ನರಸಿಂಹ ಹೋಮಕ್ಕೆ ಪಡೆದ ಹಣ ಸೇರಿದಂತೆ ಬಾಕಿ ₹1.19 ಲಕ್ಷ ಪಾವತಿಸಲು ಇಸ್ಕಾನ್‌ಗೆ ನಿರ್ದೇಶಿಸಿದ ಗ್ರಾಹಕರ ಆಯೋಗ

ಕಾನೂನಾತ್ಮಕವಾಗಿ ದೂರುದಾರರಿಗೆ ₹1,13,283 ಪಾವತಿಸಲಾಗಿದೆ. ನರಸಿಂಹ ಹೋಮ ನಡೆಸಿಲ್ಲವಾದ್ದರಿಂದ ₹7,500 ಮಾತ್ರ ಪಾವತಿಸಲು ಸಿದ್ಧವಿದ್ದು, ದೂರು ವಜಾ ಮಾಡಬೇಕು ಎಂದು ಇಸ್ಕಾನ್‌ ಪರ ವಕೀಲರು ಕೋರಿದ್ದರು.
ISKCON, Bengaluru
ISKCON, Bengaluru
Published on

ಪುತ್ರನ ವಿವಾಹಕ್ಕೆ ದ್ವಾರಕಪುರಿ ಕಲ್ಯಾಣಮಂಟಪವನ್ನು ಮುಂಗಡ ಹಣ ನೀಡಿ ಕಾಯ್ದಿರಿಸಿ, ಬಳಿಕ ಅದನ್ನು ರದ್ದುಪಡಿಸಿದರೂ ಬಾಕಿ ಹಣ ಪಾವತಿಸದೇ ಸತಾಯಿಸುತ್ತಿದ್ದ ಬೆಂಗಳೂರಿನ ಇಸ್ಕಾನ್‌ಗೆ ನರಸಿಂಹ ಹೋಮಕ್ಕಾಗಿ ಪಡೆದಿದ್ದ ₹7,500 ಸೇರಿದಂತೆ ₹1,19,013 ಅನ್ನು ದೂರುದಾರರಿಗೆ ಪಾವತಿಸಲು ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈಚೆಗೆ ಆದೇಶ ಮಾಡಿದೆ.

ಬೆಂಗಳೂರಿನ ನಂಜುಂಡೇಗೌಡ ಅವರು ಗ್ರಾಹಕ ಸಂರಕ್ಷಣಾ ಕಾಯಿದೆ ಸೆಕ್ಷನ್‌ 35ರ ಅಡಿ ₹1,34,523 ಗಳನ್ನು ಬಡ್ಡಿ ಸಮೇತ ಪಾವತಿಸಲು ಇಸ್ಕಾನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಆಯೋಗದ ಅಧ್ಯಕ್ಷ ಕೆ ಎಸ್‌ ಬಗಲಿ ಮತ್ತು ಸದಸ್ಯೆ ರೇಣುಕಾದೇವಿ ದೇಶಪಾಂಡೆ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ಮಾಡಿ, ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಪುತ್ರನ ವಿವಾಹ ನಡೆಸಲು 2020ರ ಸೆಪ್ಟೆಂಬರ್‌ 12ರ ಮಧ್ಯಾಹ್ನ 3ರಿಂದ 13ರ ಸಂಜೆ 4ರವರೆಗೆ ಇಸ್ಕಾನ್‌ಗೆ ಸೇರಿದ ದ್ವಾರಕಪುರಿ ಕಲ್ಯಾಣ ಮಂಟಪವನ್ನು ದೂರುದಾರರು ₹37,801 ಜಿಎಸ್‌ಟಿ ಸೇರಿದಂತೆ ₹2,47,806 ಪಾವತಿಸಿ, ಕಾಯ್ದಿರಿಸಿದ್ದರು. ದೇಣಿಗೆ ರೂಪದಲ್ಲಿ ₹7,500 ಗಳನ್ನೂ ದೂರುದಾರರು ಇಸ್ಕಾನ್‌ಗೆ ಪಾವತಿಸಿದ್ದರು. ಕೋವಿಡ್‌ ಹಿನ್ನೆಲೆಯಲ್ಲಿ 2021ರ ಜನವರಿ 15ರ ವರೆಗೆ ಮದುವೆ ಮುಂದೂಡಿರುವುದಾಗಿ ದೂರುದಾರರು ಇಸ್ಕಾನ್‌ ಆಡಳಿತಕ್ಕೆ ತಿಳಿಸಿದ್ದರು. ಬಳಿಕ, ಕಲ್ಯಾಣ ಮಂಟಪ ಕಾಯ್ದಿರಿಸಿದ್ದನ್ನು ರದ್ದುಪಡಿಸಿದ್ದ ದೂರುದಾರರು ₹2,47,806 ಪೈಕಿ ₹1,13,283 ಪಡೆದಿದ್ದರು. ಹಲವು ಬಾರಿ ಕೋರಿಕೆ ಸಲ್ಲಿಸಿದ್ದರೂ ಬಾಕಿ ಹಣವನ್ನು ಇಸ್ಕಾನ್‌ ಪಾವತಿಸಿರಲಿಲ್ಲ. ಹೀಗಾಗಿ, ವ್ಯಾಜ್ಯ ಆರಂಭಿಸಲಾಗಿತ್ತು.

