ವಿವಾದಿತ ಸುದರ್ಶನ್ ಟಿವಿಗೆ ಖಡಕ್ ಎಚ್ಚರಿಕೆ; “ಯುಪಿಎಸ್‌ಸಿ ಜಿಹಾದ್” ಪ್ರಸಾರ ಮುಂದೂಡಲು ಸುಪ್ರೀಂ ಕೋರ್ಟ್ ಆದೇಶ

ವಿದ್ಯುನ್ಮಾನ ಮಾಧ್ಯಮಗಳಿಗೆ ಮಾನದಂಡ ನಿರೂಪಿಸುವ ಸಲುವಾಗಿ ಐವರು ಗಣ್ಯ ನಾಗರಿಕರ ಸಮಿತಿ ರೂಪಿಸಬೇಕು ಎನ್ನುವ ಅಭಿಪ್ರಾಯ ಹೊಂದಿದ್ದೇವೆ. ನಮಗೆ ರಾಜಕೀಯ ಪ್ರೇರಿತ ಮನಸ್ಸುಗಳು ಬೇಡ, ಧೀಮಂತ ವ್ಯಕ್ತಿತ್ವದ ಸದಸ್ಯರು ಇದಕ್ಕಾಗಿ ಬೇಕು ಎಂದ ನ್ಯಾಯಪೀಠ.
UPSE Jihad sudarshan tv, Supreme Court
UPSE Jihad sudarshan tv, Supreme Court

ಸರ್ಕಾರಿ ಸೇವೆಯಲ್ಲಿ ಮುಸ್ಲಿಮರು ಒಳನುಸುಳುತ್ತಿರುವ ಪಿತೂರಿಯ ಹಿಂದಿನ ರಹಸ್ಯ ಬಹಿರಂಗಪಡಿಸಲಾಗುವುದು ಎಂದು ಘೋಷಿಸಿಕೊಂಡಿದ್ದ ವಿವಾದಿತ ಸುದರ್ಶನ್ ಟಿವಿಯ “ಯುಪಿಎಸ್‌ಸಿ ಜಿಹಾದ್‌” ಕಾರ್ಯವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.

ಈವರೆಗೆ ಪ್ರಸಾರವಾಗಿರುವ ಈ ಕಾರ್ಯಕ್ರಮದ ಸರಣಿಗಳು ಇದರ ಉದ್ದೇಶ ಹಾಗೂ ಸ್ವಭಾವವನ್ನು ತಿಳಿಸಿವೆ. ಮುಂದಿನ ಆದೇಶದವರೆಗೆ ಈ ಕಾರ್ಯಕ್ರಮವನ್ನು, ಇದೇ ಹೆಸರಿನಲ್ಲಾಗಲಿ, ಬೇರೆಯ ಹೆಸರಿನಲ್ಲಾಗಲಿ ಪ್ರಸರಣ ಮಾಡದಂತೆ ನ್ಯಾಯಾಲಯ ತಡೆ ನೀಡಿದೆ.

ವಿವಾದಿತ ಕಾರ್ಯಕ್ರಮದ ಮೇಲೆ ಹಿಂದೆ ಪೂರ್ವ ಪ್ರಸರಣ ನಿರ್ಬಂಧ ವಿಧಿಸಲು ನಿರಾಕರಿಸಿದ್ದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಕೆ ಎಂ ಜೋಸೆಫ್ ಮತ್ತು ಇಂದೂ ಮಲ್ಹೋತ್ರಾ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.

ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಮಾನದಂಡ ರೂಪಿಸುವ ಸಂಬಂಧ ಐವರು ನಾಗರಿಕರ ಸಮಿತಿ ರಚಿಸಲಾಗುವುದು ಎಂದಿರುವ ನ್ಯಾಯಪೀಠವು “ವಿದ್ಯುನ್ಮಾನ ಮಾಧ್ಯಮಗಳಿಗೆ ಮಾನದಂಡವನ್ನು ನಿರೂಪಿಸುವ ಸಲುವಾಗಿ ಐವರು ಗಣ್ಯ ನಾಗರಿಕರ ಸಮಿತಿಯೊಂದನ್ನು ರೂಪಿಸಬೇಕು ಎನ್ನುವ ಅಭಿಪ್ರಾಯವನ್ನು ನಾವು ಹೊಂದಿದ್ದೇವೆ. ನಮಗೆ ರಾಜಕೀಯ ಪ್ರೇರಿತ ಮನಸ್ಸುಗಳು ಬೇಡ, ಧೀಮಂತ ವ್ಯಕ್ತಿತ್ವದ ಸದಸ್ಯರು ಇದಕ್ಕಾಗಿ ಬೇಕು” ಎಂದು ಹೇಳಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅನೂಪ್ ಜಾರ್ಜ್ ಚೌಧರಿ ಅವರು ಸದ್ಯಕ್ಕೆ ನಾಗರಿಕ ಸೇವೆಯಲ್ಲಿ ಕೇವಲ 292 ಮಂದಿ ಮುಸ್ಲಿಮರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. “ನೀವು ಲಿಪ್ಯಂತರ ಗಮನಿಸಿದರೆ ನಾಗರಿಕ ಸೇವೆಯಲ್ಲಿ ಮುಸ್ಲಿಮರು ಒಳನುಸುಳುತ್ತಿದ್ದಾರೆ ಎಂದು ಅವರು ಹೇಳುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಇತರೆ ಹಿಂದುಳಿದ ವರ್ಗಗಳ ಪಾಲನ್ನು ಮುಸ್ಲಿಂ ಒಬಿಸಿಗಳು ನುಂಗಿ ಹಾಕುತ್ತಿವೆ ಎಂದು ಅವರು ಹೇಳುತ್ತಾರೆ. ಕಾರ್ಯಕ್ರಮದಲ್ಲಿ ರೇಖಾ ನಕ್ಷೆಗಳನ್ನು ಬಳಸಲಾಗಿದೆ. ಇದರಲ್ಲಿ “ಹಾ.. ಗದ್ದಾರ್” ಎಂಬ ಪದಗಳನ್ನು ಬಳಸಿದ್ದಾರೆ. ಅತ್ಯಂತ ದುರ್ದೈವದ ಪದಗಳು” ಎಂದು ಬೇಸರಿಸಿದರು.

ಈ ಸಂದರ್ಭದಲ್ಲಿ ನ್ಯಾ. ಚಂದ್ರಚೂಡ್ ಅವರು ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಹೇಗೆ ವರದಿ ಬಿತ್ತರಿಸುತ್ತವೆ ಎಂಬುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಅನುಸರಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ ಎಂದರು. “ಪರಿಚ್ಛೇದ 19(1)(a) ಕ್ಕೆ ವಿರುದ್ಧವಾದ ಮಾರ್ಗಸೂಚಿಗಳನ್ನು ಸರ್ಕಾರ ಹೇರುತ್ತದೆ ಎಂದು ನಾವು ಹೇಳುತ್ತಿಲ್ಲ” ಎಂದರು.

