
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ನಿಗದಿಪಡಿಸಿ ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ನೀಡಿದ್ದ ತೀರ್ಪನ್ನು ಮಂಗಳವಾರ ಪ್ರಶ್ನಿಸಿದ ಭಾರತದ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರು ನ್ಯಾಯಾಲಯ ಸಂವಿಧಾನವನ್ನು ತಿದ್ದಿ ಬರೆಯಬಹುದೇ ಎಂದು ಕೇಳಿದರು.
ಸುಪ್ರೀಂ ಕೋರ್ಟ್ ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ಹಾಗೆ ಗಡುವು ವಿಧಿಸಬಹುದೇ ಎನ್ನುವ ಕುರಿತು ಸಂವಿಧಾನದ 143ನೇ ವಿಧಿಯಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತನ್ನ ಸುಪ್ರೀಂ ಕೋರ್ಟ್ ಸಲಹೆ ಕೋರಿ ಮಾಡಿದ್ದ ಶಿಫಾರಸ್ಸಿನ ವಿಚಾರಣೆ ವೇಳೆ ವೆಂಕಟರಮಣಿ ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠದೆದುರು ವಾದಿಸಿದರು.
“ನ್ಯಾಯಾಲಯ ಪೆನ್ನು ಪೇಪರ್ ಹಿಡಿದು ಸಂವಿಧಾನವನ್ನು ಪುನ: ಬರೆಯುವ ಮಟ್ಟಕ್ಕೆ ಹೋಗಲು ಸಾಧ್ಯವೇ?” ಎಂದು ಎಜಿ ವೆಂಕಟರಮಣಿ ಅವರು ಪ್ರಶ್ನಿಸಿದರು.
ತಿಂಗಳುಗಟ್ಟಲೆ ಮಸೂದೆಗಳು ರಾಜ್ಯಪಾಲರೆದುರು ಬಾಕಿ ಉಳಿದಿದ್ದರಿಂದ ಏಪ್ರಿಲ್‌ನಲ್ಲಿ ತೀರ್ಪು ನೀಡಿದ ಪೀಠ ತಮಿಳುನಾಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
"ಎಂತಹ ಭೀಕರ ಪರಿಸ್ಥಿತಿ ಉಂಟಾಗಿತ್ತು ನೋಡಿ.. ಆ ಪರಿಸ್ಥಿತಿ ಸರಿಪಡಿಸಲು ನ್ಯಾಯಾಲಯ ಮಧ್ಯಪ್ರವೇಶಿಸಿತು.. ಮಸೂದೆಗಳು ಬಹಳ ಸಮಯದಿಂದ ಬಾಕಿ ಇದ್ದವು " ಎಂದು ನ್ಯಾಯಮೂರ್ತಿ ನರಸಿಂಹ ಹೇಳಿದರು.
ಅಟಾರ್ನಿ ಜನರಲ್ ಮಂಡಿಸಿದ ವಾದದ ಪ್ರಮುಖಾಂಶಗಳು
ತಮಿಳುನಾಡು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶಾಸಕಾಂಗ ವಲಯಕ್ಕೆ ಕಾಲಿರಿಸಿತು.
ಸಂವಿಧಾನದ 143(3) ನೇ ವಿಧಿಯ ಪ್ರಕಾರ, ಪ್ರಕರಣ ಸಾಂವಿಧಾನಿಕ ವ್ಯಾಖ್ಯಾನದ ಗಣನೀಯ ಪ್ರಶ್ನೆಯನ್ನು ಒಳಗೊಂಡಿದೆಯೇ ಮತ್ತು ಅದನ್ನು ಐದು ನ್ಯಾಯಾಧೀಶರಿಗೆ ಉಲ್ಲೇಖಿಸಬೇಕೇ ಎಂಬುದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಬೇಕಾಗುತ್ತದೆ.
ತಮಿಳುನಾಡು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಷ್ಟ್ರಪತಿಗಳನ್ನು "ಸಾಮಾನ್ಯ ಶಾಸನಬದ್ಧ ಅಧಿಕಾರಿ"ಯಂತೆ ಪರಿಗಣಿಸಿ ಶಾಸನ ರೂಪಿಸುವ ಕ್ಷೇತ್ರವನ್ನು ಹೊಕ್ಕಿದೆ.
ರಾಜ್ಯಪಾಲರು ರಾಜ್ಯ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದಾಗ, ರಾಷ್ಟ್ರಪತಿಗಳು ನ್ಯಾಯಾಲಯದ ಸಲಹಾ ಅಭಿಪ್ರಾಯವನ್ನು ಪಡೆಯಬೇಕು ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯ ಪ್ರಶ್ನಾರ್ಹ.
ಸಾಂವಿಧಾನಿಕ ಕಾನೂನುಗಳನ್ನು ನಿರ್ಲಕ್ಷಿಸಿ ಹೊಸ ಸಂವಿಧಾನ ರಚಿಸಲು 142ನೇ ವಿಧಿ ಬಳಸುವಂತಿಲ್ಲ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದದ ಪ್ರಮುಖಾಂಶಗಳು
ಎಲ್ಲಾ ಸಮಸ್ಯೆಗಳಿಗೂ ನ್ಯಾಯಾಲಯದಲ್ಲಿ ಪರಿಹಾರವಿಲ್ಲ .
ರಾಷ್ಟ್ರಪತಿಗಳ ಶಿಫಾರಸ್ಸಿಗೆ ಉತ್ತರಿಸಲು ನ್ಯಾಯಾಲಯವು ಸಂವಿಧಾನದ ವಿಧಿಗಳಾದ 111 (ಸಂಸತ್ತಿನ ಮಸೂದೆಗಳಿಗೆ ಒಪ್ಪಿಗೆ), 74 (ರಾಷ್ಟ್ರಪತಿಗಳಿಗೆ ಸಹಾಯ ಮತ್ತು ಸಲಹೆ ನೀಡಲು ಮಂತ್ರಿಗಳ ಮಂಡಳಿ), 155 (ರಾಜ್ಯಪಾಲರ ನೇಮಕ), 163 (ರಾಜ್ಯಪಾಲರಿಗೆ ಸಹಾಯ ಮತ್ತು ಸಲಹೆ ನೀಡಲು ಮಂತ್ರಿಗಳ ಮಂಡಳಿ) ಮತ್ತು 200-201 (ರಾಜ್ಯ ಶಾಸಕಾಂಗದ ಮಸೂದೆಗಳು ಮತ್ತು ಪರಿಗಣನೆಗೆ ಕಾಯ್ದಿರಿಸಿದ ಮಸೂದೆಗಳ ಒಪ್ಪಿಗೆ) ಇವುಗಳನ್ನು ಪರಿಶೀಲಿಸಬೇಕಾಗುತ್ತದೆ.
ಮಸೂದೆಗಳಿಗೆ ಒಪ್ಪಿಗೆ ನೀಡಲು ಈ ಹಿಂದೆ ಗಡುವು ವಿಧಿಸಲಾಗುತ್ತಿತ್ತು. ಆದರೆ ಅದನ್ನು ಸಂವಿಧಾನ ರಚನಾ ಸಭೆಯು ಸದುದ್ದೇಶಕ್ಕಾಗಿ ರದ್ದುಗೊಳಿಸಿತು.
ಮೆಹ್ತಾ ಬುಧವಾರ ತಮ್ಮ ವಾದ ಮುಂದುವರೆಸಲಿದ್ದಾರೆ.