ನಾಂದೇಡ್‌ ಗುರುದ್ವಾರ ಮೆರವಣಿಗೆಯನ್ನು ಬೆಳಿಗ್ಗೆ 5 ಗಂಟೆಗೆ ನಡೆಸಬಹುದೇ? ಮಹಾರಾಷ್ಟ್ರ ಸರ್ಕಾರ ಪ್ರಶ್ನಿಸಿದ ಸುಪ್ರೀಂ

ಗುರುದ್ವಾರ ನಿರ್ವಹಣಾ ಸಮಿತಿಗೆ ಸಂಬಂಧಿತ ಇಲಾಖಾ ಕಾರ್ಯದರ್ಶಿಗೆ ಮನವಿ ನೀಡುವಂತೆ ಸೂಚಿಸಲಾಗಿದ್ದು, ಇದರಿಂದ ಸಮಾಧಾನವಾಗದಿದ್ದರೆ ಬಾಂಬೆ ಹೈಕೋರ್ಟ್‌ ಸಂಪರ್ಕಿಸುವಂತೆ ಸಲಹೆ ನೀಡಿದ ಸುಪ್ರೀಂ ಕೋರ್ಟ್.
Gurudwara Nanded Sahib
Gurudwara Nanded Sahib

ನಾಂದೇಡ್‌ ಗುರುದ್ವಾರದಲ್ಲಿ ದಸರಾ ಹಬ್ಬ ಆಚರಣೆ ಮತ್ತು ಬೆಳಗಿನ ಜಾವ 5 ಗಂಟೆಗೆ ನಿರ್ದಿಷ್ಟ ಜನರನ್ನು ಒಳಗೊಂಡು ಗುರು ಗ್ರಂಥ ಸಾಹೇಬ್‌ ಮೆರವಣಿಗೆ ನಡೆಸಬಹುದೇ ಎಂದು ಮಹಾರಾಷ್ಟ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿದೆ.

ಸದ್ಯದ ಕೋವಿಡ್‌ ಪರಿಸ್ಥಿತಿ ಅವಲೋಕನ ನಡೆಸಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ವಿಪತ್ತು ನಿರ್ವಹಣಾ ಸಂಸ್ಥೆಯ ಕಾರ್ಯದರ್ಶಿ ಅವರನ್ನು ಸಂಪರ್ಕಿಸುವಂತೆ ಗುರುದ್ವಾರ ಸಂಸ್ಥೆಗೆ ನ್ಯಾಯಾಲಯ ನಿರ್ದೇಶಿಸಿದೆ. ಮನವಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದ್ದು, ಇದರಿಂದ ಸಮಾಧಾನವಾಗದಿದ್ದರೆ ಬಾಂಬೆ ಹೈಕೋರ್ಟ್‌ ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.

ಗುರುದ್ವಾರವು ಶತಮಾನಗಳಿಂದ ಪಾಲಿಸಿಕೊಂಡು ಬಂದಿರುವ ದಸರಾ, ತಖ್ತ್‌ ಇಸ್ನಾನ್‌, ದೀಪಮಾಲಾ ಮತ್ತು ಗುರ್ತಾ ಗಡ್ಡಿ ನಡೆಸಲು ಅನುಮತಿ ನೀಡುವಂತೆ ನಾಂದೇಡ್‌ ಸಿಖ್‌ ಗುರುದ್ವಾರ ಸಚ್ಕಂದ್‌ ಶ್ರೀ ಹಜುರ್‌ ಅಬ್ಚಲ್‌ನಗರ್‌ ಸಾಹಿಬ್‌ ಮಂಡಳಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ್‌ ರಾವ್‌ ಮತ್ತು ಹೇಮಂತ್‌ ಗುಪ್ತಾ ಅವರನ್ನೊಳಗೊಂಡ ರಜಾಕಾಲೀನ ಪೀಠವು ನಡೆಸಿತು.

