ಮುರುಗನನ್ನು 'ತಮಿಳು ದೈವʼ ಎಂದು ಘೋಷಿಸಲಾಗದು, ಇದರಿಂದ ದೇಶದ ಒಕ್ಕೂಟ ಸ್ವರೂಪಕ್ಕೆ ಧಕ್ಕೆ: ಮದ್ರಾಸ್ ಹೈಕೋರ್ಟ್

ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಮತ್ತೊಂದು ಅರ್ಜಿಯಲ್ಲಿ ಇಂಗ್ಲಿಷ್‌ನ TamilNadu ಬದಲಿಗೆ ʼTahmizhl Naaduʼ or ʼThamizhl Naaduʼ ಎಂದು ಬದಲಿಸಲು ಕೋರಿದ್ದು ಇದಕ್ಕೆ ನ್ಯಾಯಪೀಠ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.
ಮುರುಗನನ್ನು 'ತಮಿಳು ದೈವʼ ಎಂದು ಘೋಷಿಸಲಾಗದು, ಇದರಿಂದ ದೇಶದ ಒಕ್ಕೂಟ ಸ್ವರೂಪಕ್ಕೆ ಧಕ್ಕೆ: ಮದ್ರಾಸ್ ಹೈಕೋರ್ಟ್
Lord Muruga speakingtree.in

ಮುರುಗನ್‌ ದೈವವನ್ನು ʼತಮಿಳಿನ ದೇವರುʼ ಎಂದು ಘೋಷಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ "ಇದರಿಂದ ದೇಶದ ಜಾತ್ಯತೀತ ಮತ್ತು ಒಕ್ಕೂಟ ಸ್ವರೂಪಕ್ಕೆ ಧಕ್ಕೆಯಾಗುತ್ತದೆ" ಎಂದು ಅಭಿಪ್ರಾಯಪಟ್ಟಿದೆ. (ತಿರುಮುರುಗನ್ ಮತ್ತು ತಮಿಳುನಾಡು ಸರ್ಕಾರ ಮತ್ತಿತರರ ನಡುವಣ ಪ್ರಕರಣ).

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎಸ್ ಆನಂದಿ ಅವರಿದ್ದ ಪೀಠ “ಸಂವಿಧಾನದ ಪ್ರಸ್ತಾವನೆ ದೇಶದ ಜಾತ್ಯತೀತ ಸ್ವರೂಪಕ್ಕೆ ಒತ್ತು ನೀಡುತ್ತದೆ. ಅರ್ಜಿಯಲ್ಲಿ ಕೋರಿದಂತೆ ಘೋಷಣೆ ಮಾಡುವುದರಿಂದ ಮಹಾನ್‌ ರಾಷ್ಟ್ರದ ಒಕ್ಕೂಟ ಮತ್ತು ಜಾತ್ಯತೀತ ಸ್ವರೂಪಕ್ಕೆ ಹಾನಿ ಉಂಟು ಮಾಡಿದಂತಾಗುತ್ತದೆ. ಮುರುಗ ತಮಿಳು ಭಾಷೆಯ ದೇವರು ಎಂದು ಹೇಳಲು ಅರ್ಜಿದಾರರಿಗೆ ಸಮರ್ಥನೀಯ ಕಾರಣ ಇರಬಹುದು. ಆದರೆ ಒಂದು ರಾಜ್ಯವಾಗಿ ಅಂತಹ ವಿನಂತಿಯನ್ನು ಪರಿಗಣಿಸಲು ಸಾಧ್ಯವಿಲ್ಲ” ಎಂದು ತಿಳಿಸಿದೆ. ಅಲ್ಲದೆ "ತಮಿಳು ಭಾಷೆಯ ಏಕೈಕ ಪ್ರತಿನಿಧಿ ಎಂದು ಮುರುಗನನ್ನು ಗುರುತಿಸುವುದು ಸೂಕ್ತವಲ್ಲ" ಎಂದು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ಹೇಳಿದೆ. “…ಹೀಗೆ ಮಾಡುವುದರಿಂದ ತಮಿಳಿನ ವಿವಿಧ ಸಾಹಿತ್ಯಿಕ ಕೃತಿಗಳಲ್ಲಿ ಸ್ತುತಿಸಲಾಗಿರುವ ಮುರುಗನಿಗೆ ಹೊರತಾದ ದೇವತೆಗಳನ್ನು ಪರಿಗಣಿಸಿದಂತಾಗುವುದಿಲ್ಲ. ಈ ದೃಷ್ಟಿಯಿಂದ ರಿಟ್‌ ಅರ್ಜಿಯನ್ನು ಪುರಸ್ಕರಿಸುವುದಿಲ್ಲ” ಎಂದು ನ್ಯಾಯಾಲಯ ಆದೇಶ ನೀಡಿದೆ.

