ಅಲಾಹಾಬಾದ್ ಹೈಕೋರ್ಟ್ ಮಧ್ಯಪ್ರವೇಶ: ಸ್ವಂತ ಹಣದಲ್ಲಿ ಹೈನುಗಾರನ ಸಾಲ ತೀರಿಸಿದ ಅಧಿಕಾರಿಗಳು

ಮುಶೀರ್ ಅಹ್ಮದ್ ಎಂಬ ರೈತನ ರಕ್ಷಣೆಗೆ ಬಂದ ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ತಮ್ಮ ಸ್ವಂತ ಜೇಬಿನಿಂದ ಹಣ ವ್ಯಯಿಸಿ ಆತನ ಸಾಲ ತೀರಿಸಿದರು.
ಅಲಾಹಾಬಾದ್ ಹೈಕೋರ್ಟ್, ಲಖನೌ ಪೀಠ
ಅಲಾಹಾಬಾದ್ ಹೈಕೋರ್ಟ್, ಲಖನೌ ಪೀಠ

ಬ್ಯಾಂಕ್‌ಗೆ ₹2 ಲಕ್ಷ ಸಾಲ ಪಾವತಿಸಬೇಕಿದ್ದ ರೈತನೊಬ್ಬನಿಗೆ ಸಹಾನುಭೂತಿ ತೋರುವಂತೆ ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ [ಮುಶೀರ್ ಅಹ್ಮದ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಅಪರೂಪದ ಪ್ರಕರಣವೊಂದರಲ್ಲಿ ಮುಶೀರ್ ಅಹ್ಮದ್ ಎಂಬ ರೈತನ ರಕ್ಷಣೆಗೆ ಬಂದ ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ತಮ್ಮ ಸ್ವಂತ ಹಣ ವ್ಯಯಿಸಿ ಆತನ ಸಾಲ ತೀರಿಸಿದ್ದಾರೆ.

ಅಹ್ಮದ್ ಅವರು ಪಶು ಸಂಗೋಪನೆಯ ಉದ್ದೇಶಕ್ಕಾಗಿ 2008ರಲ್ಲಿ ₹ 80,000 ಸಾಲ ಪಡೆದಿದ್ದರು. ಅವರು ಅಸಲಿನ ಮೊತ್ತ ₹ 73,500 ಸಾಲ ಪಾವತಿಸಿದ್ದು ಕೇವಲ ₹ 6,500 ಬಾಕಿ ಉಳಿದಿತ್ತು. ಆದರೆ ಇದಕ್ಕೆ ಕಾಲಾನುಕಾಲಕ್ಕೆ ಬಡ್ಡಿ ಸೇರಿ ಪಾವತಿಸಬೇಕಾದ ಮೊತ್ತ ₹ 2,16,115ಕ್ಕೆ ಏರಿಕೆಯಾಗಿತ್ತು.

ತನಗೆ ಜೀವನ ನಡೆಸಲು ಅನ್ಯ ಮಾರ್ಗವಿಲ್ಲ ಆದ್ದರಿಂದ ಅಷ್ಟು ಮೊತ್ತದ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರಿಹಾರ ಒದಗಿಸಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದರು.

ಕಳೆದ ತಿಂಗಳು ವಾದ ಆಲಿಸಿದ್ದ ನ್ಯಾ. ಅಬ್ದುಲ್ ಮೊಯಿನ್ ಯಾವುದಾದರೂ ಸಾಲ ಪರಿಹಾರ ಯೋಜನೆಯಡಿ ಅಹ್ಮದ್‌ ಅವರಿಗೆ ಸಹಾಯ ದೊರಕಿಸಿಕೊಡಬಹುದೇ ಎಂದು ಸರ್ಕಾರಿ ವಕೀಲರನ್ನು ಕೇಳಿದ್ದರು.