ಕೋವಿಡ್‌ ಹಿನ್ನೆಲೆಯಲ್ಲಿ ಸಂಪ್ರದಾಯಬ್ಧವಾಗಿ ದಸರಾ ಮೆರವಣಿ ನಡೆಸುವುದು ಪ್ರಾಯೋಗಿಕವಾಗಿ ಉತ್ತಮ ನಿರ್ಧಾರವಲ್ಲ ಎಂದು ನಾಂದೇಡ್‌ ಗುರುದ್ವಾರಕ್ಕೆ ಅನುಮತಿ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ರಾಜ್ಯ ಸರ್ಕಾರ ವಿವರಿಸಿದೆ. 50 ಮಂದಿ ವಿವಾಹದಲ್ಲಿ ಪಾಲ್ಗೊಳ್ಳಲು ರಾಜ್ಯ ಸರ್ಕಾರ ಅನುಮತಿಸಿದೆ. ಇದೇ ಮಾದರಿಯಲ್ಲಿ 40-50 ಮಂದಿ ಒಳಗೊಂಡು ಮೆರವಣಿಗೆ ನಡೆಸಲು ಅನುಮತಿಸಬೇಕು ಎಂದು ಅರ್ಜಿದಾರರ ಪರ ವಕೀಲ ಪ್ರವೀಣ್‌ ಚತುರ್ವೇದಿ ವಾದಿಸಿದರು. ಅಖಾಲ್ ತಖ್ತ್‌ ಒಯ್ಯುವ ಟ್ರಕ್‌ನಲ್ಲಿ ಕ್ಯಾಮೆರಾ ಅಳವಡಿಸಿರಲಿದ್ದು, ಮೆರವಣಿಗೆಯ ನೇರ ಪ್ರಸಾರ ಮಾಡಲಾಗುವುದು ಎಂದು ಚತುರ್ವೇದಿ ವಿವರಿಸಿದರು.

ಪುರಿಯಲ್ಲಿ ಜಗನ್ನಾಥ್‌ ಯಾತ್ರೆ ನಡೆಸಿದ್ದಾಗ ರಾಜ್ಯ ಸರ್ಕಾರ ಕರ್ಫ್ಯೂ ಜಾರಿ ಮಾಡಿದ್ದ ರೀತಿಯಲ್ಲಿ ಮಾಡಲಾಗದೇ ಎಂದು ಪೀಠ ಪ್ರಶ್ನಿಸಿತ್ತು. “ಪುರಿಯಲ್ಲಿ ಹಲವು ನಿರ್ಬಂಧಗಳಿದ್ದರೂ ಹಲವು ಜನರು ಭಾಗವಹಿಸಿದ್ದರು. ಈಗ ಮೆರವಣಿಗೆ ನಡೆಸಲು ಅನುಮತಿಯಿಲ್ಲ. ನೀವು 40-50 ಮಂದಿ ಮಂದಿಯೇ ಮೆರವಣಿಯಲ್ಲಿ ಭಾಗವಹಿಸಿದರೂ ರಸ್ತೆಯಲ್ಲಿ ಓಡಾಡುವವರನ್ನು ಏನು ಮಾಡುವುದು? ಜನರು ಮೆರವಣಿಗೆಯಲ್ಲಿ ಭಾಗವಹಿಸಿದರೆ ಏನು ಮಾಡುವುದು?” ಎಂದು ಸರ್ಕಾರ ಮರು ಪ್ರಶ್ನೆ ಹಾಕಿದೆ.
“ಮೆರವಣಿಗೆ 1.5 ಕಿ.ಮೀ ಸಾಗಲಿದ್ದು, ಬೆಳಿಗ್ಗೆ 7-9 ಗಂಟೆಯ ಅವಧಿಯಲ್ಲಿ ನಡೆಸಲು ಪರಿಗಣಿಸುವುದರಿಂದ ಮೆರವಣಿಗೆಯಲ್ಲಿ ಭಾಗವಹಿಸುವವರು ಮಾತ್ರ ಇರುತ್ತಾರೆ. ದಾರಿಹೋಕರು ಭಾಗವಹಿಸುವುದಿಲ್ಲ” ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಅದಾಗ್ಯೂ, ಒಂದು ಹಬ್ಬಕ್ಕೆ ಅನುಮತಿಸಿ ಉಳಿದವಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರುವುದು ಹೇಗೆ ಎಂದು ಪೀಠ ಪ್ರಶ್ನಿಸಿತು.

“ಹಲವು ಹಬ್ಬಗಳಿಗೆ ಮಹಾರಾಷ್ಟ್ರ ಸರ್ಕಾರವು ಅನುಮತಿ ನಿರಾಕರಿಸಿದ್ದು, ಇವುಗಳಲ್ಲಿ ಮೆರವಣಿಗೆಯೂ ಸೇರಿವೆ. ಗಣೇಶ ಚತುರ್ಥಿ ಮತ್ತಿತರವುಗಳನ್ನೇ ನಿಷೇಧಿಸಿರುವಾಗ ಈ ಹಬ್ಬ ನಡೆಸಲು ರಾಜ್ಯ ಸರ್ಕಾರ ಹೇಗೆ ಅನುಮತಿಸಲಾಗುತ್ತದೆ… ಇತರರು ಅನುಮತಿ ಕೋರಲಾರಂಭಿಸುತ್ತಾರೆ. ಒಂದಕ್ಕೆ ಅನುಮತಿಸುವ ಮೂಲಕ ಮತ್ತೊಂದಕ್ಕೆ ಅವಕಾಶ ಮಾಡಿಕೊಡುವಿರೇ?”
ನ್ಯಾಯಮೂರ್ತಿ ಎಲ್‌ ನಾಗೇಶ್ವರ ರಾವ್‌

