

ಪರೀಕ್ಷಾರ್ಥ ಡ್ರೋನ್ ಒಂದು ಬ್ಯಾಟರಿ ಸಮಸ್ಯೆಯಿಂದ ನಿಗದಿತ ಸ್ಥಳ ಮೀರಿ ಪಕ್ಕದ ಸ್ಥಳದಲ್ಲಿ ಬಿದ್ದಿರುವುದರ ಆಧಾರದಲ್ಲಿ ನ್ಯೂ ಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್ ಸಂಸ್ಥೆ ವಿರುದ್ಧ ದಾಖಲಿಸಿದ್ದ ಸ್ವಯಂಪ್ರೇರಿತ ಅತಿಕ್ರಮ ಪ್ರವೇಶ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ನ್ಯೂ ಸ್ಪೇಸ್ ರಿಸರ್ಚ್ ಮತ್ತು ಟೆಕ್ನಾಲಜೀಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
“ನಿರ್ಜೀವ ವಸ್ತು ಪ್ರಕರಣದ ಕೇಂದ್ರ ಬಿಂದುವಾಗಿದೆ. ನಿರ್ದಿಷ್ಟ ಪ್ರದೇಶದಲ್ಲಿ ಡ್ರೋನ್ ಅತಿಕ್ರಮಣ ಪ್ರವೇಶ ಮಾಡಿರುವ ಇದೊಂದು ವಿಭಿನ್ನ ಪ್ರಕಣವಾಗಿದ್ದು, ಮಹತ್ವದ ಕಾನೂನು ಪ್ರಶ್ನೆಯನ್ನು ಎತ್ತಿದೆ” ಎಂದು ನ್ಯಾಯಾಲಯ ಹೇಳಿದೆ.
ನ್ಯೂ ಸ್ಪೇಸ್ ಪ್ರತಿನಿಧಿಸಿದ್ದ ವಕೀಲ ಅಂಗದ್ ಕಾಮತ್ ಅವರು “ನಾಗರಿಕ ವಿಮಾನಯಾನ ನಿರ್ದೇಶನಾಲಯವು ಸಂಶೋಧನೆ ಮತ್ತು ಅಭಿವೃದ್ಧಿಯ ಚಟುವಟಿಕೆಗಳಿಗೆ ಪರವಾನಗಿ ನೀಡಿದೆ. ದೊಡ್ಡಬಳ್ಳಾಪುರದ ಸಮೀಪ 19 ಎಕರೆ ಪ್ರದೇಶವನ್ನು ಭೋಗ್ಯಕ್ಕೆ ಪಡೆದು, ಕಳೆದ ನಾಲ್ಕೈದು ವರ್ಷಗಳಿಂದ ಅದನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಈ ಜಾಗವು ಡ್ರೋನ್ ನಿಯಮ 2021ರ ಅಡಿ ಹಸಿರು ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಜನವರಿ 29ರಂದು ದೈನಂದಿನ ಪರೀಕ್ಷೆಯಂತೆ ಅಂದೂ ಡ್ರೋನ್ ಪರೀಕ್ಷಾರ್ಥ ಚಟುವಟಿಕೆ ನಡೆಸುವಾಗ ಆರು ಕೆಜಿಯ ಲಘುಭಾರದ ಥರ್ಮಾಕೋಲ್ ಸಂಶೋಧನಾ ಡ್ರೋನ್ ಬ್ಯಾಟರಿ ವೈಫಲ್ಯದಿಂದ ನಿಗದಿತ ಪ್ರದೇಶದಿಂದ ಹೊರಗೆ ನೆಲಕ್ಕಪ್ಪಳಿಸಿತ್ತು" ಎಂದು ವಿವರಿಸಿದರು.