“ನಾವು ಸಂಪೂರ್ಣ ದೃಶ್ಯ ಮಾಧ್ಯಮಗಳ ಮಾಲೀಕತ್ವದ ಕುರಿತಾಗಿ ಗಮನಿಸಬೇಕು. ಕಂಪೆನಿಯ ಸಮಸ್ತ ಷೇರುದಾರರ ವಿವರವನ್ನು ತಾಣದಲ್ಲಿ ಹಾಕುವ ಮೂಲಕ ಸಾರ್ವಜನಿಕರ ಮುಂದಿರಿಸಬೇಕು. ಕಂಪೆನಿಯ ಆದಾಯದ ಮೂಲದ ಬಗ್ಗೆಯೂ ಮಾಹಿತಿ ಹಾಕಬೇಕು. ಸರ್ಕಾರವು ಒಂದು ಚಾನೆಲ್‌ಗೆ ಹೆಚ್ಚಿನ ಜಾಹೀರಾತು, ಮತ್ತೊಂದಕ್ಕೆ ಕಡಿಮೆ ಜಾಹೀರಾತು ನೀಡುತ್ತದೆಯೇ ಎಂಬುದನ್ನು ಪರಿಶೀಲಿಸುವ ದೃಷ್ಟಿಯಿಂದ ಕಂಪೆನಿಯ ಆದಾಯ ಮೂಲವನ್ನೂ ವೆಬ್‌ಸೈಟ್‌ನಲ್ಲಿ ಹಾಕಬೇಕು.”
ನ್ಯಾಯಮೂರ್ತಿ ಕೆ ಎಂ ಜೋಸೆಫ್

“... ಚರ್ಚಾ ಕಾರ್ಯಕ್ರಮಗಳಲ್ಲಿ ನಿರೂಪಕರ ಪಾತ್ರವನ್ನು ನೋಡಬೇಕು. ಇತರರು ಮಾತನಾಡುವಾಗ ಒಬ್ಬರು ಹೇಗೆ ಕೇಳುತ್ತಾರೆ. ಟಿವಿ ಚರ್ಚೆಗಳಲ್ಲಿ ನಿರೂಪಕರು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಪರಿಶೀಲಿಸಿ. ನಿರೂಪಕರು ಆಹ್ವಾನಿತರ ಮೈಕ್ ಬಂದ್ ಮಾಡಿ ಅವರು ಪ್ರಶ್ನೆಗಳನ್ನು ಕೇಳುತ್ತಾರೆ” ಎಂದರು.

ಸುದರ್ಶನ್ ಟಿವಿ ಕಾರ್ಯಕ್ರಮದ ಪ್ರಸಾರದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾ. ಚಂದ್ರಚೂಡ್ ಅವರು ಹೀಗೆ ಹೇಳಿದರು,

“ನಾಗರಿಕ ಸೇವೆಗಳಿಗೆ ನಿರ್ದಿಷ್ಟ ಗುಂಪು ಪ್ರವೇಶ ಪಡೆಯುತ್ತಿದೆ ಎಂಬುದು ನಿರೂಪಕರ ಅಹವಾಲು. ಇದು ಕಪಟತೆ ಎನಿಸುವುದಿಲ್ಲವೇ? ಇಂಥ ಮೋಸದ ಆರೋಪಗಳು ಯುಪಿಎಸ್‌ಸಿ ಪರೀಕ್ಷೆಯ ಮೇಲೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಯುಪಿಎಸ್‌ಸಿ ಹೆಸರು ಕೆಡಿಸುವ ಕೆಲಸ ಮಾಡಲಾಗುತ್ತಿದೆ. ಇಂಥ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಇಂಥವುಗಳಿಗೆ ಒಪ್ಪಿಗೆ ನೀಡುವುದಾದರೂ ಹೇಗೆ? ಮುಕ್ತ ಸಮಾಜದಲ್ಲಿ ಇಂಥ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಬಹುದೇ?.

“ಪರಿಚ್ಛೇದ 19(1)(a) ಎತ್ತಿಹಿಡಿಯಬೇಕಾದರೆ ಮಾಧ್ಯಮಗಳು ಅದನ್ನು ಅನುಸರಿಸಬಹುದಾದ ಮಾರ್ಗಸೂಚಿಗಳು ಜಾರಿಯಲ್ಲಿರಬೇಕು ಎಂದೆನಿಸುವುದಿಲ್ಲವೇ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಪತ್ರಕರ್ತರ ಸ್ವಾತಂತ್ರ್ಯ ಸರ್ವೋಚ್ಚವಾದುದು. ನ್ಯಾ. ಜೋಸೆಫ್ ಅವರ ಹೇಳಿಕೆಯಲ್ಲಿ ಎರಡು ವಿಧಗಳಿವೆ. ಮಾಧ್ಯಮವನ್ನು ನಿರ್ಬಂಧಿಸುವುದು ಯಾವುದೇ ಪ್ರಜಾಪ್ರಭುತ್ವಕ್ಕೆ ಘೋರವಾದ ಕ್ರಮ” ಎಂದು ಸಮರ್ಥಿಸಿದರು.