Also Read
ಹೆಚ್ಚುವರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ₹70 ಲಕ್ಷ ಅಭಿವೃದ್ಧಿ ಶುಲ್ಕ ಬೇಡಿಕೆ: ಹೈಕೋರ್ಟ್‌ನಿಂದ ಬಿಬಿಎಂಪಿ ಆದೇಶ ವಜಾ

ಇಸ್ಕಾನ್‌ ವಾದ: ದೂರುದಾರರು ಮುಂಗಡ ಕಾಯ್ದಿರಿಸಿದ್ದ ದಿನದಂದು ಕಾರ್ಯಕ್ರಮ ರದ್ದುಪಡಿಸಿದ್ದರಿಂದ 2020ರ ಸೆಪ್ಟೆಂಬರ್‌ 14ರ ಬೆಳಿಗ್ಗೆ 6ರಿಂದ ಸಂಜೆ 3ರ ವರೆಗೆ ಬೇರೊಬ್ಬರು ಕಲ್ಯಾಣ ಮಂಟಪ ಕಾಯ್ದಿರಿಸಿದ್ದರು. ಹೀಗಾಗಿ, ಕಾನೂನಾತ್ಮಕವಾಗಿ ದೂರುದಾರರಿಗೆ ₹1,13,283 ಪಾವತಿಸಲಾಗಿದೆ. ನರಸಿಂಹ ಹೋಮ ನಡೆಸಿಲ್ಲವಾದ್ದರಿಂದ ₹7,500 ಮಾತ್ರ ಪಾವತಿಸಲು ಸಿದ್ಧವಿದ್ದು, ದೂರು ವಜಾ ಮಾಡಬೇಕು ಎಂದು ಇಸ್ಕಾನ್‌ ಪರ ವಕೀಲರು ಕೋರಿದ್ದರು.

ಆಯೋಗದ ತೀರ್ಪು: ಮುಂಗಡ ಕಾಯ್ದಿರಿಸಿದ್ದ ಕಲ್ಯಾಣ ಮಂಟಪದ ದಿನಾಂಕವನ್ನು ರದ್ದುಪಡಿಸಿದರೆ ಶೇ. 10ರಷ್ಟು ಹಣವನ್ನು ಮುರಿದುಕೊಳ್ಳಲಾಗುವುದು ಎಂದು ಇಸ್ಕಾನ್‌ ನಿಯಮವಿದೆ. ಅದರ ಪ್ರಕಾರ ₹1,23,903 ರಲ್ಲಿ ಶೇ.10 ಹಣ ಎಂದರೆ ₹12,390 ಆಗಿದೆ. ಇದನ್ನು ತೆಗೆದು ನರಸಿಂಹ ಹೋಮದ ₹7,500 ಸೇರಿಸಿದರೆ ಬಾಕಿ ₹1,19,013 ಅನ್ನು ದೂರುದಾರರಿಗೆ ಇಸ್ಕಾನ್‌ ಪಾವತಿಸಬೇಕು ಎಂದು ಆಯೋಗವು ಆದೇಶದಲ್ಲಿ ಹೇಳಿದೆ.

Attachment
PDF
Nanjunde Gowda V. ISKCON
Preview
Kannada Bar & Bench
kannada.barandbench.com