ವಿಚಾರಣೆಗೆ ಬಾಕಿಯಿದ್ದ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಪೊಲೀಸ್ ಪೇದೆ ನೇಮಕಾತಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಸಂಭಾವ್ಯ ಆಯ್ಕೆ ಪಟ್ಟಿಯಿಂದ ಅಭ್ಯಥಿಯೊಬ್ಬರ ಹೆಸರು ಕೈಬಿಟ್ಟಿದ್ದ ರಾಜ್ಯ ಪೊಲೀಸ್ ಇಲಾಖೆಯ ಕ್ರಮವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಪುರಸ್ಕರಿಸಿದೆ.
ಪೊಲೀಸ್ ಇಲಾಖೆಯ ಕ್ರಮ ಪ್ರಶ್ನಿಸಿ ಬೀದರ್ ಜಿಲ್ಲೆಯ ಎಕ್ಲೂರುವಾಡಿ ಗ್ರಾಮದ ನಿವಾಸಿ ನಾರಾಯಣ ಜಾಮದಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಅಕ್ರಮ ಕೂಟವೊಂದರಲ್ಲಿ ಸೇರಿದ, ದರೋಡೆ, ಹಲ್ಲೆ, ಕೊಲೆ ಯತ್ನ ಮತ್ತು ಜೀವ ಬೆದರಿಕೆಯೊಡ್ಡಿದ್ದ ಆರೋಪದ ಸಂಬಂಧ ಅರ್ಜಿದಾರ ಅಭ್ಯರ್ಥಿ ವಿರುದ್ಧ 2018ರಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದಿಂದ ಅರ್ಜಿದಾರರು ಖುಲಾಸೆಯಾಗಿದ್ದರೂ ಅರ್ಜಿ ಸಲ್ಲಿಸಿದ್ದ ದಿನದಂದು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿತ್ತು. ಈ ಮಾಹಿತಿಯನ್ನು ನೇಮಕಾತಿ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಬಹಿರಂಗಪಡಿಸಿರಲಿಲ್ಲ. ಆದರೆ, ಈ ಮಾಹಿತಿ ನೀಡುವುದು ಕಡ್ಡಾಯ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಅರ್ಜಿ ಸಲ್ಲಿಕೆಯಾದ ನಂತರ ಪೊಲೀಸ್ ಇಲಾಖೆ ನಡೆಸಿದ್ದ ಪರಿಶೀಲನೆ ವೇಳೆ ಅರ್ಜಿದಾರ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದೇ ಕಾರಣಕ್ಕಾಗಿ ಅವರನ್ನು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಿಲ್ಲ. ಅರ್ಜಿದಾರ ಅಭ್ಯರ್ಥಿಯು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ, ಆ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದ ಸಂದರ್ಭದಲ್ಲಿ ಅಂತಹ ಅಭ್ಯರ್ಥಿಯನ್ನು ಆಯ್ಕೆಗೆ ಪರಿಗಣಿಸುವುದಿಲ್ಲ. ಅವರ ನಂತರ ಮರಿಟ್ ಹೊಂದಿದ ಅಭ್ಯರ್ಥಿಯನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂಬುದಾಗಿ ನೇಮಕಾತಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು 2015ರ ಡಿಸೆಂಬರ್ 4ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ, ಆಯ್ಕೆಪಟ್ಟಿಯಿಂದ ಅರ್ಜಿದಾರರ ಹೆಸರು ಕೈ ಬಿಟ್ಟಿರುವ ಪೊಲೀಸ್ ಇಲಾಖೆಯ ಕ್ರಮ ಸೂಕ್ತವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ: ನಾರಾಯಣ ಜಾಮದಾರ್ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪೊಲೀಸ್ ಪೇದೆ (ಕೆಎಸ್‌ಆರ್‌ಪಿ), ಪೊಲೀಸ್ ಪೇದೆ ಐಆರ್‌ಬಿ ಶ್ರೇಣಿಯ ಉದ್ಯೋಗದ ನೇಮಕಾತಿ ಕೋರಿ 2020ರ ಜೂನ್ 16ರಂದು ಅರ್ಜಿ ಸಲ್ಲಿಸಿದ್ದರು. ಲಿಖಿತ ಪರೀಕ್ಷೆಯಲ್ಲಿ 100 ಅಂಕಗಳಿಗೆ 71 ಅಂಕ ಪಡೆದಿದ್ದರು. ಸಂಭಾವ್ಯ ಆಯ್ಕೆ ಪಟ್ಟಿಯಲ್ಲಿ ಅರ್ಜಿದಾರರದ್ದು 63ನೇ ಕ್ರಮ ಸಂಖ್ಯೆಯಾಗಿತ್ತು. ಆದರೆ, ಅರ್ಜಿ ಸಲ್ಲಿಸಿದ್ದ ದಿನಾಂಕದಂದು ಅರ್ಜಿದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿತ್ತು. ಈ ಮಾಹಿತಿಯನ್ನು ಅರ್ಜಿ ಸಲ್ಲಿಕೆ ವೇಳೆ ಮರೆಮಾಚಿದ್ದಾರೆ ಎಂಬ ಕಾರಣಕ್ಕೆ ಎರಡನೇ ಸಂಭಾವ್ಯ ಆಯ್ಕೆ ಪಟ್ಟಿಯಲ್ಲಿ ಅವರ ಹೆಸರು ಕೈ ಬಿಡಲಾಗಿತ್ತು. ಈ ಕುರಿತು 2021ರ ಜೂನ್ 9ರಂದು ನೇಮಕಾತಿ ಪ್ರಾಧಿಕಾರ ಹಿಂಬರಹ ನೀಡಿತ್ತು.
ಹಿಂಬರಹ ರದ್ದುಪಡಿಸಬೇಕು ಹಾಗೂ ತಮ್ಮನ್ನು ನೇಮಕಾತಿಗೆ ಪರಿಗಣಿಸುವಂತೆ ನೇಮಕಾತಿ ಪ್ರಾಧಿಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ವಜಾಗೊಳಿಸಿ 2022ರ ಜುಲೈ 19ರಂದು ಕೆಎಟಿ ಆದೇಶಿಸಿತ್ತು. ಇದರಿಂದ ನಾರಾಯಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.