ಹತ್ಯೆಗೆ ಸಂಬಂಧಿಸಿದ ವಾಟ್ಸಾಪ್‌ ಸಂದೇಶಕ್ಕೆ ಥಂಬ್ಸ್‌ ಅಪ್‌ ಇಮೋಜಿ: ವಜಾಗೊಂಡ ಪೇದೆಗೆ ಮದ್ರಾಸ್‌ ಹೈಕೋರ್ಟ್‌ ಅಭಯ

ಮೇಲ್ಮುಖ ಹೆಬ್ಬೆರಳಿನ ಇಮೋಜಿ ಬಳಕೆ ವಾಟ್ಸಾಪ್‌ ಸಂದೇಶವನ್ನು ಅಂಗೀಕರಿಸಿದ ಸಂಕೇತವಾಗಿದ್ದು ಅದನ್ನು ಕೊಲೆಯ ಸಂಭ್ರಮಾಚರಣೆ ಎಂದು ಎಂದಿಗೂ ಪರಿಗಣಿಸಲಾಗದು ಎಂಬುದಾಗಿ ನ್ಯಾಯಾಲಯ ನುಡಿದಿದೆ.
ಮದ್ರಾಸ್ ಹೈಕೋರ್ಟ್ (ಮಧುರೈ ಪೀಠ) ಮತ್ತು ವಾಟ್ಸಾಪ್
ಮದ್ರಾಸ್ ಹೈಕೋರ್ಟ್ (ಮಧುರೈ ಪೀಠ) ಮತ್ತು ವಾಟ್ಸಾಪ್

ಮೇಘಾಲಯದಲ್ಲಿ ಉನ್ನತ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದ ವಾಟ್ಸಾಪ್ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಮೇಲ್ಮುಖ ಹೆಬ್ಬೆರಳಿನ (ಥಂಬ್ಸ್‌ ಅಪ್‌ 👍) ಇಮೋಜಿ ಬಳಸಿದ್ದಕ್ಕಾಗಿ ಸೇವೆಯಿಂದ ವಜಾಗೊಂಡಿದ್ದ ರೈಲ್ವೆ ಭದ್ರತಾ ಪಡೆಯ ಪೇದೆಯೊಬ್ಬರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ ಮಧುರೈ ಪೀಠ ಈಚೆಗೆ ಎತ್ತಿ ಹಿಡಿದಿದೆ.

ಮೇಲ್ಮುಖ ಹೆಬ್ಬೆರಳಿನ ಇಮೋಜಿಯನ್ನು 'ಓಕೆ' ಪದಕ್ಕೆ ಪರ್ಯಾಯವಾಗಿ ಅರ್ಥೈಸಬಹುದೇ ಹೊರತು ಕೊಲೆಯ ಸಂಭ್ರಮಾಚರಣೆಯಾಗಿ ಅಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ಕೃಷ್ಣಕುಮಾರ್ ಮತ್ತು ಆರ್ ವಿಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಈ ಚಿಹ್ನೆಯ ಬಳಕೆ ಕೊಲೆಯನ್ನು ಸಂಭ್ರಮಿಸಲಾಗಿದೆ ಎಂಬ ಅರ್ಥ ಸೂಸುವುದಿಲ್ಲ. ಬದಲಿಗೆ ಅರ್ಜಿದಾರ ಪೇದೆ ಸಂದೇಶ ನೋಡಿದ್ದಾರೆ ಎಂದು ಒಪ್ಪಿಕೊಂಡಿರುವ ಅರ್ಥವನ್ನಷ್ಟೇ ನೀಡುತ್ತದೆ ಎಂಬುದಾಗಿ ನ್ಯಾಯಾಲಯ ನುಡಿದಿದೆ.

ನ್ಯಾಯಮೂರ್ತಿಗಳಾದ ಡಿ ಕೃಷ್ಣಕುಮಾರ್ ಮತ್ತು  ಆರ್ ವಿಜಯಕುಮಾರ್
ನ್ಯಾಯಮೂರ್ತಿಗಳಾದ ಡಿ ಕೃಷ್ಣಕುಮಾರ್ ಮತ್ತು ಆರ್ ವಿಜಯಕುಮಾರ್

ಅಧಿಕೃತ ವಾಟ್ಸಾಪ್‌ ಗ್ರೂಪ್‌ ಒಂದರಲ್ಲಿ 2018 ರಲ್ಲಿ ಸಹಾಯಕ ಕಮಾಂಡೆಂಟ್‌ ಒಬ್ಬರನ್ನು ಪೇದೆಯೊಬ್ಬರು ಹತ್ಯೆ ಮಾಡಿದ್ದ ಸಂದೇಶ ಹಂಚಿಕೊಳ್ಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಲು ಮೇಲ್ಮುಖ ಹೆಬ್ಬೆರಳಿನ ಇಮೋಜಿಯನ್ನು ಪೇದೆ ನರೇಂದ್ರ ಚೌಹಾಣ್‌ ಬಳಸಿದ್ದರಿಂದ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿತ್ತು.