ಮುರುಗನನ್ನು ತಮಿಳು ದೇವರೆಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೋರಿದ್ದ ಅರ್ಜಿದಾರರು, ಅಧಿಕೃತ ಗೆಜೆಟ್‌ನಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಲು ಸೂಚಿಸಬೇಕು ಎಂದು ಮನವಿ ಮಾಡಿದ್ದರು. ಜನವರಿ 7 ರಂದು ಈ ಸಂಬಂಧ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ಎಂದು ಕೂಡ ಅರ್ಜಿದಾರರು ತಿಳಿಸಿದ್ದರು.

ತಮಿಳುನಾಡು ಹೆಸರಿನ ಇಂಗ್ಲಿಷ್‌ ರೂಪ ಬದಲಿಸುವಂತೆ ಕೋರಿ ಅರ್ಜಿ

ಮತ್ತೊಂದೆಡೆ ತಮಿಳುನಾಡು ಹೆಸರಿಗೆ ಸಂಬಂಧಿಸಿದ ಅರ್ಜಿಯೊಂದನ್ನು ಕೂಡ ನ್ಯಾಯಾಲಯ ಅದೇ ದಿನ ಆಲಿಸಿತು. ತಮಿಳುನಾಡಿನ ಇಂಗ್ಲಿಷ್‌ ರೂಪ தமிழ்நாடு (TamilNadu) ಬದಲಿಗೆ ʼTahmizhl Naaduʼ or ʼThamizhl Naaduʼ ಎಂದು ಬದಲಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.

"ಅರ್ಜಿದಾರರು ಹೇಳಿದಂತೆ ತಮಿಳಿನಲ್ಲಿ ʼழʼ ಅಕ್ಷರದ ಅನನ್ಯತೆ ಮತ್ತಿತರ ಅಂಶಗಳನ್ನು ಸಂಬಂಧಪಟ್ಟವರು ಪರಿಗಣಿಸುತ್ತಾರೆ ಎಂದು ನಾವು ನಂಬುತ್ತೇವೆ” ಎಂದು ನ್ಯಾಯಾಲಯ ಹೇಳಿತು. ಸಂಗಮ ಸಾಹಿತ್ಯದಲ್ಲಿ ದೊರೆತಿರುವ ಆಧಾರಗಳನ್ನು ಉಲ್ಲೇಖಿಸಿ ಅರ್ಜಿದಾರರು "ழ" ಎಂಬ ತಮಿಳು ಅಕ್ಷರದ ಮಹತ್ವ ತಿಳಿಸಿದ್ದರು. ಆದರೆ ಈ ಅಕ್ಷರ, ಇಂಗ್ಲಿಷ್‌ನ தமிழ்நாடு ಅರ್ಥಾತ್‌ ʼTamil Naduʼ ಎಂಬ ಪದದಲ್ಲಿ ಇಲ್ಲ ಎಂಬುದು ಅವರ ಆತಂಕವಾಗಿತ್ತು. "ழ" ಎಂಬುದು ಉಚ್ಚರಿಸಲು ಕಷ್ಟವಾದರೂ ಸಹ, ಇಂಗ್ಲಿಷ್ ರೂಪದಿಂದ ಅದನ್ನು ಕೈಬಿಡುವ ಅಗತ್ಯವಿಲ್ಲ. ಅಕ್ಷರ ಬದಲಿಸಲು ಕೇವಲ ಉಚ್ಚಾರ ಕಾರಣವಾಗಿರಬಾರದು ಎಂದು ಅವರು ವಾದಿಸಿದರು.

தமிழ் (Tamil) ಪದವು ಭಾಷೆಯೊಂದನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಒಪ್ಪಿದ ನ್ಯಾಯಾಲಯ “ಭಾಷೆಯನ್ನು ಸೂಚಿಸುವ ಪದವನ್ನು ಬೇರೆ ರೂಪ ಅಥವಾ ಸನ್ನಿವೇಶದಲ್ಲಿ ಬಳಸುವ ಅಗತ್ಯವಿಲ್ಲ” ಎಂದು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎಸ್ ಆನಂದಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಅಲ್ಲದೆ ಎಂಟು ವಾರಗಳ ಅವಧಿಯಲ್ಲಿ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.

Related Stories

No stories found.