ಮುಂದುವರೆದು, "ಈ ಸಂಬಂಧ ಭೂ ಮಾಲೀಕರಾಗಲಿ, ಸಾರ್ವಜನಿಕರಾಗಲಿ ದೂರು ನೀಡಿರಲಿಲ್ಲ. ಇದರಿಂದ ಯಾವುದೇ ಜೀವಕ್ಕೆ ಹಾನಿಯಾಗಿರಲಿಲ್ಲ. ಆದಾಗ್ಯೂ ಪೊಲೀಸರು ಸ್ವಯಂಪ್ರೇರಿತವಾಗಿ ಅತಿಕ್ರಮಣ ಪ್ರಕರಣ ದಾಖಲಿಸಿದ್ದಾರೆ. ಖಾಸಗಿ ಜಾಗಕ್ಕೆ ಯಾರೋ ಹೋಗಿ ಡ್ರೋನ್ ಇಟ್ಟು ಬಂದಿದ್ದಾರೆ ಎಂಬುದು ಪೊಲೀಸರ ದೂರಿನ ಒಕ್ಕಣೆಯಾಗಿದೆ. ಬೇರೆಯಾರಾದರೂ ಅಲ್ಲಿಗೆ ತೆರಳಿ ಡ್ರೋನ್ ಇಟ್ಟು ಬಂದಿದ್ದರೆ ಅದು ನಿಜಕ್ಕೂ ಗಂಭೀರವಾದ ಭದ್ರತಾ ವಿಚಾರವಾಗಿರುತ್ತಿತ್ತು. ಆದರೆ, ಇಲ್ಲಿ ಅದಾಗಿಲ್ಲ” ಎಂದರು.
“ನಿರ್ದಿಷ್ಟ ಪ್ರದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಭಾಗವಾಗಿ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿರುವಾಗ ಡಿಜಿಸಿಎ ಹೊರತುಪಡಿಸಿ ಬೇರಾರಿಗೂ ಅದನ್ನು ಪ್ರಶ್ನಿಸುವ ವ್ಯಾಪ್ತಿಯಿಲ್ಲ. ಆದರೆ, ಕಾನೂನು ಪದವೀಧರರಾಗಿರುವ ಪೊಲೀಸ್ ಅಧಿಕಾರಿಯು ನ್ಯೂ ಸ್ಪೇಸ್ ಸಂಸ್ಥೆಯ ಅಧಿಕಾರಿಗಳನ್ನು ಆರು ತಾಸು ಕಾಯುವಂತೆ ಮಾಡಿದ್ದು, ಕಂಪನಿಯ ಬಗ್ಗೆ ಅನಗತ್ಯವಾಗಿ ವಿಚಾರಿಸಿದ್ದಾರೆ. ಅಲ್ಲದೇ, ಎಫ್‌ಐಆರ್ ಪ್ರತಿ ನೀಡಲು ನಿರಾಕರಿಸಿದ್ದಾರೆ” ಎಂದರು.
ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಡ್ರೋನ್ ಬಿದ್ದಿರುವ ಸ್ಥಳವು ಮುಸ್ಲಿಮ್ ಸಮುದಾಯದವರು ನೆಲೆಸಿರುವ ಜಾಗವಾಗಿದೆ. ಈ ವೇಳೆ ಹಿಂದೂ ಸಂಸ್ಥೆಯು ಸಮಾವೇಶ ನಡೆಸಿತ್ತು. ಇದರಿಂದ ಪೊಲೀಸರು ಕಾರ್ಯಪ್ರವೃತ್ತರಾಗಿರಬಹುದು” ಎಂದರು.
ಇದಕ್ಕೆ ಕಾಮತ್ ಅವರು “ಎಫ್‌ಐಆರ್‌ನಲ್ಲಿ ಈ ಯಾವುದೇ ಅಂಶಗಳು ಇಲ್ಲ. ಅಲ್ಲದೇ ಸರ್ಕಾರಿ ಅಭಿಯೋಜಕರ ಕಚೇರಿ ಮಧ್ಯಪ್ರವೇಶಿಸಿದ ಮೇಲೆ ಪೊಲೀಸರು ಎಫ್‌ಐಆರ್ ಪ್ರತಿ ನೀಡಿದ್ದಾರೆ” ಎಂದರು.
ಇದನ್ನು ಆಲಿಸಿದ ಪೀಠವು “ಅರ್ಜಿಯಲ್ಲಿನ ಕೋರಿಕೆಗೆ ಪೂರಕವಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಅಫಿಡವಿಟ್ ಸಲ್ಲಿಸಬೇಕು. ಅಫಿಡವಿಟ್ ಸಲ್ಲಿಸಿದೇ ಇದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು” ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ಗೆ ನ್ಯಾಯಾಲಯ ಎಚ್ಚರಿಸಿದೆ.
ಅಲ್ಲದೇ, ಪ್ರಕರಣದ ತನಿಖೆಗೆ ತಡೆ ನೀಡಿದ್ದು, ವಿಚಾರಣೆಯನ್ನು ಫೆಬ್ರವರಿ 13ಕ್ಕೆ ಮುಂದೂಡಿದೆ.