Also Read
"ಯುಪಿಎಸ್‌ಸಿ ಜಿಹಾದ್" ಪ್ರಕರಣದಲ್ಲಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಿವೃತ್ತ ಅಧಿಕಾರಿಗಳು

ಮಾಧ್ಯಮ ಸ್ವಾತಂತ್ರ್ಯ ಕಲ್ಪಿಸುವುದರ ಜೊತೆಗೆ ನ್ಯಾ. ಜೋಸೆಫ್ ಅವರ ಆತಂಕಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಅಸಂಖ್ಯಾತ ವೆಬ್ ಪೋರ್ಟಲ್‌ಗಳು ಅಸ್ತಿತ್ವದಲ್ಲಿದ್ದು ಅವುಗಳ ಮಾಲೀಕತ್ವವು ನೈಜ ಮಾಲೀಕತ್ವಕ್ಕಿಂತ ಭಿನ್ನವಾಗಿವೆ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಜೋಸೆಫ್ ಅವರು “ಪತ್ರಕರ್ತರ ಸ್ವಾತಂತ್ರ್ಯವೆನ್ನುವುದು ನಿರಂಕುಶವಾದುದಲ್ಲ. ಬೇರಾವುದೇ ನಾಗರಿಕರಿಗೆ ಇರುವ ಸ್ವಾತಂತ್ರ್ಯವೇ ಅವರಿಗೂ ಇರುವುದು. ಅಮೆರಿಕದ ರೀತಿಯಲ್ಲಿ ಪತ್ರಕರ್ತರಿಗೆ ಇಲ್ಲಿ ಪ್ರತ್ಯೇಕ ಸ್ವಾತಂತ್ರ್ಯವಿಲ್ಲ. ತಮ್ಮ ಚರ್ಚೆಯಲ್ಲಿ ನ್ಯಾಯಯೋಚಿತ ವಿಧಾನ ಅನುಸರಿಸುವ ಪತ್ರಕರ್ತರು ನಮಗೆ ಬೇಕು” ಎಂದರು.
ನ್ಯಾ. ಚಂದ್ರಚೂಡ್ ಅವರು “ರಾಷ್ಟ್ರದಲ್ಲಿರುವ ಅತ್ಯುತ್ತಮರು ಕ್ರಮಗಳ ಸಲಹೆ ನೀಡಲಿ. ಅವುಗಳನ್ನು ನ್ಯಾಯಾಲಯದಲ್ಲಿ ಚರ್ಚೆಗೆ ಒಳಪಡಿಸಿ ಮಾರ್ಗಸೂಚಿ ರೂಪಿಸೋಣ.. ಈಗ ಒಬ್ಬ ನಿರೂಪಕ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ. ಕೆಲವು ಮಾರ್ಗಸೂಚಿಗಳನ್ನು ಅನುಸರಿಬೇಕು” ಎಂದರು.

ಈ ಸಂದರ್ಭದಲ್ಲಿ ಸುದರ್ಶನ್ ಟಿವಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಪ್ರತಿಕ್ರಿಯಿಸಲು ಕಾಲಾವಕಾಶ ನೀಡುವಂತೆ ನ್ಯಾ. ಚಂದ್ರಚೂಡ್ ಅವರಿಗೆ ಮನವಿ ಮಾಡಿದರು.

