'ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಡಿಕೆ ಜೊತೆ ನ್ಯಾಯಮೂರ್ತಿಗಳು ವೇದಿಕೆ ಹಂಚಿಕೊಳ್ಳಬಹುದೇ?' ಸುರೇಶ್‌ ಕುಮಾರ್‌

ಕೆಎಸ್‌ಬಿಸಿ ಆಯೋಜಿಸಿರುವ ರಾಜ್ಯಮಟ್ಟದ ವಕೀಲರ ಸಮಾವೇಶದ ವೇದಿಕೆಯಲ್ಲಿ ನ್ಯಾಯಮೂರ್ತಿಗಳೊಂದಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವೇದಿಕೆ ಹಂಚಿಕೊಳ್ಳುವ ವಿಷಯ ಶಿಷ್ಟಾಚಾರ ಹಾಗೂ ರಾಜಕಾರಣದ ಚರ್ಚೆಗೆ ಕಾರಣವಾಗಿದೆ.
Farmer Law Minister S Suresh Kumar
Farmer Law Minister S Suresh KumarFacebook
Published on

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ವತಿಯಿಂದ ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶ ಆಗಸ್ಟ್ 12ರಂದು ಆಯೋಜನೆಯಾಗಿರುವ ಬೆನ್ನಿಗೇ ಕಾರ್ಯಕ್ರಮದ ವೇದಿಕೆಯಲ್ಲಿ ನ್ಯಾಯಮೂರ್ತಿಗಳೊಂದಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವೇದಿಕೆ ಹಂಚಿಕೊಳ್ಳುವ ವಿಷಯ ಶಿಷ್ಟಾಚಾರ ಹಾಗೂ ರಾಜಕಾರಣದ ಚರ್ಚೆಗೆ ಕಾರಣವಾಗಿದೆ.

“ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳಿದ್ದು, ಇಂಥವರ ಜೊತೆ ಮುಂದಿನ ವಾರ ಮೈಸೂರಿನಲ್ಲಿ ನಡೆಯಲಿರುವ ವಕೀಲರ ಸಮಾವೇಶದಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಹೈಕೋರ್ಟ್‌ನ ನ್ಯಾಯಮೂರ್ತಿಗಳು ವೇದಿಕೆ ಹಂಚಿಕೊಳ್ಳಬಹುದೇ? ಇದು ನ್ಯಾಯಸಮ್ಮತವೇ ಮತ್ತು ಶಿಷ್ಟಾಚಾರ ಎಲ್ಲರಿಗೂ ಅನ್ವಯವಾಗಬೇಕಲ್ಲವೇ” ಎಂದು ಮಾಜಿ ಕಾನೂನು ಸಚಿವ ಹಾಗೂ ಶಾಸಕ ಎಸ್‌ ಸುರೇಶ್‌ ಕುಮಾರ್‌ ಅವರು ಪ್ರಶ್ನೆ ಎತ್ತಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಶನಿವಾರ ಪೋಸ್ಟ್‌ ಮಾಡಿರುವ ಅವರು “ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ವತಿಯಿಂದ ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶ ಆಗಸ್ಟ್ 12ರಂದು ಮೈಸೂರಿನಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಸೇರಿದಂತೆ ಹಲವು ನ್ಯಾಯಮೂರ್ತಿಗಳು, ಸಚಿವರು ಸೇರಿದಂತೆ ಹಲವರು ಭಾಗವಹಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಸಹ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ ಎಂದು ಓದಿ ಆಶ್ಚರ್ಯವಾಯಿತು” ಎಂದು ಬಿಜೆಪಿಯ ಮುಖಂಡರಾದ ಸುರೇಶ್‌ ಕುಮಾರ್ ಹೇಳಿದ್ದಾರೆ.

“ನ್ಯಾಯಾಂಗದ ಶಿಷ್ಟಾಚಾರದ ಪ್ರಕಾರ ಡಿ ಕೆ ಶಿವಕುಮಾರ್ ಅವರು ಈ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಬಹುದೇ? ನಾನು ಹಿಂದೆ ಕಾನೂನು ಸಚಿವನಾಗಿದ್ದಾಗ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಅವರೊಂದಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನ್ಯಾಯಾಲಯದ ಹೊಸ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆಗ ಮುಖ್ಯ ನ್ಯಾಯಮೂರ್ತಿಗಳೊಡನೆ ವೇದಿಕೆಯಲ್ಲಿ ಕುಳಿತುಕೊಳ್ಳುವ ಅತಿಥಿಗಳ ವಿರುದ್ಧ (ಕಾನೂನು ಸಚಿವನಾಗಿದ್ದ ನನ್ನದೂ ಸೇರಿದಂತೆ) ಯಾವುದಾದರೂ ಕ್ರಿಮಿನಲ್ ಕೇಸ್ ಇದೆಯೇ ಎಂದು ಪ್ರಶ್ನಿಸಲಾಗಿದ್ದ ಘಟನೆ ನೆನಪಿಗೆ ಬರುತ್ತಿದೆ. ನನ್ನ ಮೇಲೆ ಯಾವುದೇ ಪ್ರಕರಣ ಇರಲಿಲ್ಲ ಎಂಬುದು ಬೇರೆ ವಿಚಾರ” ಎಂದು ಅವರು ಹೇಳಿದ್ದಾರೆ.

ಮುಂದುವರಿದು, “ಡಿ ಕೆ ಶಿವಕುಮಾರ್ ಅವರು  ಎದುರಿಸುತ್ತಿರುವ ಕೆಲವು ಪ್ರಕರಣಗಳು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಇರುವುದು ಎಲ್ಲರಿಗೂ ತಿಳಿದ ವಿಷಯ. ಅಂತಹ ವ್ಯಕ್ತಿ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸರ್ವೋಚ್ಚ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ಜೊತೆ ಭಾಗವಹಿಸುವುದು ಸೂಕ್ತವೇ? ಕಾರ್ಯಕ್ರಮ ಆಯೋಜಿಸಿರುವ ವಕೀಲರ ಪರಿಷತ್ ಈ ಕುರಿತು ಸ್ಪಷ್ಟೀಕರಣ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ಈ ಕುರಿತ ಸ್ಪಷ್ಟೀಕರಣ ಕೋರಿ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಚ್‌ ಎಲ್‌ ವಿಶಾಲ್‌ ರಘು ಅವರನ್ನು ಸಂಪರ್ಕಿಸಲು ಬಾರ್‌ ಅಂಡ್‌ ಬೆಂಚ್‌ ಪ್ರಯತ್ನಿಸಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. ರಾಜ್ಯ ವಕೀಲರ ಪರಿಷತ್‌ನಿಂದ ಈ ಕುರಿತು ಪ್ರತಿಕ್ರಿಯೆ ದೊರೆತರೆ ಓದುಗರ ಗಮನಕ್ಕೆ ತರಲಾಗುವುದು.

Kannada Bar & Bench
kannada.barandbench.com