಿ) ಎಂದು ನೇರ ಸಂದೇಶ ಕಳುಹಿಸಿದ ಆರೋಪದ ಮೇಲೆ ಲೈಂಗಿಕ ವೀಕ್ಷಣಾ ಪ್ರವೃತ್ತಿ, ಹಿಂಬಾಲಿಕೆ ಮತ್ತು ಮಹಿಳೆಯ ಘನತೆಗೆ ಚ್ಯುತಿ ತಂದ ಆರೋಪದ ಮೇಲೆ ಕಾಲೇಜು ವಿದ್ಯಾರ್ಥಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಇಬ್ಬರು ಸಹಪಾಠಿಗಳ ನಡುವಿನ ಖಾಸಗಿ ಸಂದೇಶ ರವಾನೆಯು ಆರೋಪಿತ ಅಪರಾಧವಾಗದು. ಈ ಪ್ರಕರಣದಲ್ಲಿ ತನಿಖೆ ಮುಂದುವರಿಸಲು ಅನುಮತಿಸುವುದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಹೇಳಿದೆ.

“ಇಬ್ಬರು ಸಹಪಾಠಿಗಳು ಖಾಸಗಿಯಾಗಿ ಚಾಟ್‌ ನಡೆಸಿದ್ದು, ಅವರು ಸಂಭಾಷಣೆಯಲ್ಲಿ ಬಳಸಿರುವ ಭಾಷೆಯು ಈ ಜಮಾನದ ವಿದ್ಯಾರ್ಥಿಗಳು ಬಳಸುವ ಭಾಷೆಯಾಗಿದೆ. ಅದು ಅಪರಾಧವಾಗದು” ಎಂದು ನ್ಯಾಯಾಲಯ ಹೇಳಿದೆ.

ಜೆನ್‌ ಝಡ್‌ ಲಿಂಗೊ ಎಂದು ಕರೆಯಲಾಗುವ ಭಾಷೆಯಲ್ಲಿ 21 ವರ್ಷದ ಯುವಕ ತನ್ನ 20 ವರ್ಷದ ಸ್ನೇಹಿತೆಯನ್ನು ಸುಂದರಿ ಎಂದು ಹೇಳಿದ್ದರು. ಈ ವಿಚಾರವನ್ನು ಹಿರಿಯ ಐಪಿಎಸ್‌ ಅಧಿಕಾರಿಯಾದ ತಂದೆಗೆ ಆಕೆ ತಿಳಿಸಿದ್ದಳು. ಆನಂತರ ಯುವಕನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಅರ್ಜಿದಾರನ ಪರ ವಕೀಲೆ ಬಿ ವಿ ನಿಧಿಶ್ರೀ ಅವರು “ಅರ್ಜಿದಾರನು ಕ್ರಿಕೆಟಿಗನಾಗಿದ್ದು, ಕ್ರಿಮಿನಲ್‌ ಪ್ರಕರಣದಿಂದಾಗಿ ವೃತ್ತಿ ಬದುಕಿಗೆ ಹಾನಿಯಾಗಿದೆ. ಪ್ರಕ್ರಿಯೆ ಪಾಲಿಸದೇ ಮೊಬೈಲ್‌, ಲ್ಯಾಪ್‌ಟಾಪ್‌ ಜಫ್ತಿ ಮಾಡಲಾಗಿದೆ” ಎಂದರು.

“ಸುಂದರಿ ಎಂದು ಅರ್ಜಿದಾರ ಕಮೆಂಟ್‌ ಮಾಡಿದ್ದು, ಅದಕ್ಕೆ ಧನ್ಯವಾದ ಅರ್ಪಿಸಿದ್ದಾಳೆ. ಆನಂತರ ಆತ ಮತ್ತೊಂದು ಸಂದೇಶ ಕಳುಹಿಸಿದ್ದನು. ಅನೌಪಚಾರಿಕ ಚರ್ಚೆಯನ್ನು ಬಳಕೆ ಮಾಡಿ ದೂರುದಾರೆಯ ತಂದೆ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಿದ್ದಾರೆ” ಎಂದರು.

ಸರ್ಕಾರದ ಪರ ವಕೀಲೆಯು ದೂರುದಾರೆ ಮತ್ತು ಅರ್ಜಿದಾರ ಸಹಪಾಠಿಗಳು ಎಂದ ಮಾತ್ರಕ್ಕೆ ಅರ್ಜಿದಾರನು ದೂರುದಾರೆಯ ನೋಟಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಲಾಗದು. ಪ್ರಕರಣದ ತನಿಖೆ ನಡೆಸಲು ಪೊಲೀಸರಿಗೆ ಅನುಮತಿಸಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com