“ನಿಮ್ಮ ಕಕ್ಷಿದಾರರು ಈ ರಾಷ್ಟ್ರಕ್ಕೇ ಅಪಚಾರವನ್ನು ಎಸಗುತ್ತಿದ್ದಾರೆ. ಅವರು ಭಾರತವು ಬಹುಸಂಸ್ಕೃತಿಯ ಬೀಡು ಎನ್ನುವುದನ್ನು ಒಪ್ಪುತ್ತಿಲ್ಲ. ನಿಮ್ಮ ಕಕ್ಷಿದಾರರು ತಮ್ಮ ಸ್ವಾತಂತ್ರ್ಯವನ್ನು ಎಚ್ಚರಿಕೆಯಿಂದ ಬಳಸಬೇಕು.”
ನ್ಯಾಯಮೂರ್ತಿ ಚಂದ್ರಚೂಡ್

ಸುದ್ದಿ ಪ್ರಸರಣಾ ಒಕ್ಕೂಟದ ಪರವಾಗಿ ವಾದಿಸಲು ಮುಂದಾದ ನಿಶಾ ಭಂಬಾನಿ ಅವರನ್ನು ಉದ್ದೇಶಿಸಿ ನ್ಯಾ.ಚಂದ್ರಚೂಡ್‌ ಅವರು “ನಿಮಗೆ (ಒಕ್ಕೂಟಕ್ಕೆ) ಲೆಟರ್‌ ಹೆಡ್‌ನ ಆಚೆಗೂ ಅಸ್ತಿತ್ವ ಇದೆಯೇ? ಮಾಧ್ಯಮದಲ್ಲಿ ಪರ್ಯಾಯ ತನಿಖೆಯು ನಡೆಯುತ್ತಿರುವಾಗ ಹಾಗೂ ಪ್ರತಿಷ್ಠೆಗೆ ಮಸಿ ಬಳಿಯುತ್ತಿರುವಾಗ ನೀವು ಏನು ಮಾಡುತ್ತೀರಿ?” ಎಂದು ಪ್ರಶ್ನಿಸಿದರು.

Also Read
ಸುದರ್ಶನ್‌ ಟಿವಿ ಕಾರ್ಯಕ್ರಮ ‘ಯುಪಿಎಸ್‌ಸಿ ಜಿಹಾದ್’ಗೆ ಪೂರ್ವ ಪ್ರಸರಣ ತಡೆ ವಿಧಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಈ ಸಂದರ್ಭದಲ್ಲಿ ತುಷಾರ್ ಮೆಹ್ತಾ ಅವರು “ಉದಾಹರಣೆಗೆ ವಕೀಲರಾದ ಗೌತಮ್ ಭಾಟಿಯಾ ಅವರ ಬರಹವನ್ನು ನಾನು ಒಪ್ಪುವುದಿಲ್ಲ. ಅವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಕೆಟ್ಟ ಬರಹ ಬರೆಯುತ್ತೇನೆ. ಅದಕ್ಕೆ ಅವರು ಪ್ರತಿಕ್ರಿಯಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಸುಧಾರಣೆ ಮಾಡುವುದು ಹೇಗೆ ನ್ಯಾಯಮೂರ್ತಿಗಳೇ” ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಚಂದ್ರಚೂಡ್ ಅವರು “ಈ ಹೋಲಿಕೆಯನ್ನು ಲಾಭದ ಬಗ್ಗೆ ಗಮನಹರಿಸುವ ಸಂಸ್ಥೆಗಳ ಬಗ್ಗೆ ಮಾಡಲಾಗದು. ಶೈಕ್ಷಣಿಕ ಆಸಕ್ತಿಯಿಂದ ಬರೆಯುವ ಬೌದ್ಧಿಕ ಬ್ಲಾಗ್ ಇಂಥ ಸಂಸ್ಥೆಗಳಿಗಿಂತ ಭಿನ್ನವಾಗಿರುತ್ತದೆ” ಎಂದರು.

