'ಬಂಗಾಳಿ ಮಾತನಾಡಿದ ಮಾತ್ರಕ್ಕೆ ಬಾಂಗ್ಲಾದೇಶಿ ಎಂದು ಸರ್ಕಾರ ಭಾವಿಸಬಹುದೇ?' ಸುಪ್ರೀಂ ಕೋರ್ಟ್ ಪ್ರಶ್ನೆ
ಬಂಗಾಳಿ ಮಾತನಾಡುವ ವ್ಯಕ್ತಿಗಳನ್ನು ದಾಖಲೆರಹಿತ ಬಾಂಗ್ಲಾದೇಶಿ ವಲಸಿಗರು ಎಂದು ಭಾವಿಸುವ ಧೋರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದ್ದು ಭಾರತದಲ್ಲಿ ಯಾರನ್ನೇ ಆಗಲಿ ವಿದೇಶಿಯರೆಂದು ಪರಿಗಣಿಸಲು ಭಾಷೆಯಷ್ಟೇ ಆಧಾರವಾಗದು ಎಂದು ಒತ್ತಿ ಹೇಳಿದೆ [ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಬಂಗಾಳಿ ಮಾತನಾಡುವ ಕಾರ್ಮಿಕರನ್ನು ಬಂಧಿಸಿ ಅಕ್ರಮವಾಗಿ ಗಡೀಪಾರು ಮಾಡಲಾಗಿದೆ ಎಂದು ದೂರಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠ ಆಲಿಸಿತು.
ಸೂಕ್ತ ತನಿಖೆ ನಡೆಸದೆ ಗರ್ಭಿಣಿಯೊಬ್ಬರನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿದೆ ಎಂದು ವರದಿಯಾಗಿದ್ದನ್ನು ಗಮನಿಸಿದ ನ್ಯಾಯಮೂರ್ತಿ ಬಾಗ್ಚಿ, ಒಬ್ಬ ವ್ಯಕ್ತಿಯು ಮಾತನಾಡುವ ಭಾಷೆಯ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸಬಹುದೇ ಎಂದು ಪ್ರಶ್ನಿಸಿದರು.
"ವಿದೇಶಿ ಎಂಬ ಊಹೆಗೆ ಆಧಾರವಾಗಿ ಭಾಷೆಯನ್ನು ಬಳಸುವುದು ಪಕ್ಷಪಾತ ಧೋರಣೆ ಎನ್ನುವ ಬಗ್ಗೆ ನೀವು ಸ್ಪಷ್ಟಪಡಿಸಬೇಕೆಂದು ಬಯಸುತ್ತೇವೆ" ಎಂದು ನ್ಯಾ. ಬಾಗ್ಚಿ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ಹೇಳಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಗಡಿ ಅಧಿಕಾರಿಗಳು ಯಾವುದೇ ಕಾನೂನುಬದ್ಧ ಪ್ರಕ್ರಿಯೆ ನಡೆಸದೆ ಜನರನ್ನು ಗಡೀಪಾರು ಮಾಡುತ್ತಿದ್ದಾರೆ ಎಂದು ವಾದಿಸಿದರು. ಗರ್ಭಿಣಿಯ ಗಡಿಪಾರು ವಿಚಾರವನ್ನೂ ಅವರು ಇದೇ ವೇಳೆ ಪ್ರಸ್ತಾಪಿಸಿದರು.
ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ ಎಂಬ ಕಾರಣಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಚಾರಣೆ ಮುಂದೂಡುವಂತಿಲ್ಲ. ಕಲ್ಕತ್ತಾ ಹೈಕೋರ್ಟ್ ಕೂಡಲೇ ತ್ವರಿತವಾಗಿ ಈ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ನ್ಯಾ. ಸೂರ್ಯಕಾಂತ್ ಈ ಸಂದರ್ಭದಲ್ಲಿ ತಿಳಿಸಿದರು.
ಯಾವುದೇ ವ್ಯಕ್ತಿಯ ಪೌರತ್ವದ ಬಗ್ಗೆ ತೀರ್ಮಾನ ಕೈಗೊಂಡು ವಿದೇಶಿಯರ ನ್ಯಾಯಮಂಡಳಿಯು ಆದೇಶಿಸುವುದಕ್ಕೂ ಮುನ್ನ ಅವರನ್ನು ಗಡೀಪಾರು ಮಾಡಲು ಅವಕಾಶ ಮಾಡಿಕೊಡಬಾರದು ಎಂದ ಭೂಷಣ್ ಗಡಿ ಭದ್ರತಾ ಪಡೆಯ ಸಿಬ್ಬಂದಿಯೇ ಗಡಿಪಾರು ಮಾಡುತ್ತಿರುವುದಕ್ಕೆ ಆಕ್ಷೇಪಿಸಿದರು. "ಕೆಲವು ಬಾರಿ ಬಿಎಸ್‌ಎಫ್ ಸಿಬ್ಬಂದಿ ನೀವು ಬಾಂಗ್ಲಾ ಕಡೆಗೆ ಸಾಗಿ ಇಲ್ಲವೇ ನಿಮ್ಮ ಮೇಲೆ ಗುಂಡು ಹಾರಿಸುತ್ತೇವೆ ಎಂದು ಹೇಳುತ್ತಿದ್ದಾರೆ" ಎಂಬುದಾಗಿ ತಿಳಿಸಿದರು.
ಆಗ ನ್ಯಾಯಮೂರ್ತಿ ಬಾಗ್ಚಿ ಅವರು ಭಾರತದ ಭೂಪ್ರದೇಶದೊಳಗೆ ಕಂಡುಬರುವ ಯಾವುದೇ ವ್ಯಕ್ತಿಯನ್ನು ಕಾನೂನಿನ ಪ್ರಕಾರವೇ ನಡೆಸಿಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು. ಆಗ ಭೂಷಣ್ ಅವರು ʼಗಡಿಪಾರು ಮಾಡುವ ಮುನ್ನ ರಾಜ್ಯ ಸರ್ಕಾರಗಳು ತನಿಖೆ ನಡೆಸಿರಬೇಕು ಎಂಬ ಕೇಂದ್ರ ಗೃಹಸಚಿವಾಲಯವೇ ಹೊರಡಿಸಿದ್ದ ಮಾರ್ಗಸೂಚಿಗಳನ್ನು ನ್ಯಾಯಾಲಯದ ಮುಂದಿಟ್ಟರು.
ವಾದ ಆಲಿಸಿದ ನ್ಯಾಯಾಲಯ ಕಡೆಗೆ ಕೇಂದ್ರ ಸರ್ಕಾರ ಒಂದು ವಾರದೊಳಗೆ ಉತ್ತರ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಜೊತೆಗೆ (ಗರ್ಭಿಣಿ) ಸೋನಾಲಿ ಬೀಬಿಯ ಪೌರತ್ವ ಸ್ಥಿತಿಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಬಾಕಿ ಇರುವ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಪ್ರಸ್ತುತ ವಿಚಾರಣೆಗೆ ಪರಿಗಣಿಸದೆ ಸ್ವತಂತ್ರವಾಗಿ ಆಲಿಸಬೇಕು ಎಂದು ಸ್ಪಷ್ಟಪಡಿಸಿತು.