ನ್ಯಾಯಮೂರ್ತಿ ಅಬ್ದುಲ್ ಮೊಯಿನ್
ನ್ಯಾಯಮೂರ್ತಿ ಅಬ್ದುಲ್ ಮೊಯಿನ್

ಸರ್ಕಾರ ಹೊರಡಿಸಿದ ಮೂರು ಯೋಜನೆಗಳಲ್ಲಿ, ಎರಡು ಅಹ್ಮದ್ ಅವರಿಗೆ ಅನ್ವಯಿಸುವುದಿಲ್ಲ, ಮೂರನೆಯದನ್ನು ಬ್ಯಾಂಕ್ ಅಳವಡಿಸಿಕೊಂಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಸಮಸ್ಯೆಯ ಗಂಭೀರತೆ ಅರಿತ ನ್ಯಾಯಾಲಯ ಸರ್ಕಾರ ರೈತನಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ನೋಡುವಂತೆ ಸಹಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿತು.

ಅಹ್ಮದ್ ಅವರ ವಾರ್ಷಿಕ ಆದಾಯ ₹52,000ಗಳಾಗಿದ್ದು ಅವರ ಜಮೀನನ್ನು ಬ್ಯಾಂಕಿನಲ್ಲಿ ಅಡ ಇಡಲಾಗಿದೆ. ಬಡ್ಡಿ ಸಹಿತ ಒಟ್ಟು ಮೊತ್ತ ವಸೂಲಿ ಮಾಡಲು ಹೊರಟರೆ ಮುಂದಿನ ಐದು ವರ್ಷಗಳವರೆಗೆ ಅವರು ಸಾಲ ತೀರಿಸುತ್ತಲೇ ಇರಬೇಕಾಗುತ್ತದೆ. ಜಮೀನನ್ನು ವಶಪಡಿಸಿಕೊಂಡರೆ ಅವರಿಗೆ ಇನ್ನಾವುದೇ ಆದಾಯದ ಮೂಲ ಇಲ್ಲದಂತಾಗುತ್ತದೆ ಎನ್ನುವುದನ್ನು ದಾಖಲಿಸಿತು.

ಆದರೆ ಸಮಸ್ಯೆಯನ್ನು ಪರಿಹರಿಸಲು ಮುಂದಾದ ಸಹಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಅಹ್ಮದ್ ಅವರಿಗೆ ₹1,16,150 ವೈಯಕ್ತಿಕ ಚೆಕ್ ನೀಡಿದರು. ಅಲ್ಲದೆ, ಇಲಾಖೆಯ ಇತರ ನೌಕರರು ಇನ್ನುಳಿದ ₹1 ಲಕ್ಷ ಚೆಕ್‌ ನೀಡಿದರು.

ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಇರಿಸಿದ ಈ ಹೆಜ್ಜೆ ನ್ಯಾಯಾಲಯದ ಪ್ರಶಂಸೆಗೂ ಪಾತ್ರವಾಗಿದೆ. ಅದನ್ನು ನ್ಯಾ. ಮೊಯಿನ್ ಮಾರ್ಚ್ 19ರ ಆದೇಶದಲ್ಲಿ ದಾಖಲಿಸಿದ್ದಾರೆ.

ಆದರೆ ಬ್ಯಾಂಕ್‌ ಖಾತೆಗೆ ಇನ್ನೂ ಹಣ ಜಮೆಯಾಗಿಲ್ಲ ಎಂದು ಬ್ಯಾಂಕ್‌ ಪರ ವಕೀಲರು ಹೇಳಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಏಪ್ರಿಲ್‌ 2ಕ್ಕೆ ಮುಂದೂಡಲಾಗಿದೆ. ಹಣ ಜಮೆಯಾದ ಕುರಿತು ತನಗೆ ಮಾಹಿತಿ ನೀಡುವಂತೆ ಬ್ಯಾಂಕ್‌ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Mushir Ahmad vs. State of UP.pdf
Preview

Related Stories

No stories found.
Kannada Bar & Bench
kannada.barandbench.com