ಸುದೀರ್ಘವಾದ ವಿಚಾರಣೆಯ ಪ್ರಮುಖ ಅಂಶಗಳು ಇಂತಿವೆ.

 • ಕಾರ್ಯಕ್ರಮ ನಿಬಂಧನೆಯ ನಿಯಮ 6ರ ಪ್ರಕಾರ ಕೇಬಲ್ ಟಿವಿ ಕಾರ್ಯಕ್ರಮಗಳು ಒಂದು ನಿರ್ದಿಷ್ಟ ಧರ್ಮ ಅಥವಾ ಸಮುದಾಯವನ್ನು ಕೇಂದ್ರೀಕರಿಸಿ ಏನನ್ನೂ ಪ್ರಸಾರ ಮಾಡಲಾಗದು-ನ್ಯಾ. ಜೋಸೆಫ್

 • ನಾಗರಿಕ ಸೇವೆಗಳಲ್ಲಿರುವ ಮುಸ್ಲಿಮರನ್ನು ಸದರಿ ಕಾರ್ಯಕ್ರಮ ಅತ್ಯಂತ ಕೆಟ್ಟರೀತಿಯಲ್ಲಿ ಪ್ರದರ್ಶಿಸಿದೆ. ಅಧಿಕಾರಿಗಳನ್ನು ಭಯೋತ್ಪಾದಕರು ಎಂದು ಕರೆಯಲಾಗಿದೆ. ದ್ವೇಷ ಭಾಷೆಯಲ್ಲಿ ಪ್ರತಿಕ್ರಿಯಿಸುವ ಹಕ್ಕು ಸಿಗುವುದಿಲ್ಲ. ಮುಸ್ಲಿಮರು ನಾಗರಿಕ ಸೇವೆಗಳಲ್ಲಿ ಇರಬಾರದು ಎಂಬುದಕ್ಕೆ ಪ್ರತಿಕ್ರಿಯಿಸುವುದು ಹೇಗೆ ಎಂದು ಪ್ರಶ್ನಿಸಿದ ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಶಾದನ್ ಫರಸಾತ್.

 • ಸುದರ್ಶನ್ ವಾಹಿನಿಯು ಕಾರ್ಯಕ್ರಮವನ್ನು ತನಿಖಾ ವರದಿ ಎಂದು ಬೆನ್ನತ್ತಿದೆ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ಭಾರತಕ್ಕೆ ವಿರುದ್ಧವಾದ ರೀತಿಯಲ್ಲಿ ಸಾಕಷ್ಟು ಹಣ ವಿದೇಶಗಳಿಂದ ಹರಿದು ಬರುತ್ತಿದೆ. ಸುದರ್ಶನ ಟಿವಿಯು ಇದನ್ನು ಜನರಿಗೆ ತಿಳಿಸುವುದು ಕರ್ತವ್ಯ ಎಂದು ಭಾವಿಸಿದೆ ಎಂದ ಸುದರ್ಶನ್ ಟಿವಿ ಪ್ರತಿನಿಧಿಸುತ್ತಿರುವ ವಕೀಲ ಶ್ಯಾಮ್ ದಿವಾನ್,

 • ಪ್ರತಿಕ್ರಿಯೆ ಸಲ್ಲಿಸಲು ನೀವು ಎರಡು ವಾರ ಕೇಳುತ್ತಿದ್ದೀರಿ. ಈ ಸಂದರ್ಭಕ್ಕೆ ಕಾರ್ಯಕ್ರಮ ಮುಗಿದಿರುತ್ತದೆ. ಕಾರ್ಯಕ್ರಮದ ನಿಬಂಧನೆ ಉಲ್ಲಂಘಿಸದಂತೆ ಸರ್ಕಾರ ನಿಮಗೆ ಸೂಚಿಸಿದೆ. ಉಲ್ಲಂಘಿಸಿದರೆ ದಂಡ ಏನು?- ನ್ಯಾ. ಜೋಸೆಫ್