ಆ ರೀತಿಯ ಇಮೋಜಿ ಹಂಚಿಕೊಂಡಿದ್ದು ಕೊಲೆಗೆ ವ್ಯಕ್ತಪಡಿಸಿದ ನೈತಿಕ ಬೆಂಬಲ ಎಂದು ಆರ್‌ಪಿಎಫ್‌ ಎಣಿಸಿತು. ವಿಚಾರಣೆ ಬಳಿಕ ಚೌಹಾಣ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಇದನ್ನು ಪ್ರಶ್ನಿಸಿ 2021ರಲ್ಲಿ ಚೌಹಾಣ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಚೌಹಾಣ್‌ ತಪ್ಪಾಗಿ ಇಮೋಜಿ ಬಳಸಿದ್ದಾರೆ ಎಂದು ಕಳೆದ ವರ್ಷ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ವೇತನ ಹಿಂತಿರುಗಿಸದೆ ಅವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಅದು ಆದೇಶ ಹೊರಡಿಸಿತ್ತು.

ಇದರ ವಿರುದ್ಧ ಆರ್ ಪಿಎಫ್ ಮೇಲ್ಮನವಿ ಸಲ್ಲಿಸಿತು. ಆರ್‌ಪಿಎಫ್‌ ಪರವಾಗಿ ವಾದ ಮಂಡಿಸಿದ್ದ ಭಾರತದ ಉಪ ಸಾಲಿಸಿಟರ್ ಜನರಲ್ (ಡಿಎಸ್‌ಜಿ) ಕೆ ಗೋವಿಂದರಾಜನ್ ಚೌಹಾಣ್ ಸಮವಸ್ತ್ರ ಸೇವೆಯ ಸದಸ್ಯರಾಗಿರುವುದರಿಂದ ಉನ್ನತ ಮಟ್ಟದ ಶಿಸ್ತನ್ನು ಕಾಪಾಡಿಕೊಳ್ಳಬೇಕಿತ್ತು. ಹತ್ಯೆಗೆ ಸಂಬಂಧಿಸಿದ ಸಂದೇಶದಲ್ಲಿ ಹೆಬ್ಬೆರಳಿನ ಇಮೋಜಿಯನ್ನು ಬಳಸುವುದು ಸ್ಪಷ್ಟವಾಗಿ ಸಂಭ್ರಮಾಚರಣೆಯ ಸಂಕೇತ. ಸೇವೆಯಿಂದ ವಜಾಗೊಂಡಾಗಿನಿಂದ ಈವರೆಗಿನ ವೇತನ ತ್ಯಜಿಸುವ ಅರ್ಜಿದಾರರ ಪ್ರಸ್ತಾವನೆಯನ್ನು ಶಿಕ್ಷೆ ತಗ್ಗಿಸಿ ಸೇವೆಗೆ ಸೇರ್ಪಡೆ ಮಾಡಿಕೊಳ್ಳುವ ಅಂಶವಾಗಿ ಪರಿಗಣಿಸಬಾರದು ಎಂದಿದ್ದರು.

ಆದರೆ ಈ ವಾದವನ್ನು ಒಪ್ಪದ ನ್ಯಾಯಾಲುಯ ಚೌಹಾಣ್‌ ಅವರಿಗೆ ವಾಟ್ಸಾಪ್‌ ಬಳಕೆ ಅಷ್ಟು ಚೆನ್ನಾಗಿ ಗೊತ್ತಿರಲಿಲ್ಲ. ಇಮೋಜಿಯನ್ನು ತಪ್ಪಾಗಿ ಬಳಸಿದ್ದಾರೆ ಅವರ ವಿರುದ್ಧ ಬೇರೆ ಯಾವುದೇ ಆರೋಪಗಳಿಲ್ಲ. ಅವರ ವಿವರಣೆ ನಂಬಲರ್ಹ ಎಂದು ತಿಳಿಸಿತು.

ಹೀಗಾಗಿ ಸೇವೆಯಿಂದ ವಜಾಗೊಳಿಸುವ ಆದೇಶ ಬದಿಗೆ ಸರಿಸಿ ವೇತನವನ್ನು ಚೌಹಾಣ್‌ಗೆ ನೀಡದೆ ಅವರನ್ನು ಮರುನೇಮಕ ಮಾಡಿಕೊಳ್ಳುವಂತೆ ಏಕಸದಸ್ಯ ಪೀಠ ನೀಡಿದ ಆದೇಶ ಸೂಕ್ತವಾಗಿದೆ ಎಂದು ಅದು ತೀರ್ಪು ನೀಡಿ ರಿಟ್‌ ಮೇಲ್ಮನವಿಯನ್ನು ವಜಾಗೊಳಿಸಿತು. ಪೇದೆ ನರೇಂದ್ರ ಚೌಹಾಣ್ ಪರವಾಗಿ ವಕೀಲರಾದ ಆರ್.ಕವಿನ್ ಪ್ರಸಾದ್ ಮತ್ತು ಕೆ.ಮಾವಾ ಜಾಕೋಬ್ ವಾದ ಮಂಡಿಸಿದ್ದರು

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ

Attachment
PDF
The Director General Railway Protection Force v. Narender Chauhan.pdf
Preview

Related Stories

No stories found.
Kannada Bar & Bench
kannada.barandbench.com