ಅಮರನಾಥ್‌ ಯಾತ್ರೆಗೆ ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲೇಖಿಸಿದ ಮಹಾರಾಷ್ಟ್ರ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆ ವಿಚಾರವು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿದ್ದು ಎಂದು ಹೇಳಿದೆ.

“ಅಮರಾಥ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಪರಿಶೀಲಿಸಿ. ಇದೆಲ್ಲವನ್ನು ಪರಿಗಣಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ನಿರ್ಧಾರ ಎಂದು ಪೀಠ ಹೇಳಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಇದ್ದೇ ಇರುತ್ತವೆ. ಪರಿಸ್ಥಿತಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದು, ಕೋವಿಡ್‌ನಿಂದ ಮಹಾರಾಷ್ಟ್ರ ಸಾಕಷ್ಟು ಸಮಸ್ಯೆ ಅನುಭವಿಸಿದೆ. ಜನರು ಗುಂಪುಗೂಡುವುದರಿಂದ ಆಗುವ ಅಪಾಯ ಪರಿಗಣಿಸಲಾಗುವುದು. ಒಂದು ಮನೆಯಲ್ಲಿ ಸಂಭ್ರಮಾಚರಿಸಲು ಕಲ್ಯಾಣದಲ್ಲಿ 40 ಜನರ ಕುಟುಂಬವು ಒಟ್ಟಾಗಿ ಬಂದಿತ್ತು. ಈ ಪೈಕಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ 38 ಜನರಿಗೆ ಕೊರೊನಾ ಹಬ್ಬಿತ್ತು” ಎಂದು ಸರ್ಕಾರ ಅಫಿಡವಿಟ್‌ನಲ್ಲಿ ವಿವರಿಸಿದೆ.
Also Read
ಇಷ್ಟ ಬಂದಾಗ ಬಂದು ಹೋಗುವ ತಾಣ ಇದಲ್ಲ: ವಿಳಂಬ ಧೋರಣೆ ಅನುಸರಿಸುವ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದ ಸುಪ್ರೀಂಕೋರ್ಟ್

“ನ್ಯಾಯಿಕ ಪರಿಶೀಲನೆಯ ಮಾನದಂಡವನ್ನು ಗಮನದಲ್ಲಿಟ್ಟುಕೊಳ್ಳಬೇಕು. ವಾಸ್ತವವನ್ನು ಆಧರಿಸಿ ಪರಿಸ್ಥಿತಿ ಅವಲೋಕನ ನಡೆಸಲಾಗುವುದು. ನಿರಂಕುಶವಾಗಿ ತೀರ್ಮಾನ ಕೈಗೊಳ್ಳಲು ಆರಂಭಿಸಿದರೆ ಅದು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ಇಲ್ಲಿ ವಾಸ್ತವ ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತಿದೆ” ಎಂದು ಸರ್ಕಾರ ಹೇಳಿದೆ.

“ದೇಶದ ವಿವಿಧೆಡೆಯಿಂದ ನೂರಾರು ಮಂದಿ ಬಂದರೆ ಜನ ಸಮೂಹ ನಿಗ್ರಹಿಸುವುದು ಕಷ್ಟವಾಗುತ್ತದೆ” ಎಂದು ಸರ್ಕಾರ ಹೇಳಿದೆ. ನಾಂದೇಡ್‌ ಜಿಲ್ಲೆಯಲ್ಲಿ 18,167ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದು, 478 ಮಂದಿ ಸಾವನ್ನಪ್ಪಿದ್ದಾರೆ. ನಾಂದೇಡ್‌ ನಗರಸಭೆ ವ್ಯಾಪ್ತಿಯಲ್ಲಿ 8,375 ಸೋಂಕಿತರಿದ್ದು, 224 ಮಂದಿ ಸಾವನ್ನಪ್ಪಿದ್ದಾರೆ.

Related Stories

No stories found.
Kannada Bar & Bench
kannada.barandbench.com