 • ಅರ್ಜಿದಾರರ ಪರ ವಕೀಲ ಫರಸತ್ ಅವರು ‘ಬಿಂದಾಸ್ ಬೋಲ್’ ಎಂಬ ಕಾರ್ಯಕ್ರಮದ ವಿವಾದಿತ ಕ್ಲಿಪ್ ಅನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ವೀಕ್ಷಿಸಿದ ನ್ಯಾಯಾಲಯವು ಕಾರ್ಯಕ್ರಮದ ಉಳಿದ ಕಂತುಗಳನ್ನು ಸೆಪ್ಟೆಂಬರ್ 17ರ ವರೆಗೆ ಪ್ರಸಾರ ಮಾಡದಂತೆ ಸೂಚಿಸಿತು.

 • ಪೂರ್ವ ಪ್ರಸರಣ ನಿರ್ಬಂಧ ವಿಧಿಸಲಾಗದು. ನಮಗೆ ಥೀಮ್ ಗೊತ್ತಿದ್ದು, ನಾವು ಈಗಾಗಲೇ ನಾಲ್ಕು ಕಂತುಗಳನ್ನು ಪ್ರಸಾರ ಮಾಡಿದ್ದೇವೆ. ಇದು ಪೂರ್ವ ನಿರ್ಬಂಧ ಆದೇಶ ಎಂದಾದರೆ ನಾನು ವಾದ ಮಂಡಿಸಬೇಕಾಗುತ್ತದೆ. ವಿದೇಶದಿಂದ ಹಣ ಹರಿದುಬರುತ್ತಿರುವುದಕ್ಕೆ ಸ್ಪಷ್ಟ ಸಂಪರ್ಕವಿದೆ ಎಂದ ಸುದರ್ಶನ್ ಟಿವಿ ವಕೀಲ ದಿವಾನ್.

 • ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ನಾಗರಿಕ ಸೇವೆಯಲ್ಲಿ ಒಳನುಸುಳುವ ಗುಂಪಿನ ಭಾಗವಾಗಿದ್ದಾರೆ ಎಂಬುದನ್ನು ನಾವು ಸಹಿಸಲಾಗದು- ನ್ಯಾ. ಚಂದ್ರಚೂಡ್.

 • ದೇಶದ ಸುಪ್ರೀಂ ಕೋರ್ಟ್ ಆಗಿ ನಾಗರಿಕ ಸೇವೆಗಳಿಗೆ ಮುಸ್ಲಿಮರು ಒಳನುಸುಳುತ್ತಿದ್ದಾರೆ ಎಂದು ನೀವು ಹೇಳುವುದಕ್ಕೆ ನಿಮಗೆ ನಾವು ಅನುಮತಿಸಲಾಗದು. ಇದನ್ನು ಹೇಳಲು ಪತ್ರಕರ್ತರಿಗೆ ಪೂರ್ಣ ಸ್ವಾತಂತ್ರ್ಯವಿದೆ ಎಂದು ನೀವು ಹೇಳಲಾಗದು-ನ್ಯಾ. ಚಂದ್ರಚೂಡ್

 • ಪತ್ರಕರ್ತರು ಕಾರ್ಯನಿರ್ವಹಿಸುವಾಗ ನ್ಯಾಯಯುಕ್ತ ಟೀಕೆಗಳ ಬಗ್ಗೆ ಗಮನಹರಿಸಬೇಕು. ಅಪರಾಧ ತನಿಖಾ ವರದಿಗಳನ್ನೇ ನೋಡಿ, ಕೇವಲ ಏಕಪಕ್ಷೀಯವಾಗಿ ಗಮನ ಕೇಂದ್ರೀಕರಿಸುತ್ತವೆ-ನ್ಯಾ.ಚಂದ್ರಚೂಡ್‌

