ಸಂತ್ರಸ್ತೆ- ಆರೋಪಿ ನಡುವಿನ ರಾಜಿ ಆಧರಿಸಿ ಪೋಕ್ಸೊ ಪ್ರಕರಣ ರದ್ದುಗೊಳಿಸಬಹುದೇ? ತೀರ್ಪು ನೀಡಲು ಸುಪ್ರೀಂ ಸಿದ್ಧತೆ

ಸಂತ್ರಸ್ತೆ, ಆರೋಪಿ ನಡುವೆ ಪ್ರಕರಣ ಇತ್ಯರ್ಥವಾಗಿರುವುದನ್ನು ಉಲ್ಲೇಖಿಸಿ ವಿಚಾರಣೆ ರದ್ದುಗೊಳಿಸಿದ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಅಲ್ಲಿನ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಆಧರಿಸಿ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
Supreme Court, POCSO Act
Supreme Court, POCSO Act
Published on

ಸಂತ್ರಸ್ತರು- ಆರೋಪಿಗಳ ನಡುವಿನ ರಾಜಿ ಆಧರಿಸಿ ಪೋಕ್ಸೊ ಪ್ರಕರಣಗಳನ್ನು ರದ್ದುಗೊಳಿಸಬಹುದೇ ಎಂಬುದನ್ನು ನಿರ್ಧರಿಸಲು ಸುಪ್ರೀಂಕೋರ್ಟ್‌ ಸಜ್ಜಾಗಿದೆ. [ಕೇರಳ ಸರ್ಕಾರ ಮತ್ತಿತರರು ಹಾಗೂ ಹಫ್ಸಲ್‌ ರೆಹಮಾನ್‌ ಎನ್‌ ಕೆ ಮತ್ತಿತರರ ನಡುವಣ ಪ್ರಕರಣ].

ಸಂತ್ರಸ್ತೆ ಜೊತೆ ಸೌಹಾರ್ದಯುತ ಒಪ್ಪಂದ ಏರ್ಪಟ್ಟ ಹಿನ್ನೆಲೆಯಲ್ಲಿ ಪೋಕ್ಸೊ ಕಾಯಿದೆಯಡಿಯ ವಿಚಾರಣೆ ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್‌ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಗೆ (ಎಸ್‌ಎಲ್‌ಪಿ) ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಎ ಎಸ್ ಓಕಾ ಅವರಿದ್ದ ಪೀಠ ನೋಟಿಸ್‌ ಜಾರಿ ಮಾಡಿತು.

ಶಿಕ್ಷಕ ಹಫ್ಜಲ್‌ ರೆಹಮಾನ್‌ ತನ್ನ ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತೆಯ ಕೆನ್ನೆ ಸ್ಪರ್ಶಿಸಿ ಆಕೆಯ ಹಣೆಗೆ ಮುತ್ತಿಟ್ಟಿದ್ದಕ್ಕಾಗಿ ಪೋಕ್ಸೊ ಕಾಯಿದೆಯ ಸೆಕ್ಷನ್ 9 (ಎಫ್) ಮತ್ತು 10ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನ್ನ ಮತ್ತು ಆರೋಪಿ ನಡುವಿನ ಪ್ರಕರಣ ಸೌಹಾರ್ದಯುತವಾಗಿ ಇತ್ಯರ್ಥವಾಗಿದ್ದು ಬಾಕಿ ಉಳಿದಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ತನ್ನ ಅಭ್ಯಂತರವಿಲ್ಲ ಎಂದು ಸಂತ್ರಸ್ತೆ ಸಲ್ಲಿಸಿದ ಅಫಿಡವಿಟ್ ಆಧರಿಸಿ ಕರ್ನಾಟಕ ಹೈಕೋರ್ಟ್‌ ಆರೋಪಿಗಳ ವಿರುದ್ಧ ಪೋಕ್ಸೊ ವಿಚಾರಣೆ ರದ್ದುಗೊಳಿಸಿತ್ತು.

ಮಧ್ಯಪ್ರದೇಶ ಸರ್ಕಾರ ಮತ್ತು ಲಕ್ಷ್ಮೀ ನಾರಾಯಣ್‌ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಆಧರಿಸಿ ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಬೇಕೆಂದು ಕೇರಳ ಸರ್ಕಾರ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದೆ.

Also Read
[ಪೋಕ್ಸೊ ಖುಲಾಸೆಗಳು] ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಕಾಯಂಗೊಳಿಸುವ ಶಿಫಾರಸು ಹಿಂಪಡೆದ ಸುಪ್ರೀಂ ಕೋರ್ಟ್‌ ಕೊಲಿಜಿಯಂ

"ಸೆಕ್ಷನ್ 482 ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವಾಗ ಮತ್ತು ವಿವಾದವನ್ನು ಇತ್ಯರ್ಥಗೊಳಿಸಲಾಗಿದೆ ಎಂಬ ಮನವಿಯಲ್ಲಿ ವ್ಯವಹರಿಸುವಾಗ, ಅಪರಾಧದ ಸ್ವರೂಪ ಮತ್ತು ಅದರ ಗಹನತೆಯನ್ನು ಉಚ್ಚ ನ್ಯಾಯಾಲಯ ಸೂಕ್ತ ರೀತಿಯಲ್ಲಿ ಪರಿಗಣಿಸಬೇಕು. ಮಾನಸಿಕ ಅಧಃಪತನ ಅಥವಾ ಅಪರಾಧಗಳನ್ನು ಒಳಗೊಂಡಿರುವ ಹೇಯ ಮತ್ತು ಗಂಭೀರ ಅಪರಾಧಗಳಾದ ಕೊಲೆ, ಅತ್ಯಾಚಾರ ಮತ್ತು ಡಕಾಯಿತಿಯನ್ನು ಸಂತ್ರಸ್ತರು ಅಥವಾ ಅವರ ಕುಟುಂಬ ವಿವಾದ ಇತ್ಯರ್ಥಗೊಳಿಸಿದ್ದರೂ ಸೂಕ್ತವಾಗಿ ರದ್ದುಗೊಳಿಸಲಾಗುವುದಿಲ್ಲ. ಅಂತಹ ಅಪರಾಧಗಳು ನಿಜವಾಗಿ ಹೇಳುವುದಾದರೆ, ಸ್ವಭಾವತಃ ಖಾಸಗಿಯಾಗಿರದೆ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ." ಎಂದು ಲಕ್ಷ್ಮೀ ನಾರಾಯಣ್‌ ಪ್ರಕರಣದಲ್ಲಿ ನ್ಯಾಯಾಲಯ ಹೇಳಿತ್ತು.

ಸರ್ಕಾರದ ವಾದವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಎಸ್‌ಎಲ್‌ಪಿ ಆಧರಿಸಿ ನೋಟಿಸ್ ಜಾರಿ ಮಾಡಿತು. ಆರೋಪಿಗಳ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದ ಕೇರಳ ಹೈಕೋರ್ಟ್‌ನ ಆದೇಶ ಜಾರಿಗೆ ತರುವುದಕ್ಕೂ ಸರ್ವೋಚ್ಚ ನ್ಯಾಯಾಲಯ ತಡೆಯೊಡ್ಡಿದೆ.

ಆದೇಶವನ್ನು ಇಲ್ಲಿ ಓದಿ:

Attachment
PDF
State_of_Kerala_and_Another_v__Hafsal_Rahman_N_K__and_Others
Preview
Kannada Bar & Bench
kannada.barandbench.com