 • ಕಾರ್ಯಕ್ರಮ ಪ್ರಸಾರ ಮಾಡಲು ಸೆಪ್ಟೆಂಬರ್ 9ರಂದು ಒಪ್ಪಿಗೆ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೆಪ್ಟೆಂಬರ್ 11 ಮತ್ತು 14ರ ಕಾರ್ಯಕ್ರಮದ ಕಂತುಗಳ ಮೇಲೆ ಗಮನಹರಿಸಿದೆಯೇ ಎಂದು ಪ್ರಶ್ನಿಸಿದ ನ್ಯಾಯಾಲಯ. ಈ ಸಂಬಂಧ ಸೂಚನೆ ಪಡೆಯುವುದಾಗಿ ಹೇಳಿದ ತುಷಾರ್ ಮೆಹ್ತಾ

 • ಎಲೆಕ್ಟ್ರಾನಿಕ್ ಮಾಧ್ಯಮಗಳ ಶಕ್ತಿ ಅಗಾಧವಾಗಿದೆ. ನಿರ್ದಿಷ್ಟ ಸಮುದಾಯ ಅಥವಾ ಗುಂಪುಗಳನ್ನು ಗುರಿಯಾಗಿಸುವಲ್ಲಿ ಅವುಗಳ ಪಾತ್ರ ಮಹತ್ವದ್ದು.

 • ಒಬ್ಬ ನಿರೂಪಕ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾನೆ… ಹೀಗಾದಾಗ, ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ ಎನ್ನಲು ಒಂದು ಗುಣಮಟ್ಟದ ಅವಶ್ಯಕತೆ ಇರಬೇಕು ತಾನೆ-ನ್ಯಾ.ಚಂದ್ರಚೂಡ್‌

 • ಎಲ್ಲವೂ ಸರಿಯಾಗಿದ್ದರೆ (ಹಂಕಿ-ಡೌರಿ) ಇಂದು ನಾವು ಟಿವಿಗಳಲ್ಲಿ ನೋಡುತ್ತಿರುವುದನ್ನು ನೋಡುತ್ತಿರಲಿಲ್ಲ ಎಂದು ಭಾರತೀಯ ಪತ್ರಿಕಾ ಮಂಡಳಿಯ ವಾದಕ್ಕೆ ನ್ಯಾ. ಚಂದ್ರಚೂಡ್ ಚಾಟಿ

 • ದ್ವೇಷ ಭಾಷೆಯನ್ನು ನಿರ್ಧರಿಸಲು ಕೆಲವು ಮಾನದಂಡ ಅಗತ್ಯ. ಈ ಪ್ರಕರಣದಲ್ಲಿ ನಿರ್ದಿಷ್ಟ ಸಮುದಾಯವನ್ನು ಕೆಟ್ಟದಾಗಿ ನೋಡಲಾಗುತ್ತಿದೆ. ಯಾವ ಮಟ್ಟಕ್ಕೆ ಎಂದರೆ ಅದಕ್ಕೆ ಅವರಿಗೆ ಪ್ರತಿಕ್ರಿಯಿಸಲಾಗದ ಮಟ್ಟಿಗೆ. ಸದರಿ ಪ್ರಕರಣದಲ್ಲಿ ಪೂರ್ವ ಪ್ರಸರಣ ನಿರ್ಬಂಧ ಮಾನದಂಡ ವಿಭಿನ್ನವಾಗಿರುತ್ತವೆ ಎಂದ ಅರ್ಜಿದಾರರ ಪರ ವಕೀಲ ಗೌರವ್ ಭಾಟಿಯಾ

 • ಕೇಂದ್ರ ಸರ್ಕಾರ, ಭಾರತೀಯ ಪತ್ರಿಕಾ ಮಂಡಳಿ, ಸುದ್ದಿ ಪ್ರಸರಣಾ ಒಕ್ಕೂಟ ಮತ್ತು ಸುದರ್ಶನ್ ಟಿವಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ.

Related Stories

No stories found.
Kannada Bar & Bench
kannada.barandbench.com